ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- by Suddi Team
- September 13, 2025
- 35 Views

ಮೈಸೂರು: ಮೇಕೆದಾಟು ಯೋಜನೆ ಜಾರಿಗೆ ತರಲು ತಮಿಳುನಾಡು ಹಾಗೂ ಕೇಂದ್ರ ಸರ್ಕಾರ ತಕರಾರು ಮಾಡಬಾರದು.ನೀರಿನ ಕೊರತೆಯಾದಾಗ ಉಭಯ ರಾಜ್ಯಗಳಿಗೂ ಉಪಯುಕ್ತವಾಗುವ ಯೋಜನೆಯನ್ನು ರಾಜಕೀಯ ಕಾರಣಕ್ಕೆ ವಿರೋಧಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗಗನಚುಕ್ಕಿಯಲ್ಲಿ ಮಾತನಾಡಿದ ಅವರು,ಮೇಕೆದಾಟು ಅಣೆಕಟ್ಟಿನಿಂದ 66 ಟಿಎಂಸಿ ನೀರನ್ನು ಶೇಖರಣೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ತಮಿಳುನಾಡು ಹಾಗೂ ಕರ್ನಾಟಕಕ್ಕೂ ಉಪಯೋಗವಾಗುತ್ತದೆ. ಮಳೆ ಬಾರದಿದ್ದಾಗ ತಮಿಳುನಾಡಿಗೆ ನೀರನ್ನು ಹರಿಸಲು ಮತ್ತು ಮಳೆ ಬಾರದೇ ಹೋದಾಗ ಮಳೆ ನೀರನ್ನು ಸಂಗ್ರಹ ಮಾಡಲು ಅನುಕೂಲವಾಗಲಿದೆ ಎಂದರು.
ಮೇಕೆದಾಟು ಅಣೆಕಟ್ಟು ಯೋಜನೆಗೆ ತಮಿಳುನಾಡು ಏಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ರಾಜಕೀಯಕ್ಕಾಗಿ ಇದನ್ನು ಆಕ್ಷೇಪಿಸುತ್ತಿದ್ದಾರೆ. ರಾಜ್ಯವು 98 ಟಿಎಂಸಿ ನೀರನ್ನು ತಮಿಳುನಾಡಿಗೆ ಕೊಡಬೇಕಿತ್ತು. ಆದರೆ ಇಂದಿನವರೆಗೆ 221 ಟಿಎಂಸಿ ನೀರು ತಮಿಳುನಾಡಿಗೆ ಹೋಗಿದೆ. ನಾವು ಕೊಡಬೇಕಿದ್ದ ನೀರಿಗಿಂತಲೂ 122 ಟಿಎಂಸಿ ನೀರು ಹೆಚ್ಚಾಗಿ ಹರಿದು ಹೋಗಿದೆ. ಮಳೆ ಉತ್ತಮವಾಗಿಯಾದರೆ ನೀರನ್ನು ಕೊಟ್ಟೆ ಕೊಡುತ್ತೇವೆ ಎಂದರು.
ಕಾವೇರಿ ನದಿಯ ಕುರಿತು ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ವ್ಯಾಜ್ಯ ಈಗ ಇಲ್ಲ. ಮಳೆ ಸರಿಯಾಗಿ ಆಗಿದ್ದರೆ ಮಾತ್ರ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಒದಗಿಸಬೇಕೆಂದು ತೀರ್ಮಾನವಾಗಿದೆ. ಮಳೆಯಾಗಿಲ್ಲದಿದ್ದರೆ ಸಂಕಷ್ಟ ಸೂತ್ರ ಜಾರಿಗೆ ಬಂದು,ಅದರಂತೆ ನೀರನ್ನು ಹಂಚಿಕೆ ಮಾಡಲಾಗುವುದು. ಅದೃಷ್ಟವಶಾತ್ ಎರಡು ವರ್ಷವೂ ಒಳ್ಳೆ ಮಳೆಯಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ಈ ವರ್ಷ ವಿದ್ಯುತ್ ಅಭಾವ ಬರಲು ಸಾಧ್ಯವಿಲ್ಲ. ನಮಗೂ ತಮಿಳುನಾಡಿಗೂ ನೀರಿನ ವಿಷಯವಾಗಿ ವಿವಾದವೂ ಬರುವುದಿಲ್ಲ. ಮಳೆ ಸಕಾಲಕ್ಕೆ ಆದರೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.
Related Articles
Thank you for your comment. It is awaiting moderation.
Comments (0)