ಸಿಎಸ್ ಅರ್ ಅನುದಾನದಲ್ಲಿ ಶಾಲೆಗಳ ನಿರ್ಮಾಣ;ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿ ಸಿಎಸ್ ಅರ್ ಅನುದಾನದಲ್ಲಿ ಸರ್ಕಾರಿ ಶಾಲೆಗಳ ನಿರ್ಮಾಣಕ್ಕೆ ಹೊಸ ತೀರ್ಮಾನ ಮಾಡಿದ್ದೇವೆ. ಮುಂದಿನ ಸಚಿವ ಸಂಪುಟದಲ್ಲಿ ಸಿಎಸ್‌ ಆರ್ ಅನುದಾನದಿಂದ ಶಾಲೆಗಳ ನಿರ್ಮಾಣದ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕನಕಪುರದಲ್ಲಿ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದೆ. ಇಂದು ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ನಾವುಗಳು ಇದನ್ನು ತಡೆಯಬೇಕು. ನಾನು ಕೂಡ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋದೆ. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಹಾಗೂ ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ನಾವು ಸಿಎಸ್ ಅರ್ ಅನುದಾನದಲ್ಲಿ ಶಾಲೆಗಳ ನಿರ್ಮಾಣಕ್ಕೆ ಹೊಸ ತೀರ್ಮಾನ ಮಾಡಿದ್ದೇವೆ ಎಂದರು.

“ಮುಂದಿನ ಸಚಿವ ಸಂಪುಟದಲ್ಲಿ ಸಿಎಸ್‌ ಆರ್ ಅನುದಾನದಿಂದ ಶಾಲೆಗಳ ನಿರ್ಮಾಣದ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗುವುದು. ಯಾರು ಶಾಲೆ ನಿರ್ಮಾಣ ಮಾಡುತ್ತಾರೋ ಅವರ ಕಂಪೆನಿಯ ಹೆಸರನ್ನೇ ಇಟ್ಟುಕೊಳ್ಳಬಹುದು ಎಂದು ಹೇಳಿದ್ದೇವೆ. ಆದರೆ ಅತ್ಯುತ್ತಮ ಕಟ್ಟಡ ನಿರ್ಮಾಣ ಮಾಡಬೇಕು ಹಾಗೂ ನಗರ ಮಾದರಿಯಲ್ಲಿ ಸಿಬಿಎಸ್ ಇ ಶಿಕ್ಷಣ ದೊರೆಯಬೇಕು ಎಂಬುದು ನಮ್ಮ ಆಶಯ. ಈಗಾಗಲೇ ಒಂದಷ್ಟು ಶಾಲೆಗಳು ಪ್ರಾರಂಭವಾಗಿವೆ. ಸುಮಾರು 2 ಸಾವಿರ ಶಾಲೆ ನಿರ್ಮಾಣ ನಮ್ಮ ಗುರಿ” ಎಂದರು.

“ಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ವರದಿ ಓದಿದೆ. ಸರ್ಕಾರಿ ಶಾಲೆಗಳನ್ನು ತೊರೆದು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂದು. ಅದಕ್ಕೆ ನಾವು ಸಿಎಸ್ ಆರ್ ಹಣದ ತೊಡಗಿಸುವಿಕೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ 7,800 ಕೋಟಿಯಷ್ಟು ಸಿಎಸ್ ಆರ್ ಹಣ ಲಭ್ಯವಿದೆ ಎಂದು ವರದಿಗಳು ಹೇಳುತ್ತವೆ. ಒಂದಷ್ಟು ಜನ ಉದ್ಯಮಿಗಳು ಇನ್ನೂ ಮನಸು ಮಾಡಿಲ್ಲ. ಕನಕಪುರದಲ್ಲಿ ಟೊಯೋಟಾ ಹಾಗೂ ಪ್ರೆಸ್ಟೀಜ್, ಬಾಷ್ ಸೇರಿದಂತೆ ಇತರೆ ಸಂಸ್ಥೆಗಳ ಮೂಲಕ 10-15 ಕಡೆಗಳಲ್ಲಿ ಶಾಲೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಇವೆಲ್ಲವೂ ಸರ್ಕಾರಿ ಶಾಲೆಗಳು. ನಾನು ನಮ್ಮ ಊರಿನಲ್ಲಿ ಮೂರು ಶಾಲೆಗಳನ್ನು ದತ್ತು ತೆಗೆದುಕೋ ಎಂದು ಮಗಳಿಗೆ ಸೂಚನೆ ನೀಡಿದ್ದೇನೆ. ಈ ಮಾದರಿಯನ್ನು ಇಡೀ ರಾಜ್ಯಾದ್ಯಂತ ವಿಸ್ತರಣೆ ಮಾಡಲು ತೀರ್ಮಾನಿಸಿದ್ದೇವೆ” ಎಂದರು.

“ಉತ್ತಮ ಶಿಕ್ಷಣ ಆಯಾಯ ಊರಿನಲ್ಲಿಯೇ ದೊರೆಯಬೇಕು. ಇಲ್ಲದಿದ್ದರೆ ವಲಸೆ ತಡೆಯಲು ಆಗುವುದಿಲ್ಲ. ನನ್ನನ್ನು ಶಿಕ್ಷಣಕ್ಕಾಗಿ ಬೆಂಗಳೂರಿಗೆ ನಮ್ಮ‌ ತಂದೆ ತಾಯಿ ಕಳಿಸಿದರು. ನಾನು ಮರಳಿ ಊರಿಗೆ ಹೋಗಲೇ ಇಲ್ಲ. ಅದಕ್ಕೆ ಗ್ರಾಮೀಣ ಭಾಗದಲ್ಲಿ ಮೂರು ಪಂಚಾಯತಿಗಳು ಸೇರಿದಂತೆ ಒಂದು‌ ಕೆಪಿಎಸ್ ಶಾಲೆ ನಿರ್ಮಾಣ ಮಾಡಲಾಗುತ್ತದೆ” ಎಂದರು.

“ಶಿಕ್ಷಕರು ಆಧುನಿಕ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಬೇಕು. ಇಲ್ಲದಿದ್ದರೆ ಉತ್ತಮ ಶಿಕ್ಷಣ ನೀಡುವಲ್ಲಿ ಮಕ್ಕಳಿಗೆ ಸರಿಯಾಗಿ ನ್ಯಾಯ ಒದಗಿಸಲು ಆಗುವುದಿಲ್ಲ” ಎಂದು ಶಿಕ್ಷಕ ಸಮುದಾಯಕ್ಕೆ ಡಿಸಿಎಂ ಕರೆ ನೀಡಿದರು.

“ನೀವೆಲ್ಲರೂ ಮಕ್ಕಳಿಗೆ ಶಿಕ್ಷಣ ನೀಡುತ್ತೀರಿ. ನೀವು ನೀಡುವ ಶಿಕ್ಷಣ ಕೇವಲ ತಲೆಗೆ ಹೋಗುವುದು ಮಾತ್ರವಲ್ಲ, ಮಕ್ಕಳ ಹೃದಯಕ್ಕೆ ನಾಟಬೇಕು. ಆಗ ನಿಮ್ಮ ಜವಾಬ್ದಾರಿ ಹೆಚ್ಚುತ್ತದೆ. ಶಿಕ್ಷಣದಲ್ಲಿ ನಾವು ಪ್ರತಿ ಹಂತದಲ್ಲೂ ಅಪ್ ಡೇಟ್ ಆಗುತ್ತಿರಬೇಕಾಗುತ್ತದೆ. ಮೊದಲು ಅಬಾಕಸ್, ನಂತರ ಕ್ಯಾಲ್ಕುಲೇಟರ್, ಆಮೇಲೆ ಕಂಪ್ಯೂಟರ್, ಗೂಗಲ್ ಈಗ ಚಾಟ್ ಜಿಪಿಟಿ ಬಂದಿದೆ. ಹೀಗೆ ಪ್ರತಿ ಹಂತದಲ್ಲೂ ಹೊಸ ತಂತ್ರಜ್ಞಾನ ಬರುತ್ತಿದ್ದು, ನಾವು ಅವುಗಳನ್ನು ಅಳವಡಿಸಿಕೊಳ್ಳಲು ಸಿದ್ಧರಿರಬೇಕು. ಈಗ ಕೃತಕ ಬುದ್ಧಿಮತ್ತೆ ಕಾಲ. ಮುಂದಿನ ಹತ್ತು ವರ್ಷಗಳಲ್ಲಿ ಈ ತ್ರಂತ್ರಜ್ಞಾನ ಮಾಡಲಿರುವ ಬದಲಾವಣೆ ಊಹಿಸಲೂ ಸಾಧ್ಯವಿಲ್ಲ” ಎಂದರು.

Related Articles

Comments (0)

Leave a Comment