ಇವಿಎಂನಿಂದ ಗೆದ್ದಿರುವ ಕಾಂಗ್ರೆಸ್ ಶಾಸಕ,ಸಂಸದರು ರಾಜೀನಾಮೆ ನೀಡಿ ಬ್ಯಾಲೆಟ್ ನಿಂದ ಗೆಲ್ಲಿ; ವಿಜಯೇಂದ್ರ ಸವಾಲು

ಬೆಂಗಳೂರು: ರಾಜ್ಯದಲ್ಲಿ ಬ್ಯಾಕ್ ಟು ಬ್ಯಾಲೆಟ್ ಸಂಸ್ಕೃತಿಗೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ,ಇವಿಎಂ ನಿಂದಲೇ ರಾಜ್ಯದಲ್ಲಿ ಗೆದ್ದಿರುವ ಶಾಸಕರು,ಸಂಸದರು ಮೊದಲು ರಾಜೀನಾಮೆ ನೀಡಿ ಬ್ಯಾಲೆಟ್ ಮೂಲಕ ಆಯ್ಕೆಯಾಗಿ ಎಂದು ಸವಾಲೆಸೆದಿದ್ದಾರೆ.

ಮುಂಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸುವ ರಾಜ್ಯ ಸಚಿವ ಸಂಪುಟದ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇವಿಎಂ ಯಂತ್ರ ಬದಿಗಿಟ್ಟು ಮತ ಪತ್ರ (ಬ್ಯಾಲಟ್ ಪೇಪರ್ ) ಬಳಕೆಗೆ ನಿರ್ಧರಿಸಿರುವ ರಾಜ್ಯ ಕಾಂಗ್ರೆಸ್  ಸರ್ಕಾರದ ಸಂಪುಟದ ತೀರ್ಮಾನ ತಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ಮತಗಳ್ಳತನದಿಂದ ಎಂದು ಸ್ವಯಂ ಪ್ರಾಮಾಣಿಕರಿಸಿಕೊಂಡಂತಿದೆ ಎಂದು ವ್ಯಂಗ್ಯವಾಡಿದರು.

ಇವಿಎಂ ಮತಯಂತ್ರ ಬಳಸಿ ರಾಜ್ಯದಲ್ಲಿ 2೦23ರ ಚುನಾವಣೆಯಲ್ಲಿ ಆರಿಸಿ ಬಂದಿರುವ 136 ಕಾಂಗ್ರೆಸ್ ಶಾಸಕರಿಂದ ಮೊದಲು ರಾಜೀನಾಮೆ ಕೊಡಿಸಲಿ, ರಾಜ್ಯದಿಂದ ಆಯ್ಕೆಯಾದ ಒಂಬತ್ತು ಕಾಂಗ್ರೆಸ್ ಲೋಕಸಭಾ ಸದಸ್ಯರಿಂದ ರಾಜೀನಾಮೆ ಕೊಡಿಸಲಿ ನಂತರ ಮತಪತ್ರ ಬಳಸಿ ಮತ್ತೆ ಚುನಾವಣೆಯಿಂದ ಗೆದ್ದು ಬರಲಿ, ಇಲ್ಲದಿದ್ದರೆ ಮತಗಳ್ಳತನದಿಂದ ನಾವು ಆಯ್ಕೆಯಾಗಿ ಅಧಿಕಾರಕ್ಕೆ ಬಂದಿರುವುದು ಎಂದು ಒಪ್ಪಿಕೊಳ್ಳಲಿ ಎಂದು ಕಾಂಗ್ರೆಸ್ ಗೆ ನೇರ ಸವಾಲೆಸೆದರು.

ದೇಶದಲ್ಲಿ ಅತಿಹೆಚ್ಚು ಅಕ್ರಮ ಮತದಾನ, ಮತಗಳ್ಳತನದ ದೂರುಗಳು, ಚುನಾವಣಾ ದೌರ್ಜನ್ಯದ ಘಟನೆಗಳು, ಚುನಾವಣಾ ಅಕ್ರಮಗಳು ನಡೆದ ಬಗ್ಗೆ ನ್ಯಾಯಾಲಯಗಳಲ್ಲಿ ದೂರುಗಳು ಅತಿ ಹೆಚ್ಚು ದಾಖಲಾಗಿದ್ದರೆ ಅದು ಮತಪತ್ರ ಆಧರಿಸಿ ನಡೆಸಿದ ಚುನಾವಣೆಗಳಲ್ಲಿ , ಅದೂ ಕಾಂಗ್ರೆಸ್ಸಿಗರ ಮೇಲೇ ಹೆಚ್ಚು ಎಂಬುದನ್ನು ಕಾಂಗ್ರೆಸ್ಸಿಗರು ಇತಿಹಾಸದ ಪುಟಗಳನ್ನು ತೆರೆದು ನೋಡಲಿ. ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಕಾರಣವಾಗಿದ್ದು ಅವರು ನಡೆಸಿದ  ಮತಗಳ್ಳತನ ಹಾಗೂ ಅಕ್ರಮ ಚುನಾವಣೆಯ ಹಿನ್ನೆಲೆಯಲ್ಲಿ  ನ್ಯಾಯಾಲಯ ನೀಡಿದ ತೀರ್ಪಿನಿಂದ ಎಂಬ ಇತಿಹಾಸವನ್ನು ದೇಶದ ಜನ ಮರೆತಿಲ್ಲ ಎಂದರು.

ಮತ ಪತ್ರ ಆಧರಿಸಿದ ಚುನಾವಣೆಗಳಲ್ಲಿ ಅಕ್ರಮ ಹಾಗೂ ಮತಗಳ್ಳತನ ನಡೆಸುವುದರಲ್ಲಿ ನಿಷ್ಣಾತರಾದ ಕಾಂಗ್ರೆಸ್ಸಿಗರು ಚುನಾವಣೆಗಳ ನಿರಂತರ ಸೋಲುಗಳಿಂದ ಮೂಲೆಗುಂಪಾಗುತ್ತಿರುವ ಪರಿಸ್ಥಿತಿಯಿಂದ ಕಂಗೆಟ್ಟು ಹೋಗಿದ್ದಾರೆ. ಈ ಕಾರಣದಿಂದಾಗಿ ಆಧಾರ ರಹಿತ, ಅಪ್ರಬುದ್ಧ, ವಿತಂಡ ವಾದವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಅವರು ಮತಗಳ್ಳತನದ ಹೆಸರಿನಲ್ಲಿ ಬಾಲಿಶ ವಿವಾದ ಹುಟ್ಟು ಹಾಕಲು ಹೊರಟಿದ್ದಾರೆ, ಇದನ್ನು ಬೆಂಬಲಿಸಲು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರವನ್ನು ಬಳಸಿ ಚುನಾವಣೆ ನಡೆಸುವುದಾಗಿ ನಿರ್ಣಯ ಕೈಗೊಂಡಿದೆ. ಇಡೀ ದೇಶ, ಜಗತ್ತು ತಂತ್ರಜ್ಞಾನವನ್ನು ಆಧರಿಸಿ ವೇಗವಾಗಿ ನಡೆಯುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಂತ್ರಜ್ಞಾನವನ್ನು ಅಪಮಾನಿಸಿ ಹೆಬ್ಬೆಟ್ಟಿನ ದಿನಗಳನ್ನು ನೆನಪಿಸಲು ಹೊರಟಿದೆ ಎಂದರು.

ಮತಪತ್ರಗಳ ಬಳಕೆಯಿಂದ ಚುನಾವಣಾ ಅಕ್ರಮ ಎಸೆಗಬಹುದು, ಮತಗಟ್ಟೆಗಳಲ್ಲಿ ದೌರ್ಜನ್ಯ ಮೆರೆಯಬಹುದು, ಎಗ್ಗಿಲ್ಲದೇ ಕಳ್ಳ ಮತದಾನವನ್ನೂ ಮಾಡಬಹುದು ಎಂಬ ಏಕೈಕ ಕಾರಣಕ್ಕಾಗಿ ಕಾಂಗ್ರೆಸ್ ಮತ ಪತ್ರ ಆಧರಿಸಿದ ಚುನಾವಣೆಯನ್ನು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಬೆಂಬಲಿಸುತ್ತಿದೆ, ಅದನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲು ಮೊದಲ ಹೆಜ್ಜೆ ಇಡಲು ಹೊರಟಿದೆ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪಾರದರ್ಶಕ ಚುನಾವಣೆಯನ್ನು ಧಿಕ್ಕರಿಸುವುದೇ ಕಾಂಗ್ರೆಸ್‌ನ ಅಜೆಂಡಾ ಹಾಗೂ ಗುರಿಯಾಗಿದೆ ಎಂದು ಟೀಕಿಸಿದರು.

Related Articles

Comments (0)

Leave a Comment