ಬ್ಯಾಕ್ ಟು ಬ್ಯಾಲೆಟ್; ಇವಿಎಂ ಬದಲಿ ಮತಪತ್ರ ಬಳಕೆಗೆ ಸಚಿವ ಸಂಪುಟ ಶಿಫಾರಸ್ಸು..!

ಬೆಂಗಳೂರು: ಬಿಜೆಪಿ ವಿರುದ್ಧ ಮತಕಳವು ಆರೋಪ ಮಾಡಿದ್ದ ಕಾಂಗ್ರೆಸ್ ಇದೀಗ ಕಾಂಗ್ರೆಸ್ ನೇತೃತ್ವದ ಯುಪಿಎ ಜಾರಿಗೆ ತಂದಿದ್ದ ಇವಿಎಂ ಪದ್ದತಿ ಬಿಟ್ಟು ಈ ಹಿಂದೆ ಬಳಸುತ್ತಿದ್ದ ಬ್ಯಾಲೆಟ್ ಪೇಪರ್ ಬಳಕೆಗೆ ನಿರ್ಧರಿಸಿದ್ದು, ಈ ಸಂಬಂಧ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಕೈಗೊಂಡಿದೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಲೇ ಬಂದಿರುವ ಕಾಂಗ್ರೆಸ್ ಇದೀಗ ಬಿಜೆಪಿ ವಿರುದ್ಧ ಮತಕಳವು ಆರೋಪ ಮಾಡಿ ವಿಶೇಷವಾಗಿ ಕರ್ನಾಟಕದ ಮಹದೇವಪುರ ಕ್ಷೇತ್ರದ ಉದಾಹರಣೆಯನ್ನು ನೀಡಿತ್ತು,ಸ್ವತಃ ರಾಹುಲ್ ಗಾಂಧಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮತಕಳವು ಆರೋಪ ಮಾಡಿದ್ದರು ಅದರ ಮುಂದುವರೆದ ಭಾಗವಾಗಿ ರಾಜ್ಯದಲ್ಲಿ ಇವಿಎಂ ಬಳಕೆಗೆ ಬ್ರೇಕ್ ಹಾಕುವ ಚಿಂತನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಂದಿದೆ‌.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಕುರಿತು ಸುದೀರ್ಘ ಚರ್ಚೆ ನಡೆಯಿತು. ಅಂತಿಮವಾಗಿ ಬ್ಯಾಕ್ ಟು ಬ್ಯಾಲೆಟ್ ಗೆ ನಿರ್ಧರಿಸಲಾಯಿತು. ಈ ಕುರಿತು ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್, ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ವ್ಯವಸ್ಥೆ ಬದಲಿಗೆ ಮತಪತ್ರ(ಬ್ಯಾಲೆಟ್ ಪೇಪರ್)ದ ಮೂಲಕ ಚುನಾವಣೆಯನ್ನು ನಡೆಸಲು ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ ಎಂದರು.

ಇತೀಚೆಗೆ ಕರ್ನಾಟಕದಲ್ಲಿ ಮತದಾರರ ಪಟ್ಟಿ ತಯಾರಿಕೆಯಲ್ಲಿಯೇ ಬಹಳ ವ್ಯತ್ಯಾಸಗಳಾಗಿರುವುದನ್ನು ಜನ ಕಂಡುಕೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ದೂರುಗಳು ಬಂದಿವೆ. ದೊಡ್ಡ ಪ್ರಮಾಣದಲ್ಲಿ ಇಲ್ಲದ ಮತದಾರರನ್ನು ಸೇರಿಸಿದ್ದಾರೆ ಎಂಬ ಬಗ್ಗೆ  ಕಳೆದ ಎರಡು ತಿಂಗಳಿನಿಂದ ಚರ್ಚೆಯಾಗುತ್ತಿದ್ದು, ಇವಿಎಂ ಬಗ್ಗೆ ಸಾಮಾನ್ಯವಾಗಿ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ.  ವಿಶ್ವಾಸಾರ್ಹತೆಯ ಕೊರತೆಯನ್ನು ಗಮನಿಸಿ, ಜನರ ಮನಸ್ಥಿತಿ ಹಾಗೂ ಅಭಿಪ್ರಾಯದ ಹಿನ್ನೆಲೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಮೂಲಕ ಚುನಾವಣೆಯಾಗಬೇಕು ಎಂಬ ಉದ್ದೇಶವೇ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಹಿನ್ನೆಲೆಯಾಗಿದೆ ಎಂದರು.

ರಾಜ್ಯ ಚುನಾವಣಾ ಆಯೋಗ ಸ್ವಾತಂತ್ರ ಸಂಸ್ಥೆಯಾಗಿದ್ದು, ಚುನಾವಣಾ ಪಟ್ಟಿ ತಯಾರು ಮಾಡುವ ಜವಾಬ್ದಾರಿ ಅದರದ್ದೇ ಆಗಿದೆ.  ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ 165 ನೇ ಪರಿಚ್ಛೇಧ ಹಾಗೂ ಮುನಿಸಿಪಾಲಿಟಿ ಕಾಯ್ದೆಯ 14 ನೇ ಪರಿಚ್ಛೇಧದಡಿ ಮತ್ತು ಜಿಬಿಎ ಕಾಯ್ದೆಯ  35 ಪರಿಚ್ಛೇಧದಡಿ ಚುನಾವಣೆಗಳು ಹೇಗೆ ನಡೆಯಬೇಕೆಂದು ವಿವರಿಸುತ್ತವೆ. ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಈ ಹೊಸ ನಿಯಮಗಳನ್ನು ಹಾಗೂ ಚುನಾವಣಾ ಪ್ರಕ್ರಿಯೆ ಪದ್ಧತಿಗಳನ್ನು ಶಿಫಾರಸು ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ ಎಂದರು.

Related Articles

Comments (0)

Leave a Comment