ಕೆಎಸ್ಆರ್ಟಿಸಿ ಬಸ್ ಅಪಘಾತಕ್ಕೆ ತಾಂತ್ರಿಕ ಸಮಸ್ಯೆ ಕಾರಣವಲ್ಲ;ಅಕ್ರಂ ಪಾಷ
- by Suddi Team
- August 29, 2025
- 63 Views

ಮಂಗಳೂರು: ಕರ್ನಾಟಕ ಕೇರಳ ಗಡಿ ಭಾಗದ ತಲಪಾಡಿಯಲ್ಲಿ ಕೆಎಸ್ಆರ್ಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟ ಘಟನೆ ನಡೆದಿದ್ದು, ಅಪಘಾತಕ್ಕೆ ಬಸ್ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಕೆಎಸ್ಆರ್ಟಿಸಿ ಸ್ಪಷ್ಟೀಕರಣ ನೀಡಿದೆ.
ಕರ್ನಾಟಕ ಹಾಗೂ ಕೇರಳ ಗಡಿ ಭಾಗದ ತಲಪಾಡಿಯಲ್ಲಿ ಕೆಎಸ್ಆರ್ಟಿಸಿ ಬಸ್ ಅಪಘಾತಕ್ಕೀಡಾಗಿದೆ.ಮುಂದಿದ್ದ ಆಟೋಗೆ ಡಿಕ್ಕಿ ಹೊಡೆದ ಬಸ್ ನಂತರ ಚಾಲಕನ ನಿಯಂತ್ರಣ ತಪ್ಪಿ ಬಸ್ ತುಂಗುದಾಣಕ್ಕೆ ನುಗ್ಗಿ ಬಸ್ಗಾಗಿ ಕಾಯುತ್ತಿದ್ದವರಿಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಆಟೋ ಚಾಲಕ, ಒಂದು ಮಗು, ಬಾಲಕಿ, ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಹಿಂಬದಿ ಆಟೋ ಚಾಲಕನಿಗೆ ಹಾಗು ರಸ್ತೆ ಬದಿ ನಿಂತಿದ್ದ ಇಬ್ಬರು ವ್ಯಕ್ತಿಗಳಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಅಪಘಾತಕ್ಕೆ ತಾಂತ್ರಿಕ ಸಮಸ್ಯೆ ಕಾರಣ ಎನ್ನುವ ಆರೋಪಗಳು ಕೇಳಿಬರುತ್ತಿದ್ದಂತೆ ಈ ಬಗ್ಗೆ ಕೆಎಸ್ಆರ್ಟಿಸಿ ವ್ತವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಸ್ಪಷ್ಟೀಕರಣ ನೀಡಿದ್ದು,ಚಾಲಕರ ಅತಿಯಾದ ವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ತಲಪಾಡಿ ಟೋಲ್ ಗಿಂತ 150 ಮೀಟರ್ ಹಿಂದಕ್ಕೆ ನಿಗಮದ ಚಾಲಕ ನಿಜಲಿಂಗಪ್ಪ ಚಲವಾದಿ( ಬಿ.ಸಂ: 309 )ತಮ್ಮ ವಾಹನವನ್ನು ಅತೀವೇಗವಾಗಿ ಚಾಲನೆ ಮಾಡಿಕೊಂಡು ಬರುವ ಸಮಯದಲ್ಲಿ ಏಕಾಏಕಿ ರಸ್ತೆಗೆ ಅಡ್ಡ ಬಂದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನದ ಬ್ರೇಕ್ ಹಾಕಿದ್ದು, ಅಷ್ಟರಲ್ಲಿ ನಿಗಮದ ವಾಹನ ಆಟೋಗೆ ಮಾರಣಾಂತಿಕ ಡಿಕ್ಕಿಯಾಗಿದ್ದು, ಆ ಸಂದರ್ಭದಲ್ಲಿ ನಿಗಮದ ವಾಹನವು ಡಿಕ್ಕಿಯಾಗಿ ಹಠಾತ್ತನೆ ಸ್ಜೀಡ್ ಆಗಿ ತಿರುಗಿ ನಿಂತಿದ್ದು, ಚಾಲಕರು ಚಾಲನಾ ಸೀಟಿನಿಂದ ಓಡಿ ಹೋಗಿದ್ದು, ವಾಹನವು ಇಳಿಜಾರು ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಅಟೋ ಮತ್ತು ಬಸ್ಸಿಗೆ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿಯಾಗಿ ನಿಂತಿರುತ್ತದೆ.ಸದರಿ ಅಪಘಾತದಲ್ಲಿ ಮುಂದಿನಿಂದ ಡಿಕ್ಕಿಹೊಡೆದ ಅಟೋದಲ್ಲಿ 2 ಜನ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನುಳಿದ ಆಟೋ ಚಾಲಕ ಸೇರಿ 4 ಜನ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಹಿಂಬದಿಯಿಂದ ಡಿಕ್ಕಿಯಾಗಿದ್ದ 2 ಜನ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ ಎಂದು ಘಟನೆಯ ವಿವರ ನೀಡಿದ್ದಾರೆ.
ಬಸ್ ಅನ್ನು ಆಗಸ್ಟ್ 27 ರಂದು ಮಾರ್ಗಸಂಖ್ಯೆಗೆ ನಿಯೋಜಿಸಿದ್ದು ಅಪಘಾತ ಸಮಯದವರೆಗೆ 10 ಸುತ್ತುವಳಿಯಲ್ಲಿ ಒಟ್ಟಾರೆ 540ಕಿಮೀ ಕ್ರಮಿಸಿರುತ್ತದೆ. ಅಲ್ಲದೇ ಈ ವಾಹನವು ಆಗಸ್ಟ್ 26 ರಂದು FC ನವೀಕರಣ ಆಗಿ ಬಂದಿದೆ ಹಾಗಾಗು ಯಾವುದೇ ತಾಂತ್ರಿಕ ದೋಷದಿಂದ ಸಂಭವಿಸಲು ಸಾಧ್ಯವಿರುವುದಿಲ್ಲ.ಅಲ್ಲದೇ ಸದರಿ ಚಾಲಕರು ಸುಮಾರು 14 ವರ್ಷಗಳಿಂದ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಮಾರ್ಗದಲ್ಲಿಯೇ ಸುಮಾರು 03 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಚಾಲಕರ ಅತಿಯಾದ ವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣವಾಗಿದೆ. ತಪ್ಪಿತಸ್ಥ ಚಾಲಕನ ಮೇಲೆ ವಿಚಾರಣೆ ನಡೆಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಗಾಯಗೊಂಡ ಇತರೆ ಸಾರ್ವಜನಿಕರ ವೈದ್ಯಕೀಯ ವೆಚ್ಚವನ್ನು ನಿಗಮವು ಭರಿಸಲಿದೆ. ನಿಗಮವು ಈ ಅಪಘಾತಕ್ಕೆ ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತದೆ.ಅಪಘಾತ ತಪ್ಪಿಸಲು ನಿರಂತರ ತರಬೇತಿ, ತಿಳುವಳಿಕೆ ಮತ್ತು ಜಾಗೃತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾಗ್ಯೂ ಸಹ, ಈ ರೀತಿಯ ಅಪಘಾತಗಳು ಸಂಭವಿಸಿರುವುದು ಅತ್ಯಂತ ದುಃಖಕರ, ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕಲ್ಪಿಸಲಿ ಎಂದು ಕೋರಿದ್ದಾರೆ.
Related Articles
Thank you for your comment. It is awaiting moderation.
Comments (0)