ಮುಂದಿನ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರಾಜ್ಯಕ್ಕೆ ಮೊದಲನೇ ಸ್ಥಾನ ದೊರಕಲಿ; ಸಿಎಂ ಸಿದ್ದರಾಮಯ್ಯ
- by Suddi Team
- August 28, 2025
- 102 Views

ಬೆಂಗಳೂರು: ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳು ರಾಜ್ಯಕ್ಕೆ ಐದನೇ ಸ್ಥಾನವನ್ನು ದೊರಕಿಸಿಕೊಟ್ಟಿದ್ದು,ಮುಂದಿನ ಕ್ರೀಡಾಕೂಟದಲ್ಲಿ ರಾಜ್ಯಕ್ಕೆ ಮೊದಲನೇ ಸ್ಥಾನ ದೊರಕಲೆಂದು ಹಾರೈಸಿದ ಸಿಎಂ ಸಿದ್ದರಾಮಯ್ಯ ರಾಷ್ಟ್ರೀಯ ಕ್ರೀಡಾಕೂಟಗಳ ಪದಕ ವಿಜೇತರಿಗೆ ನಗದು ಪುರಸ್ಕಾರವನ್ನು ಹೆಚ್ಚಿಸುವುದಾಗಿ ಪ್ರಕಟಿಸಿದರು.
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಯುವನಿಕಾ ಸಭಾಂಗಣದಲ್ಲಿ 38ನೇ ರಾಷ್ಟ್ರೀಯ ಕ್ರೀಡಾಕೂಟದ ವಿವಿಧ ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಿ ಪದಕಗಳನ್ನು ಪಡೆದ ಕ್ರೀಡಾ ಪಟುಗಳಿಗೆ ನೇರ ನಗದು ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಅವರು,2015 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಚಿನ್ನದ ಪದಕ ಗೆದ್ದ ವಿಜೇತರಿಗೆ 5 ಲಕ್ಷ , ಬೆಳ್ಳಿ ಪದಕ ಪಡೆದವರಿಗೆ 3 ಲಕ್ಷ ಹಾಗೂ ಕಂಚಿನ ಪದಕ ಗೆದ್ದವರಿಗೆ 2 ಲಕ್ಷ ರೂ. ನೀಡುವುದಾಗಿ ತಿಳಿಸಲಾಗಿತ್ತು ನಮ್ಮ ಸರ್ಕಾರ ಈ ಘೋಷಣೆಯನ್ನು ಜಾರಿಗೆ ತಂದಿದೆ. ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯವರು ಪದಕ ವಿಜೇತರಿಗೆ ನೀಡಲಾಗುವ ನಗದು ಪುರಸ್ಕಾರವನ್ನು ಹೆಚ್ಚಿಸಬೇಕೆಂದು ಕೋರಿದ್ದರು. ಅದರಂತೆ ಮನವಿಯನ್ನು ಪುರಸ್ಕರಿಸಿ, ಗೆದ್ದ ಪ್ರತಿಯೊಬ್ಬ ಪದಕ ವಿಜೇತರಿಗೂ ನಗದು ಪುರಸ್ಕಾರವನ್ನು ನೀಡಲು ತೀರ್ಮಾನಿಸಿರುವುದಾಗಿ ಸಿಎಂ ತಿಳಿಸಿದರು.
ಚಿನ್ನದ ಪದಕ ವಿಜೇತರಿಗೆ 7 ಲಕ್ಷ ರೂ, ಬೆಳ್ಳಿ ಪದಕ ವಿಜೇತರಿಗೆ 5 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 3 ಲಕ್ಷ ರೂ. ನೀಡಲು ಸರ್ಕಾರ ತೀರ್ಮಾನಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳು ರಾಜ್ಯಕ್ಕೆ ಐದನೇ ಸ್ಥಾನವನ್ನು ದೊರಕಿಸಿಕೊಟ್ಟಿದ್ದು, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕ್ರೀಡಾಕೂಟದಲ್ಲಿ ರಾಜ್ಯದ ಕ್ರೀಡಾಪಟುಗಳು 34 ಚಿನ್ನ, 18 ಬೆಳ್ಳಿ ಹಾಗೂ 28 ಕಂಚಿನ ಪದಕಗಳನ್ನು ಗೆದ್ದಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಕ್ರೀಡಾಕ್ಷೇತ್ರಕ್ಕೆ ಸರ್ಕಾರದ ಬೆಂಬಲ:
ಕ್ರೀಡಾಪಟುಗಳು ಪದಕ ಗೆಲ್ಲಲು ಸಹಕರಿಸುವ ಮ್ಯಾನೇಜರ್ ಹಾಗೂ ತರಬೇತುದಾರರಿಗೂ ನಗದು ಪುರಸ್ಕಾರವನ್ನು ನೀಡಲಾಗುವುದು. ರಾಜ್ಯದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಕ್ರೀಡಾಪಟುಗಳ ಎಲ್ಲ ಬೇಡಿಕೆಗಳನ್ನು ಮುಂಚಿನಿಂದಲೂ ಈಡೇರಿಸುತ್ತಾ ಬಂದಿದ್ದೇನೆ. ಕ್ರೀಡೆಯೊಂದಿಗೆ ಶಿಕ್ಷಣವನ್ನೂ ಕೈಗೊಳ್ಳುವಂತೆ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿಗಳು ಸಲಹೆ ನೀಡಿದರು. ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಲು ಆದೇಶ ನೀಡಲಾಗಿದ್ದು, ಈಗಾಗಲೇ ಗ್ರೂಪ್ 1 ನ ಡಿವೈಎಸ್ ಪಿ ಹುದ್ದೆಗೆ ನೇಮಕಾತಿ ನೀಡಲಾಗಿದೆ. ಕ್ರೀಡಾಪಟು ಸುನಿಲ್ ಭಾಟಿಯವರು ಗ್ರೂಪ್ -1 ಸ್ಥಾನ ಸಿಕ್ಕಿದ್ದು ಪೋಲಿಸ್ ಅಬಕಾರಿ ಇಲಾಖೆಯಲ್ಲಿ ಡಿವೈಎಸ್ಪಿ ಯಾಗಿದ್ದಾರೆ. ಬಡ್ತಿಯಾಗಿ ಉನ್ನತ ಹುದ್ದೆಗೆ ಹೋಗುವ ಅವಕಾಶಗಳೂ ಇರುತ್ತವೆ ಎಂದರು.
ಒಲಂಪಿಕ್ಸ್ , ಏಷ್ಯನ್ ಗೇಮ್ಸ್, ಹಾಗೂ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದವರಿಗೆ 5 ಕೋಟಿ ಬಹುಮಾನ:
ಬಜೆಟ್ ನಲ್ಲಿ ಘೋಷಿಸಿರುವಂತೆ ಒಲಂಪಿಕ್ಸ್ , ಏಷ್ಯನ್ ಗೇಮ್ಸ್, ಹಾಗೂ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದವರಿಗೆ 5 ಕೋಟಿ, ಬೆಳ್ಳಿ ಗೆದ್ದವರಿಗೆ 3 ಹಾಗೂ ಕಂಚು ಗೆದ್ದವರಿಗೆ 2 ಕೋಟಿ ರೂ.ಗಳ ಬಹುಮಾನವನ್ನು ನೀಡಲಾಗುವುದು ಇದು ಆಮಿಷವಲ್ಲ, ಪ್ರೋತ್ಸಾಹ.ಬಹುಮಾನ ಗೆದ್ದರೆ ಅದಕ್ಕಿಂತ ಸಂತೋಷ ಕೊಡುವ ವಿಚಾರ ಮತ್ತೊಂದಿಲ್ಲ. ಸೋಲು ಗೆಲುವು ಇದ್ದೇ ಇರುತ್ತದೆ, ಆದರೆ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಸಾಮರ್ಥ್ಯವಿದ್ದರೆ ಮಾತ್ರ ಒಲಂಪಿಕ್ಸ್, ಕಾಮನ್ ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಗುರಿ ಇಟ್ಟುಕೊಂಡು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕೆಂದು ಸಲಹೆ ನೀಡಿದರು.
ಉದ್ಯೋಗ ಮತ್ತು ನಾಡಿನ ಕೀರ್ತಿಯನ್ನು ಹೆಚ್ಚಿಸುವ ಕೆಲಸ ಮಾಡಬೇಕು. ನೀವು ಇಡೀ ರಾಜ್ಯದ ಹೆಮ್ಮೆ. ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದರೆ ಅದು ರಾಜ್ಯಕ್ಕೆ ದೊರೆಯುವ ಗೌರವ ಎಂದರು.
ಒಲಂಪಿಕ್ಸ್ ನಲ್ಲಿ ಭಾಗವಹಿಸಲು ಕ್ರೀಡಾಪಟುಗಳಿಗೆ ತರಬೇತಿ:
ದೇಶದಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. ಕ್ರೀಡಾಪಟುಗಳು ಇನ್ನಷ್ಟು ಎತ್ತರಕ್ಕೆ ಹೋಗಬೇಕು. ಕಾಮನ್ ವೆಲ್ತ್ ಗೇಮ್ಸ್, ಒಲಂಪಿಕ್ಸ್, ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಬೇಕು. ಶ್ರದ್ಧೆ, ಏಕಾಗ್ರತೆಯಿಂದ ಪ್ರಯತ್ನ ಮಾಡಿದರೆ ಕಷ್ಟವೇನಿಲ್ಲ ಎಂದರು. ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರೆ ಎಲ್ಲವೂ ಸಾಧ್ಯ. ಒಲಂಪಿಕ್ಸ್ ನಲ್ಲಿ ಭಾಗವಹಿಸಲು ಕ್ರೀಡಾಪಟುಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಪ್ರತಿ ವರ್ಷ ಅರವತ್ತು ಕ್ರೀಡಾಪಟುಗಳಿಗೆ ತರಬೇತಿ ನೀಡಲು 10 ಲಕ್ಷ ರೂ. ಗಳನ್ನು ಸರ್ಕಾರ ನೀಡುತ್ತಿದೆ ಎಂದರು.
Related Articles
Thank you for your comment. It is awaiting moderation.
Comments (0)