ಸಿಎಂ ಬದಲಾವಣೆ ಹೇಳಿಕೆ; ಶಾಸಕ ಶಿವಗಂಗಾಗೆ ನೋಟಿಸ್ ನೀಡಲು ಮುಂದಾದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
- by Suddi Team
- August 17, 2025
- 41 Views

ಬೆಂಗಳೂರು:ಎಷ್ಟೇ ಸೂಚನೆ,ಎಚ್ಚರಿಕೆ ನೀಡಿದರೂ ರಾಜ್ಯದಲ್ಲಿ ಪದೇ ಪದೇ ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳು ಬರುತ್ತಲೇ ಇವೆ,ನಾಯಕರ ಬಹಿರಂಗ ಹೇಳಿಕೆಗಳಿಗೆ ಬೇಸತ್ತ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ನೋಟಿಸ್ ಅಸ್ತ್ರ ಪ್ರಯೋಗಿಸಿದ್ದು, ವಿವರಣೆ ನೀಡುವಂತೆ ಶಾಸಕ ಬಸವರಾಜ್ ಶಿವಗಂಗಾಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಷಯ ಮಾತನಾಡಿದಂತೆ ಹೈಕಮಾಂಡ್ ನಿಂದ ಕಟ್ಟಪ್ಪಣೆ ಬಂದಿದ್ದರೂ ಡಿಸೆಂಬರ್ ಒಳಗೆ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆ ನೀಡುವ ಮೂಲಕ ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೀನಿಯರ್ ಲೀಡರ್ಸ್ ಎಲ್ಲರೂ ಸಿಎಂ ಸ್ಥಾನದ ಬಗ್ಗೆ ತುಟಿ ಬಿಚ್ಚದ ಸೈಲೆಂಟ್ ಆಗಿದ್ದರೆ ಮೊದಲ ಬಾರಿ ಶಾಸಕರಾಗಿರುವ ಬಸವರಾಜ್ ಶಿವಗಂಗಾ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಕುರಿತು ಹೇಳಿಕೆ ನೀಡಿದ್ದು ಹಿರಿಯರ ಅಸಹನಗೆ ಕಾರಣವಾಗಿದೆ ಇದನ್ನು ಅರಿತ ಡಿಸಿಎಂ ಡಿಕೆ ಶಿವಕುಮಾರ್ ಬೇರೆ ನಾಯಕರು ಆಕ್ಷೇಪ ವ್ಯಕ್ತಪಡಿಸುವ ಮುನ್ನವೇ ನೋಟಿಸ್ ಅಸ್ತ್ರ ಪ್ರಯೋಗಿಸಿ ಪಕ್ಷದಲ್ಲಿ ಬಸವರಾಜ್ ಶಿವಗಂಗಾ ಹೇಳಿಕೆ ವಿಚಾರದ ಚರ್ಚೆ ನಡೆಯುವುದನ್ನು ತಡೆದಿದ್ದಾರೆ.
ಹಲವು ಎಚ್ಚರಿಕೆಗಳ ನಡುವೆಯೂ ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ಹೇಳಿಕೆ ಮುಂದುವರೆಸಿರುವ ಶಾಸಕ ಬಸವರಾಜು ವಿ ಶಿವಗಂಗಾ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಸಿಎಂ ಅಧಿಕಾರ ಮತ್ತಿತರ ವಿಚಾರಗಳ ಬಗ್ಗೆ ಯಾರೂ ಮಾತಾಡಬಾರದು. ಶಾಸಕರು ಪಕ್ಷದ ಶಿಸ್ತು ಪಾಲಿಸಬೇಕು. ಚೌಕಟ್ಟು ಮೀರಬಾರದು. ಅನಗತ್ಯ ಹೇಳಿಕೆಗಳನ್ನು ಕೊಟ್ಟು ಗೊಂದಲ ಮೂಡಿಸಬಾರದು ಎಂದು ಈ ಹಿಂದೆಯೇ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಆದರೂ ಶಿವಗಂಗಾ ಅವರು ಮತ್ತೇ ಹೇಳಿಕೆ ನೀಡಿರುವುದು ಪಕ್ಷದ ಶಿಸ್ತಿನ ಉಲ್ಲಂಘನೆ ಆಗುತ್ತದೆ. ಹೀಗಾಗಿ ಅವರಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
Related Articles
Thank you for your comment. It is awaiting moderation.
Comments (0)