ಅರಣ್ಯವೆಂದು ಸರ್ಕಾರ ಅಧಿಕೃತವಾಗಿ ಘೋಷಿಸಿದ ನಂತರ, ಆ ಪ್ರದೇಶ ಸದಾಕಾಲಕ್ಕೂ ಅರಣ್ಯವೇ ಆಗಿರುತ್ತದೆ; ಈಶ್ವರ ಖಂಡ್ರೆ

ಬೆಂಗಳೂರು: ಒಂದು ಪ್ರದೇಶವನ್ನು ಅರಣ್ಯವೆಂದು ಸರ್ಕಾರ ಅಧಿಕೃತವಾಗಿ ಘೋಷಿಸಿದ ನಂತರ, ಅದು ಸದಾಕಾಲಕ್ಕೂ ಅರಣ್ಯವೇ ಆಗಿರುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ಅರಣ್ಯ ಭೂಮಿ ಒತ್ತುವರಿ ಕುರಿತು ಸ್ಪಷ್ಟೀಕರಣ ನೀಡಿದ ಸಚಿವರು,ಒಮ್ಮ ಅರಣ್ಯ ಎಂದು ಸರ್ಕಾರ ಘೋಷಿಸಿದರೆ ಅದು ಶಾಶ್ವತವಾಗಿ ಅರಣ್ಯ ಭೂಮಿಯೇ ಆಗಿರಲಿದೆ, ಯಾರೇ ಆಗಲಿ, ಯಾವುದೇ ಕಾರಣಕ್ಕೂ ಅಕ್ರಮವಾಗಿ ಅರಣ್ಯ ಪ್ರದೇಶವನ್ನು ಆಕ್ರಮಿಸುವಂತಿಲ್ಲ. ಅರಣ್ಯ ಭೂಮಿಯನ್ನು ಮರಳಿ ವಶಕ್ಕೆ ಪಡೆದು, ಅರಣ್ಯ ಸಂರಕ್ಷಣೆ ಮಾಡಲು ನಮ್ಮ ಇಲಾಖೆ ಬದ್ಧವಾಗಿದೆ. ಅರಣ್ಯ ಕಾನೂನಿನ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.ಮುಂದಿನ ಪೀಳಿಗೆಯ ಹಿತಕ್ಕಾಗಿ ಅರಣ್ಯ ಸಂರಕ್ಷಣೆ ತುಂಬಾ ಮುಖ್ಯ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಬೆಂಗಳೂರು ಕಾಡುಗೋಡಿ ಪ್ಲಾಂಟೇಶನ್‌ನ 120 ಎಕರೆ ಅರಣ್ಯ ಪ್ರದೇಶವನ್ನು ಇತ್ತೀಚೆಗೆ ಮರು ವಶಕ್ಕೆ ಪಡೆದು, ಮತ್ತೆ ಅರಣ್ಯವಾಗಿಸುವ ಕಾರ್ಯ ಕೈಗೊಂಡಿದ್ದೇವೆ.ಮರು ವಶಕ್ಕೆ ಪಡೆದ ಪ್ರದೇಶದಲ್ಲಿ ಯಾವುದೇ ಮನೆಗಳು ಇರಲಿಲ್ಲ. ಈ ಪ್ರದೇಶದಲ್ಲಿ ಯಾವುದೇ ಕೃಷಿ ಚಟುವಟಿಕೆ ಅಥವಾ ಜೀವನಾಧಾರಿತ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಇದು ಸಂಪೂರ್ಣ ತೆರೆದ ಪ್ರದೇಶವಾಗಿದ್ದು, ಭೂ ಮಾಫಿಯಾ ಅವರಿಂದ ಮುಕ್ತಗೊಳಿಸಲಾಗಿದೆ.ಯಾವುದೇ ಸಮುದಾಯದವರ ಮೇಲೂ ಅನ್ಯಾಯವಾಗಿಲ್ಲ. ಅರಣ್ಯ ನಮ್ಮ ಪ್ರಕೃತಿಯ ಆಸ್ತಿ – ಅದನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದರು.

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ಹುದ್ದೆಗಳ ಶೀಘ್ರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವ – ಆನೆ ಸಂಘರ್ಷ ನಿಯಂತ್ರಿಸುವ ಸಲುವಾಗಿ ಆನೆ ನಿರೋಧಕ ಕಂದಕ‌ ನಿರ್ಮಾಣ, ನಿರಂತರ ಗಸ್ತು ತಿರುಗುವುದು, ಕಾಡಾನೆ ಹಾವಳಿ ಇರುವ ಗ್ರಾಮಗಳಲ್ಲಿ ವಾಟ್ಸಾಪ್‌ ಗುಂಪು ರಚಿಸಿ ಆನೆ ಹಾವಳಿ ಕುರಿತು ಸಂದೇಶ ನೀಡುವುದು, ಆನೆ ಸಂಚರಿಸುವ ಪ್ರದೇಶಗಳಲ್ಲಿ ಸೂಚನಾ ಫಲಕ‌ ಅಳವಡಿಸುವಂತಹ ಕಾರ್ಯಗಳನ್ನು‌ ಕೈಗೊಳ್ಳಲಾಗಿದೆ ಎಂದು ವಿವರ ನೀಡಿದರು.

Related Articles

Comments (0)

Leave a Comment