ಜಾಗ ಸ್ವಾಧೀನಪಡಿಸಿಕೊಂಡು ವಿಷ್ಣು ಸ್ಮಾರಕ ಅಭಿವೃದ್ಧಿಪಡಿಸಿ; ಸಿಎಂಗೆ ಶೋಭಾ ಕರಂದ್ಲಾಜೆ ಪತ್ರ
- by Suddi Team
- August 11, 2025
- 71 Views

ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕವನ್ನು ಕಾಪಾಡುವುದಲ್ಲದೇ, ಅದನ್ನು ರಾಷ್ಟ್ರಮಟ್ಟದ ಪ್ರವಾಸಿ ಕೇಂದ್ರವಾಗಿ, ಕಲೆ-ಸಂಸ್ಕೃತಿಯ ಪ್ರತೀಕವಾಗಿ ಕಲಾಗ್ರಾಮವಾಗಿ ಅಭಿವೃದ್ಧಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕನ್ನಡ ಚಲನಚಿತ್ರ ರಂಗಕ್ಕೆ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಕೊಡುಗೆಯ ಬಗ್ಗೆ ಇಡೀ ಕರುನಾಡಿನ ಮನೆಮನಗಳೂ ಮಾತನಾಡುತ್ತವೆ. ಎಲ್ಲರ ಮನೆಮಾತಾದ ಅಂತಹ ಅದ್ಭುತ ನಟಶ್ರೇಷ್ಠರಿಗೆ ಸೂಕ್ತ ಗೌರವ ನೀಡಲಾಗದ, ಅವರ ಸಮಾಧಿಸ್ಥಳವನ್ನು ಉಳಿಸಿಕೊಳ್ಳಲಾಗದ ಸ್ಥಿತಿಗೆ ನಾವು ತಲುಪಿದ್ದೇವೆ ಎನ್ನುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ಬೇಸರ ಹೊರಹಾಕಿದ್ದಾರೆ.
ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದ ಅಭಿಮಾನ್ ಸ್ಟುಡಿಯೋ ಭಾಗವನ್ನು ರಾತ್ರೋರಾತ್ರಿ ಕೆಡವಿ, ಅಸಂಖ್ಯಾತ ಅಭಿಮಾನಿಗಳಿಗೂ ಹಾಗೂ ಅವರ ಅಪೂರ್ವ ಸಾಧನೆಗಳಿಗೂ ಅನ್ಯಾಯ ಮಾಡಿರುವುದು ಅತ್ಯಂತ ನೋವುಂಟುಮಾಡಿದೆ.ಆ ನಿಟ್ಟಿನಲ್ಲಿ, ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದ ಭೂಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡಲೇ ಜಾಗದ ಮಾಲೀಕರಿಂದ ಸ್ವಾಧೀನಪಡಿಸಿಕೊಂಡು, ಅವರಿಗೂ ಸರ್ಕಾರಿ ನಿಯಮಾನುಸಾರ ಪರಿಹಾರ ನ್ಯಾಯಸಮ್ಮತ ನೀಡುವುದಲ್ಲದೇ, ಸ್ಮಾರಕವನ್ನು ಕಾಪಾಡುವುದಲ್ಲದೇ, ಅದನ್ನು ರಾಷ್ಟ್ರಮಟ್ಟದ ಪ್ರವಾಸಿ ಕೇಂದ್ರವಾಗಿ, ಕಲೆ-ಸಂಸ್ಕೃತಿಯ ಪ್ರತೀಕವಾಗಿ ಕಲಾಗ್ರಾಮವಾಗಿ ಅಭಿವೃದ್ಧಿಪಡಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಕನ್ನಡ ನಾಡಿನ ಕಲೆ, ಸಂಸ್ಕ್ರತಿಗಳ ಉಳಿವಿಗೆ ಕೊಡುಗೆ ನೀಡಿದ ಪ್ರತಿಯೊಬ್ಬ ಕಲಾವಿದನ ಘನತೆ-ಗೌರವ ಕಾಪಾಡುವುದು ಕನ್ನಡಿಗರ ಕರ್ತವ್ಯ. ಜನಪ್ರತಿನಿಧಿಯಾಗಿ ಸದಾ ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
Related Articles
Thank you for your comment. It is awaiting moderation.
Comments (0)