ಮೆಟ್ರೋಗೆ ನಿಮ್ಮ ಅನುದಾನದ ಅಂಕಿ-ಅಂಶಗಳ ಬಿಡುಗಡೆ ಮಾಡಿ;ಡಿಸಿಎಂ ಸವಾಲು..!

ಬೆಂಗಳೂರು: ನಮ್ಮ ಮೆಟ್ರೋದ ಎಲ್ಲಾ ಹಂತಗಳಿಗೂ ಎಷ್ಟೆಷ್ಟು ಅನುದಾನ ನೀಡಿದ್ದೇವೆ ಎನ್ನುವ ಅಂಕಿ-ಅಂಶಗಳನ್ನು ಅವರೂ ಬಿಡುಗಡೆ ಮಾಡಲಿ, ನಾನೂ ಬಿಡುಗಡೆ ಮಾಡುತ್ತೇನೆ ಎಂದು ಬಿಜೆಪಿ ನಾಯಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೆಟ್ರೋ ಎರಡನೇ ಹಾಗೂ ಮೂರನೇ ಹಂತಕ್ಕೆ ಮೋದಿಯವರ ಕೊಡುಗೆ ಹೆಚ್ಚಿದೆ ಎಂದು ಬಿಜೆಪಿ ನಾಯಕರ ಹೇಳುತ್ತಿದ್ದಾರೆ, ಆದರೆ ಇವರ ಯಾರ ಕೊಡುಗೆಯೂ ಇಲ್ಲಿ ಇಲ್ಲ. ಇದೆಲ್ಲಾ ಪ್ರಾರಂಭ ಆಗಿದ್ದು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಹಾಗೂ ವಾಜಪೇಯಿ ಅವರು ಪ್ರಧಾನಿ ಆಗಿದ್ದ ಕಾಲದಲ್ಲಿ. ಎಷ್ಟೆಷ್ಟು ಅನುದಾನ ನೀಡಿದ್ದೇವೆ ಎನ್ನುವ ಅಂಕಿಅಂಶಗಳನ್ನು ಅವರೂ ಬಿಡುಗಡೆ ಮಾಡಲಿ, ನಾನೂ ಬಿಡುಗಡೆ ಮಾಡುತ್ತೇನೆ ಎಂದರು.

ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ ರಾಜ್ಯ ಸರ್ಕಾರ ಶೇ. 80 ರಷ್ಟು ವೆಚ್ಚವನ್ನು ಖರ್ಚು ಮಾಡಿದ್ದರೆ, ಕೇಂದ್ರದ ಬಿಜೆಪಿ ಸರ್ಕಾರ ಕೇವಲ ಶೇ.20 ರಷ್ಟನ್ನು ಮಾತ್ರ ಖರ್ಚು ಮಾಡಿದೆ ಅಲ್ಲದೆ ಕೆಲವೊಂದು ಕಡೆ ಶೇ.11 ರಷ್ಟು ಮಾತ್ರ ಖರ್ಚು ಮಾಡಿದೆ ಎಂದು  ಬಿಜೆಪಿ ಸಂಸದರು ಹಾಗೂ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮ ಮೆಟ್ರೋ ಯೋಜನೆಗೆ ಬೇಕಾದ ಜಾಗದ ಭೂಸ್ವಾಧೀನಕ್ಕೆಲ್ಲ ರಾಜ್ಯ ಸರ್ಕಾರವೇ ಸಂಪೂರ್ಣ ಹಣ ನೀಡಿದೆ.ಒಪ್ಪಂದದ ಪ್ರಕಾರ ಕೇಂದ್ರದ ಬಿಜೆಪಿ ಸರ್ಕಾರ ಶೇ. 50 ರಷ್ಟು ನೀಡಬೇಕಾಗಿತ್ತು. ಅದನ್ನೂ ಅವರು ನೀಡಿಲ್ಲ. ಆದರೂ ನಾವು ಈ ರಾಜ್ಯದ, ಬೆಂಗಳೂರಿನ ಜನರ ಹಿತಕ್ಕಾಗಿ ನಾವೇ ಪೂರ್ಣ ಹಣ ವ್ಯಯಿಸಿ ಈ ಕೆಲಸ ಪೂರ್ಣಗೊಳಿಸಿದ್ದೇವೆ ಆದರೂ ಈ ಯೋಜನೆಯನ್ನು ಕೇಂದ್ರದ ಯೋಜನೆ ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು‌

ಬೆಂಗಳೂರು ದೇಶದಲ್ಲಿಯೇ ಹೆಚ್ಚು ತೆರಿಗೆ ಪಾವತಿ ಮಾಡುವ ಎರಡನೇ ನಗರವಾದರೂ ಸಿಗುತ್ತಿರುವ ಅನುದಾನ ಮಾತ್ರ ಬಹಳ ಕಡಿಮೆ”. “ಅಹಮದಾಬಾದ್ ಗೆ ಶೇ.20 ರಷ್ಟು ತೆರಿಗೆ ಪಾಲನ್ನು ನೀಡಲಾಗಿದೆ. ನಮಗೆ ಶೇ10 ರಷ್ಟು ಮಾತ್ರ ನೀಡಲಾಗಿದೆ. ಅದಕ್ಕೆ ದೇಶದ ಇತರೆ ದೊಡ್ಡ ನಗರಗಳಂತೆ ನಮ್ಮನ್ನೂ ಪರಿಗಣಿಸಿ. ಜೊತೆಗೆ ದೇಶದ ರಾಜಧಾನಿ ಸಾಲಿನಲ್ಲಿಟ್ಟು ಬೆಂಗಳೂರನ್ನು ಯೋಚಿಸಿ.‌ ನಾವು ರಾಜಕಾರಣ ಮಾಡುತ್ತಿಲ್ಲ, ಬದಲಾಗಿ ಮನವಿ ಮಾಡುತ್ತಿದ್ದೇವೆ” ಎಂದರು.

“ಕೇಂದ್ರ‌ ಸರ್ಕಾರ ಸಂಪೂರ್ಣವಾಗಿ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದೆ. ಅನುದಾನ ನೀಡಲು ಕಡೆಗಣಿಸಲಾಗಿದೆ. ಆದರೂ ಪ್ರಧಾನಿಗಳಿಗೆ ಗೌರವ ನೀಡಿ ಉದ್ಘಾಟನೆಗೆ ಆಹ್ವಾನ ನೀಡಿದ್ದೇವೆ. ನಾವು ಡಬಲ್ ಡೆಕ್ಕರ್ ಎನ್ನುವ ಮಾದರಿಯುತ ಯೋಜನೆಯನ್ನು ಜಾರಿಗೆ ತಂದಿದ್ದೇವೆ” ಎಂದರು.

“ಬೆಂಗಳೂರಿನಲ್ಲಿ ಪ್ರತಿ ವರ್ಷ ಐಟಿ ಕ್ಷೇತ್ರದಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ. ಐಟಿ ಉದ್ದಿಮೆಗಳು ಇರುವ ಭಾಗಕ್ಕೆ ಅನುಕೂಲವಾಗಲಿ ಎಂದು ಹಳದಿ ಮಾರ್ಗ ಮಾಡಿದ್ದೇವೆ. ಇಂದು ಆ ಮಾರ್ಗ ಉದ್ಘಾಟನೆಯಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಕೂಡ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಆಗಿದ್ದು” ಎಂದರು.

“ಇನ್ಫೋಸಿಸ್, ಡೆಲ್ಟಾ, ಬಯೋಕಾನ್ ಹಾಗೂ ಇತರೇ ಸಂಸ್ಥೆಗಳು ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳಿಗೆ ಹಣ ನೀಡಿದ್ದಾರೆ ಅವರಿಗೆ ಇದೇ ವೇಳೆ ಅಭಿನಂದನೆಗಳನ್ನು ತಿಳಿಸುತ್ತೇನೆ” ಎಂದರು.

Related Articles

Comments (0)

Leave a Comment