ಯೆಲ್ಲೋ ಮೆಟ್ರೋ ರೈಲು ಸಂಚಾರಕ್ಕೆ ಮೋದಿ ಚಾಲನೆ; ಚಾಲಕ ರಹಿತ ಸೇವೆಗೆ ಸದ್ಯದಲ್ಲೇ ಮುನ್ನುಡಿ ಬರೆಯಲಿದೆ ಹಳದಿ ಮಾರ್ಗ

ಬೆಂಗಳೂರು: ಗ್ರೀನ್ ಮೆಟ್ರೋ, ಪರ್ಪಲ್ ಮೆಟ್ರೋ ನಂತರ ಇದೀಗ ಯಲ್ಲೋ ಮೆಟ್ರೋ ಬೆಂಗಳೂರು ಪ್ರಯಾಣಿಕರ ಸೇವೆಗೆ ಸನ್ನದ್ಧವಾಗಿದ್ದು, ಹಳದಿ ಮಾರ್ಗದ ಮೆಟ್ರೋ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಭವಿಷ್ಯದ ಲೋಕೋಪೈಲೆಟ್ ರಹಿತ ಮೆಟ್ರೋ ಮಾರ್ಗ ಇದಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಗಿಗುಡ್ಡ ಸ್ಟೇಷನ್‌‌ನಲ್ಲಿ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ನಡುವಿನ 19.15 ಕಿ.ಮೀ. ಉದ್ದದ ಹಳದಿ ಮಾರ್ಗವನ್ನು ಉದ್ಘಾಟಿಸಿದರು. ಆ ಮೂಲಕ ಬೆಂಗಳೂರು ನಗರದ ಲಕ್ಷಾಂತರ ಜನತೆಯ ಬಹುನಿರೀಕ್ಷಿತ ಯಲ್ಲೋ ಮೆಟ್ರೋ ಮಾರ್ಗದ ಕನಸು ಇಂದು ಈಡೇರಿದಂತಾಗಿದೆ. ಸಂಚಾರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಇದು ಪ್ರಮುಖ ಕೊಡುಗೆಯಾಗುವ ನಿರೀಕ್ಷೆ ಇದೆ.

ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ಕೊಟ್ಟ ಪ್ರಧಾನಿ ಮೋದಿ ಬಳಿಕ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜತೆಯಲ್ಲಿ ಕುಳಿತು ಮೋದಿ ಪ್ರಯಾಣಿಸಿದರೆ ಬಿಜೆಪಿ ನಾಯಕರು ಮೋದಿ ಎದುರಿನ ಸಾಲಿನಲ್ಲಿ ಆಸೀನರಾಗಿದ್ದರು.

ನಂತರ ಜನರು ಮತ್ತು ಮೆಟ್ರೋ ಸಿಬ್ಬಂದಿಯ ಜತೆ ಮೋದಿ ಮಾತುಕತೆ ನಡೆಸಿದರು. ಮೆಟ್ರೋದಲ್ಲಿ ಪ್ರಯಾಣಿಸಲು ಅವಕಾಶ ಲಭಿಸಿದ ವಿದ್ಯಾರ್ಥಿವೃಂದದ ಜತೆ ಕೂಡ ಅವರು ಸಂವಾದ ಮಾಡಿದರು. ಪ್ರಧಾನಿಯವರು ಸಾಗುವ ಮಾರ್ಗದಲ್ಲಿ ಪುಷ್ಪವೃಷ್ಟಿ ಮಾಡಲಾಯಿತು. ಮಳೆ ಇದ್ದರೂ ಜನರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.

ಇಂದು ಉದ್ಘಾಟನೆಯಾದ ಹಳದಿ ಮಾರ್ಗಕ್ಕಾಗಿ ಈವರೆಗೂ 7,616 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಯೆಲ್ಲೋ ಲೇನ್‌ನಲ್ಲಿ 16 ನಿಲ್ದಾಣಗಳಿದ್ದು, 19.15 ಕಿಲೋ ಮೀಟರ್‌‌ ಉದ್ದವಿದೆ. ಆರ್‌.ವಿ. ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಸಧ್ಯ ಈಗ ಮೂರು ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. ಅದರಂತೆ ತಿಂಗಳ ಕೊನೆಯಲ್ಲಿ 4ನೇ ಮೆಟ್ರೋ ಈ ಮಾರ್ಗಕ್ಕೆ ಸೇರಲಿದೆ ಎಂದು ಬಿಎಂಆ‌ರ್‌ಸಿಎಲ್ ಮಾಹಿತಿ ನೀಡಿದೆ. ಸದ್ಯ ಪ್ರತಿ 25 ನಿಮಿಷಕ್ಕೊಂದು ಟ್ರಿಪ್‌ ಇರಲಿದೆ. ನಾಲ್ಕನೇ ರೈಲು ಬಂದ ಮೇಲೆ ಟ್ರಿಪ್ ಅವಧಿ ತಗ್ಗಲಿದೆ ಎನ್ನಲಾಗಿದೆ

ಈಗಾಗಲೇ ನಮ್ಮ ಮೆಟ್ರೋದಿಂದ ಹಸಿರು ಮಾರ್ಗ ಹಾಗೂ ನೇರಳೆ ಮಾರ್ಗದಲ್ಲಿ ಡಿಸ್ಟೆನ್ಸ್‌ ಟು ಗೊ (ಡಿಟಿಜಿ) ವ್ಯವಸ್ಥೆಯಡಿ ಲೋಕೊ ಪೈಲಟ್‌ ಮೆಟ್ರೊಗಳು ಸಂಚರಿಸುತ್ತಿವೆ. ಹಳದಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚರಿಸಲು, ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಅಳವಡಿಸಲಾಗಿದೆ. ಸದ್ಯ ಆರಂಭದಲ್ಲಿ ಲೋಕೊ ಪೈಲಟ್‌ಗಳನ್ನು ನಿಯೋಜಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆ ಸಫಲವಾಗಿದ್ದರೂ ಕೆಲ ದಿನ ಪ್ರಯಾಣಿಕ ಸೇವೆ ನಡೆಸಿದ ನಂತರವೇ ಲೋಕೊ ಪೈಲಟ್‌ಗಳಿಲ್ಲದೇ ಕಾರ್ಯಾಚರಣೆ ನಡೆಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

Related Articles

Comments (0)

Leave a Comment