ಮೆಟ್ರೋ ಕ್ರೆಡಿಟ್ ಇರಲಿ‌ ಬೆಂಗಳೂರು ರಸ್ತೆ ಪರಿಸ್ಥಿತಿ ನೋಡಿ; ಕಾಂಗ್ರೆಸ್ ಗೆ ವಿಜಯೇಂದ್ರ ತಿರುಗೇಟು

ಬೆಂಗಳೂರು:ನಮ್ಮ ಮೆಟ್ರೋ ಯೋಜನೆಯ ಕ್ರಿಡಿಟ್ ತೆಗೆದುಕೊಳ್ಳುವುದನ್ನು ಬಿಟ್ಟು ಮಹಾನಗರಿ ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ಏನಾಗಿದೆ ಎನ್ನುವ ಕುರಿತು ಗಮನ ಹರಿಸಲಿ ಎಂದು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಶಿವಾನಂದವೃತ್ತದ ಸಮೀಪದಲ್ಲಿರುವ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೆಟ್ರೋ 3ನೇ ಹಂತಕ್ಕೂ ಮೋದಿ ಇವತ್ತು ಚಾಲನೆ ಕೊಡಲಿದ್ದಾರೆ. ಐಟಿ ಹಬ್ ಎನಿಸಿದ ಬೆಂಗಳೂರು ನಗರ ಜಾಗತಿಕ ಮನ್ನಣೆ ಪಡೆದಿದೆ. ಮೆಟ್ರೋ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ವೇಗದಲ್ಲಿ ಒದಗಿಸಬೇಕೆಂಬ ಅಪೇಕ್ಷೆ ಪ್ರಧಾನಿಯವರದು ಎಂದರು.

ಮೆಟ್ರೋ ವಿಚಾರದಲ್ಲಿ ಬಿಜೆಪಿ ಹಾಗು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.ರಾಜ್ಯದ ಸಹಭಾಗಿತ್ವವಿದೆ ಆದರೆ ಪೂರ್ಣ ಕ್ರೆಡಿಟ್ ಬಿಜೆಪಿ ಪಡೆಯುತ್ತಿದೆ ಎನ್ನುತ್ತಿದ್ದಾರೆ.ರಾಜ್ಯ ಸರಕಾರ ಕ್ರೆಡಿಟ್ ತೆಗೆದುಕೊಳ್ಳುವುದನ್ನು ಬಿಟ್ಟು ಬೆಂಗಳೂರಿನ ರಸ್ತೆ ಪರಿಸ್ಥಿತಿ ಏನಾಗಿದೆ ಎಂಬುದನ್ನು ಗಮನಿಸಲಿ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ನಿಂದ ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಿಂದಿನಿಂದಲೂ ಇದೆ. ಹಿಂದಿನ ಸರಕಾರಗಳು ದೂರದೃಷ್ಟಿಯಿಂದ ಕೆಲಸ ಮಾಡಿಲ್ಲ; ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಇಲ್ಲವೆಂದರೆ ಅದಕ್ಕೆ ಇಲ್ಲಿನ ಆಡಳಿತ ವೈಫಲ್ಯವೇ ಕಾರಣ. ಬೆಂಗಳೂರು ಮಹಾನಗರಕ್ಕೆ ಯಾವ ವೇಗದಲ್ಲಿ ಮೂಲಭೂತ ಸೌಕರ್ಯಗಳು ಆಗಬೇಕಿತ್ತೋ ಆ ವೇಗ ಪಡೆದುಕೊಂಡಿಲ್ಲ; ಮೋದಿ ಅವರು ಇಚ್ಛಾಶಕ್ತಿ ಮತ್ತು ಬೆಂಗಳೂರು ಕುರಿತಂತೆ ಆಸಕ್ತಿ ತೋರುತ್ತಿದ್ದು, ವೇಗದಲ್ಲಿ ಕಾರ್ಯಕ್ರಮಗಳು ನಡೆದಿವೆ ಎಂದರು.

Related Articles

Comments (0)

Leave a Comment