ಮತಗಳ್ಳತನದ ಆರೋಪಕ್ಕೆ ಸಾಕ್ಷಿ ಒದಗಿಸಲಾಗದಿದ್ದರೆ ರಾಜಕೀಯ ನಿವೃತ್ತಿಯಾಗುತ್ತೀರಾ;ಬೊಮ್ಮಾಯಿ ಸವಾಲು

ಬೆಂಗಳೂರು: ಬಿಜೆಪಿ ವಿರುದ್ಧ ಮತಗಳ್ಳತನದ ಆರೋಪ ಮಾಡಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಯಾವುದೇ ದಾಖಲೆ, ಪ್ರಮಾಣಪತ್ರ ನೀಡದೆ ಹಿಟ್ ಅಂಡ್ ರನ್ ಮಾಡುತ್ತಿದ್ದು,ನೀವು ಮಾಡಿರುವ ಆರೋಪ ಸಾಬೀತಾಗದಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೀರಾ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಂವಿಧಾನ ಬದ್ದ ಸಂಸ್ಥೆಗಳ ಮೇಲೆ ಆರೊಪ ಮಾಡಿ ಲೋಕತಂತ್ರವನ್ನು ನಿಷ್ಕ್ರೀಯ ಮಾಡಲು ಹೊರಟಿದ್ದಾರೆ.ತಾವು ಮಾಡಿರುವ ಆರೋಪಕ್ಕೆ  ಚುನಾವಣಾ ಆಯೋಗಕ್ಕೆ ಅಫಿಡವಿಟ್ ಕೊಡದೇ ಪಲಾಯನ ಮಾಡಿದ್ದಾರೆ.ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಬಾರಿ ಸೋತಿದ್ದರಿಂದ ರಾಹುಲ್  ಗಾಂಧಿ ನಾಯಕತ್ವದ ಮೇಲೆ ಕಾಂಗ್ರೆಸ್ ನಲ್ಲಿ ಅಪಸ್ವರ ಇದೆ. ಅದನ್ನು ಮರೆಮಾಚಲು ರಾಹುಲ್ ಗಾಂಧಿ ಸಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರು ಡೇಂಜರಸ್ ಗೇಮ್ ಆಡುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗುವಂತಹ ಆಟ ಆಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿ ಚುನಾವಣೆಯಲ್ಲಿಯೂ ಇಡೀ ದೇಶದ ಎಲ್ಲಾ ಕ್ಷೇತ್ರಗಳಲ್ಲಿಯೂ ಹೊಸ ಮತದಾರರು ಸೇರಿಸುತ್ತಲೇ ಬಂದಿದ್ದಾರೆ. ಮಹಾದೇವಪುರ ವಿಧಾನಸಭೆ ಕ್ಷೇತ್ರದಲ್ಲಿ 2009 ರಲ್ಲಿ  ಒಂದು ಲಕ್ಷಕ್ಕಿಂತ ಹೆಚ್ಚು ಜನ ಸೇರ್ಪಡೆಯಾಗಿದ್ದಾರೆ. ಆಗ ಯುಪಿಎ ಸರ್ಕಾರ ಇತ್ತು. ಯುಪಿಎ ಸರ್ಕಾರ ಹೆಚ್ಚು ಮಾಡಿದೆ ಎಂದು ಯಾರಾದರು ಆರೋಪ ಮಾಡಿದ್ದರಾ? ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗ ಪ್ರತಿ ಬೂತನಲ್ಲಿ ಏಜೆಂಟ್ ಒನ್ ಏಜೆಂಟ್ 2 ಅಂತ ಎಲ್ಲ ಪಕ್ಷದವನ್ನೂ ನೇಮಿಸುತ್ತದೆ. ಅವರನ್ನು ಮುಂದಿಟ್ಟುಕೊಂಡು ಮತದಾರರ ಪಟ್ಟಿ ಸೇರಿಸುತ್ತಾರೆ. ಆಗ ಕಾಂಗ್ರೆಸ್ ಏಜೆಂಟರು ಇರಲಿಲ್ಲವಾ ? ರಾಹುಲ್ ಗಾಂಧಿ ಅವರನ್ನು ಕೇಳಬೇಕಿತ್ತು. ಚುನಾವಣಾ ಆಯೋಗ ಅದನ್ನು ರಾಹುಲ್ ಗಾಂಧಿಯನ್ನು ಕೇಳಿತ್ತು. ಅವರಿಗೇ ಈಗಲೂ ಆಯೋಗ ಅಫಿಡವಿಟ್ ಕೊಡಿ ಅಂತ ಕೇಳಿದ್ದಾರೆ‌ ಅವರು ಹಿಟ್ ಆಂಡ್  ರನ್ ಮಾಡುತ್ತಿದ್ದಾರೆ. ಅವರಿಗೆ ಸತ್ಯ ಬೇಕಿಲ್ಲ‌ ಎಂದು ವಾಗ್ದಾಳಿ ನಡೆಸಿದರು.

ಆಯೋಗಕ್ಕೆ ಅಫಿಡವಿಟ್ ಕೊಡಲಿ:

ರಾಹುಲ್ ಗಾಂಧಿ ಪ್ರತಿನಿಧಿಸಿದ್ದ ವಯನಾಡು ಕ್ಷೇತ್ರದ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಿ. ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿದ್ದಕ್ಕೆ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡಿರುವುದಕ್ಕೆ ರಾಹುಲ್ ಗಾಂಧಿ ಜವಾಬ್ದಾರಿ ಹೆಚ್ಚಿದೆ ಅವರು ದಾಖಲೆ ನೀಡಬೇಕು. ಕಾಂಗ್ರೆಸ್ ನವರು ಎನ್ ಜಿಒ ಗಳಿಗೆ ಔಟ್ ಸೋರ್ಸ್ ಮಾಡಿದ್ದಾರೆ. ಅವರು ಕೊಟ್ಟ ಮಾಹಿತಿ ಆಧಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇವಿಎಂ ಆರೋಪ ಮಾಡಿದ್ದರು‌ ಅದರಲ್ಲಿ  ಸತ್ಯ ಹೊರ ಬಿದ್ದ ಮೇಲೆ ಅವರು ಇಗ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ  ಬೆಂಗಳೂರಿನಲ್ಲಿಯೇ ಇದ್ದರೂ ಚುನಾವಣಾ ಆಯೋಗಕ್ಕೆ ಆಪಿಡವಿಟ್ ಕೊಡಲು ಯಾಕೆ ಹೊಗಲಿಲ್ಲ ಎಂದು ಪ್ರಶ್ನಿಸಿದರು.

ಒಂದು ಕಡೆ ಮಹಾರಾಷ್ಟ್ರದಲ್ಲಿ ಫೇಕ್ ಮತದಾರರನ್ನು ಸೇರಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಸರಿ ಮಾಡುವ ಪ್ರಕ್ರಿಯೆ ಆರಂಭಿಸಿದರೆ ಅದನ್ನು ವಿರೋಧಿಸುತ್ತಾರೆ. ಚುನಾವಣಾ ಆಯೋಗ ಏನು ಮಾಡಬೇಕು. ನೀವು ಏನು ದಾಖಲೆ ಕೊಡುತ್ತೀರಿ ? ನೀವು ಮಾಡಿರುವ ಆರೋಪ ಸಾಬೀತಾಗದಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೀರಾ ಎಂದು ಸವಾಲು ಹಾಕಿದರು.

 

Related Articles

Comments (0)

Leave a Comment