ಮಹದೇವಪುರದಲ್ಲಿ ಮತಗಳ್ಳತನ ಆರೋಪ; ರಿಯಾಲಿಟಿ ಚೆಕ್ ಮೂಲಕ ರಾಹುಲ್ ಗಾಂಧಿಗೆ ತಿರುಗೇಟು
- by Suddi Team
 - August 9, 2025
 - 261 Views
 
                                                          ಬೆಂಗಳೂರು: ಮಹದೇವಪುರದಲ್ಲಿ ಸಕ್ರಮವಾಗಿಯೇ ಚುನಾವಣೆ ಮಾಡಿದ್ದೇವೆ. ನಮ್ಮ ಪಕ್ಷಕ್ಕೆ ಅಲ್ಲಿ ಸಹಜ ಬೆಳವಣಿಗೆ ಇದೆ,ನಾವು ಚುನಾವಣೆಯಲ್ಲಿ ಗೋಲ್ಮಾಲ್ ಮಾಡಿ ಗೆದ್ದಿದ್ದೇವೆ ಎಂದು ಆರೋಪ ಮಾಡಿ 7 ಉದಾಹರಣೆ ಕೊಟ್ಟಿದ್ದಾರೆ. ಇದರ ರಿಯಾಲಿಟಿ ಚೆಕ್ ಮಾಡಿದ್ದೇವೆ ಎಂದು ಮಹದೇವಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮಾಡಿರುವ ಎಲ್ಲ ಆರೋಪಗಳಿಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ದಾಖಲೆಗಳೊಂದಿಗೆ ಉತ್ತರಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇಷ್ಟು ದಿನ ಇವಿಎಂ ಬೈಯುತ್ತಿದ್ದರು. ಈಗ ಮತದಾರರ ಪಟ್ಟಿಗೆ ಬಂದಿದ್ದಾರೆ.ಬಿಜೆಪಿಯವರು ಚುನಾವಣಾ ಆಯೋಗದ ಜೊತೆ ಸೇರಿ ಗೋಲ್ಮಾಲ್ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ. ಅಕ್ರಮ ಎಸಗುತ್ತಿದ್ದಾರೆ ಎಂದಿದ್ದಾರೆ. ಅದರಲ್ಲಿ ಮಹದೇವಪುರದ ಕುರಿತು ಪಿಪಿಟಿ ಪ್ರಸೆಂಟೇಷನ್ ಮಾಡಿದ್ದಾರೆ. 40,009 ನಕಲಿ ಮತ್ತು ಅಸಿಂಧು ಮತಗಳಿವೆ; ಒಂದೇ ವಿಳಾಸದ 10,452 ಬಲ್ಕ್ ಮತದಾರರು, ಫಾರ್ಮ್ 6ರ (ಹೊಸ ಮತದಾರ) ದುರ್ಬಳಕೆ-33692, ಡುಪ್ಲಿಕೇಟ್ ಮತದಾರರ ಸಂಖ್ಯೆ 11,965 ಇದೆ. 4132 ಅಸಮರ್ಪಕ ಫೋಟೊ ಇರುವ ಮತದಾರರಿದ್ದಾರೆ ಎಂಬ ಆರೋಪ ಮಾಡಿ 7 ಉದಾಹರಣೆ ಕೊಟ್ಟಿದ್ದಾರೆ. ಇದರ ರಿಯಾಲಿಟಿ ಚೆಕ್ ಮಾಡಿದ್ದೇವೆ. ಗುರುಕಿರೀಟ್ ಸಿಂಗ್ ಹೆಸರು 4 ಸಾರಿ ಮತದಾರರ ಪಟ್ಟಿಯಲ್ಲಿದೆ. ಅವರು ತಮ್ಮ ಹೆಸರು ಸೇರ್ಪಡೆಗೆ 4 ಬಾರಿ ಅರ್ಜಿ ಸಲ್ಲಿಸಿದಾಗ ತಿರಸ್ಕರಿಸಲ್ಪಟ್ಟಿತ್ತು. ಆದರೆ, ಮತದಾರರ ಪಟ್ಟಿಯಲ್ಲಿ ಬೇರೆಬೇರೆ ಕಡೆ ಕಾಣಿಸಿಕೊಂಡಿದೆ ಎಂದು ವಿವರ ನೀಡಿದರು. 3 ಕಡೆ ಹೆಸರು ರದ್ದತಿಗೆ ಕೋರಿದ್ದಾರೆ ಎಂದು ವಿವರ ನೀಡಿದರು.
ಲಕ್ನೋದ ಆದಿತ್ಯ ಶ್ರೀವಾಸ್ತವ 19 ವರ್ಷ ಇದ್ದಾಗ ಲಕ್ನೋದಲ್ಲಿ ಹೆಸರು ಸೇರ್ಪಡೆಯಾಗಿದೆ. ಬಳಿಕ ಕೆಲಸದಲ್ಲಿದ್ದ ಮುಂಬೈನಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ, ಬಳಿಕ ಬೆಂಗಳೂರಿನಲ್ಲಿ ಹೆಸರು ಸೇರಿಸಿ ಮತ ಚಲಾಯಿಸಿದ್ದಾರೆ. ಇವರು ಕೂಡ ಫಾರ್ಮ್ 7 ಮೂಲಕ ಬದಲಾವಣೆಗೆ ಅರ್ಜಿ ಕೊಟ್ಟವರು ಎಂದು ವಿವರಿಸಿದರು. ನಕಲಿ ವಿಳಾಸದ ಚೆಕ್ ಮಾಡಿದ್ದು, 13 ಜನ ಸಿಕ್ಕಿದ್ದಾರೆ. ಇವರು ವಿಳಾಸ ಕೊಟ್ಟರೂ ಸೇರಿಸಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಬಲ್ಕ್ ಮತದಾರರ ಕುರಿತ ಆರೋಪ ಸರಿಯಲ್ಲ ಎಂದು ವಿಡಿಯೋ ಮೂಲಕ ಮಾಹಿತಿ ಕೊಟ್ಟರು. 2 ಕಡೆ ಮತ ಹಾಕಿದ್ದಾರೆ ಎಂದು ರಾಹುಲ್ ಆರೋಪಿಸಿದ್ದು, ಅವನ್ನೂ ತಪಾಸಣೆ ಮಾಡಿದ್ದೇವೆ. ಅವರು ಒಂದೇ ಕಡೆ ಮತ ಹಾಕಿದ್ದಾರೆ ಎಂಬ ವಿವರ ಲಭಿಸಿದ್ದಾಗಿ ತಿಳಿಸಿದರು.
2008ರಲ್ಲಿ ಮಹದೇವಪುರ ಹೊಸ ಕ್ಷೇತ್ರ ರಚನೆ ಆಗಿದೆ. ಹಳೆ ವರ್ತೂರು ಕ್ಷೇತ್ರ ಮಹದೇವಪುರ, ಕೆ.ಆರ್.ಪುರ, ಸಿವಿ ರಾಮನ್ ನಗರ- ಹೀಗೆ 3 ಕ್ಷೇತ್ರಗಳಾಗಿ ಪರಿವರ್ತನೆಗೊಂಡಿತು. ಅಲ್ಲಿಂದೀಚೆಗೆ 4 ಬಾರಿ ವಿಧಾನಸಭೆ- ಲೋಕಸಭಾ ಚುನಾವಣೆ ನಡೆದಿದೆ. 4 ಬಾರಿಯೂ ಬಿಜೆಪಿ ಗೆದ್ದಿದೆ. 2008ರಲ್ಲಿ 2,75,328 ಮತದಾರರಿದ್ದರು. 1,46,404 ಮತಗಳು ಚಲಾವಣೆಯಾಗಿದ್ದವು.2009ರ ಲೋಕಸಭಾ ಚುನಾವಣೆಯಲ್ಲಿ 3,14,000 ಮತದಾರರಿದ್ದು, 1,50,080 ಜನರು ಮತ ಚಲಾಯಿಸಿದ್ದರು. 2013 ವಿಧಾನಸಭೆಯಲ್ಲಿ 3,68,210 ಜನರು ಮತದಾರರಾಗಿದ್ದರು. 2,26,749 ಜನರು ಮತ ಚಲಾಯಿಸಿದ್ದಾರೆ, 2014 ಲೋಕಸಭೆ, 2018ರ ವಿಧಾನಸಭಾ ಚುನಾವಣೆ, 2019ರ ಲೋಕಸಭೆ ಚುನಾವಣೆ ಮತದಾನ ಕುರಿತು ಮಾಹಿತಿ ಹಂಚಿಕೊಂಡರು. 2023ರ ಅಸೆಂಬ್ಲಿಯಲ್ಲಿ 6,07,135 ಜನ ಮತದಾರರಿದ್ದು, 3,29,841 ಜನರು ಮತ ಚಲಾಯಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ 6,59,733 ಮತದಾರರಿದ್ದರು. 3,51,535 ಜನರು ಮತ ಚಲಾಯಿಸಿದ್ದರು. ಈಗ 6,80,514 ಜನ ಮತದಾರರು ಮಹದೇವಪುರ ಕ್ಷೇತ್ರದಲ್ಲಿ ಇದ್ದಾರೆ ಎಂದರು.
ವಲಸೆ ಬರುವವರು ಹೆಚ್ಚಿದ್ದಾರೆ. ಹೀಗಾಗಿ ಮತದಾರರ ಸಂಖ್ಯೆ ಗಣನೀಯವಾಗಿ ಜಾಸ್ತಿ ಆಗುತ್ತದೆ. ಹೊರ ಹೋಗುವವರ ಸಂಖ್ಯೆಯೂ ಗಣನೀಯವಾಗಿದೆ. 3 ಬಾರಿ ಲೋಕಸಭೆ- 3 ಬಾರಿ ವಿಧಾನಸಭೆಗೆ ಬಿಜೆಪಿಗೆ 1 ಲಕ್ಷಕ್ಕಿಂತ ಹೆಚ್ಚು ಮತ ಬಂದಿದೆ. ಬಿಜೆಪಿ ಮತಪ್ರಮಾಣ ಹೆಚ್ಚುತ್ತ ಸಾಗಿದೆ.2019ರ ಚುನಾವಣೆಯಲ್ಲೂ ಲೋಕಸಭೆಯಲ್ಲಿ ಪಿ.ಸಿ.ಮೋಹನ್ 69,974 ಮತಗಳ ಅಂತರದಿಂದ ಗೆದ್ದಿದ್ದರು. ಮಹದೇವಪುರದಲ್ಲಿ ನಾವು 72,559 ಲೀಡ್ ಕೊಟ್ಟಿದ್ದೆವು. ಈ ಸಾರಿ 1,14,046 ಮತಗಳ ಲೀಡ್ ಅನ್ನು ಮಹದೇವಪುರ ಕೊಟ್ಟಿದೆ. 32,707 ಮತಗಳ ಅಂತರದಿಂದ ಪಿ.ಸಿ.ಮೋಹನ್ ಅವರು ಗೆದ್ದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪವನ್ನು ತಳ್ಳಿಹಾಕಿದರು.
ವರುಣಾದಲ್ಲೂ 00 ಮನೆ ನಂಬರ್:
ವರುಣಾ ವಿಧಾನಸಭಾ ಕ್ಷೇತ್ರದ ಪಾರ್ಟ್ ನಂಬರ್ 8ರಲ್ಲಿ 00 ಮನೆ ನಂಬರ್ ಇರುವ ಕುರಿತಂತೆ ಅವರು ಮಾಹಿತಿ ತಿಳಿಸಿದರು. ಇದಕ್ಕೆ ದಾಖಲೆಗಳನ್ನು ನೀಡಿದರು. ಹಾಗಿದ್ದರೆ ಸಿದ್ದರಾಮಯ್ಯರೂ ನಕಲಿ ಮತದಾರ ಅಲ್ಲವೇ? ಎಂದು ಅರವಿಂದ ಲಿಂಬಾವಳಿ ಪ್ರಶ್ನಿಸಿದರು. ಇದೊಂದು ಉದಾಹರಣೆ ಮಾತ್ರ. ನನಗೆ ರಾಹುಲ್ ಗಾಂಧಿ ಥರ ಆರು ತಿಂಗಳು ಸಿಕ್ಕಿಲ್ಲ; ಕೇವಲ 24 ಗಂಟೆಯಲ್ಲಿ ಇದೆಲ್ಲ ಸಿದ್ಧಪಡಿಸಿದ್ದೇನೆ ಎಂದರು.
ರಾಹುಲ್ ಗಾಂಧಿ ದೆಹಲಿಯಲ್ಲಿ ಮತ್ತು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಆಪಾದನೆಗಳನ್ನು ಮಾಡಿದ್ದಾರೆ. ಎಸ್.ಎಂ.ಕೃಷ್ಣ ಅವರು ರಾಹುಲ್ ಗಾಂಧಿಯವರ ಬಗ್ಗೆ ‘ಮೈಂಡ್ ಫುಲ್ ಆಫ್ ಇಮ್ಮೆಚೂರಿಟಿ’ ಎಂದು ಒಂದು ಮಾತು ಹೇಳಿದ್ದರು. ರಾಹುಲ್ ಗಾಂಧಿಯವರ ಯೋಚನೆ ಸಂಪೂರ್ಣ ಅಪಕ್ವವಾಗಿದೆ ಎಂದಿದ್ದರು. ಅದನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದರು.
ಚಾಮರಾಜಪೇಟೆ, ಶಿವಾಜಿನಗರದಲ್ಲೂ ಡಬಲ್ ಎಂಟ್ರಿ:
ಚಾಮರಾಜಪೇಟೆಯಲ್ಲಿ ಪಾರ್ಟ್ ಸಂಖ್ಯೆ 45, ಪಾರ್ಟ್ ನಂಬರ್ 47ರಲ್ಲಿ ಆಯಿಷಾ ಬಾನು ಹೆಸರಿದೆ. ಇದು ನಕಲಿ ಮತದಾರರ- ಡಬಲ್ ಎಂಟ್ರಿ ವಿವರ. ಕಾಂಗ್ರೆಸ್ಸಿನವರು ಎರಡು ಕಡೆ ಮಾಡಿರುತ್ತಾರೆ ಎಂದು ತಿಳಿಸಿದರು. ಶಿವಾಜಿನಗರದ ಪಾರ್ಟ್ ನಂಬರ್ 169, ಪಾರ್ಟ್ ನಂಬರ್ 11ರಲ್ಲಿ ರೆಹಮತುಲ್ಲ ಹೆಸರಿದೆ ಎಂದು ಕ್ರಮಾಂಕದ ಜೊತೆಗೆ ವಿವರಿಸಿದರು. ಬಿಹಾರದಿಂದ ಚುನಾವಣಾ ಆಯೋಗವು ಕ್ಲೀನಿಂಗ್ ಶುರು ಮಾಡಿದೆ. ಅದು ಮುಂದುವರೆಯಲಿ ಎಂದು ಆಗ್ರಹಿಸಿದರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)