ಬೆಂಗಳೂರು ವಿಭಜನೆ,ಟನಲ್ ರಸ್ತೆ ನಿರ್ಮಾಣದ ವಿರುದ್ಧ ಹೋರಾಟಕ್ಕೆ ಬಿಜೆಪಿ ಸಜ್ಜು..!
- by Suddi Team
 - July 27, 2025
 - 65 Views
 
                                                          ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರನ್ನು ಐದು ವಿಭಾಗ ಮಾಡುವ ಸರ್ಕಾರದ ನಿರ್ಧಾರ ಹಾಗು ಭೂಗತ ಟನೆಲ್ ರಸ್ತೆ ನಿರ್ಮಾಣದ ನಿರ್ಣಯದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವ ನಿರ್ಧಾರವನ್ನು ರಾಜ್ಯ ಬಿಜೆಪಿ ಕೈಗೊಂಡಿದ್ದು ಅಗತ್ಯ ಬಿದ್ದರೆ ಕಾನೂನು ಹೋರಾಟಕ್ಕೂ ಸಜ್ಜಾಗುತ್ತಿದೆ.
ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಬೆಂಗಳೂರನ್ನು ಐದು ವಿಭಾಗವನ್ನಾಗಿ ಮಾಡುತ್ತಿರುವುದು,ಟನಲ್ ರಸ್ತೆ ನಿರ್ಮಾಣ ಸೇರಿದಂತೆ ನಗರದ ಜ್ವಲಂತ ಸಮಸ್ಯೆಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬೆಂಗಳೂರು ಮಹಾನಗರದ ಬಿಜೆಪಿಯ ಎಲ್ಲ ಹಿರಿಯ ಶಾಸಕರ ಸಭೆ ನಡೆಸಲಾಯಿತು. ಬಿಬಿಎಂಪಿ ಚುನಾವಣೆ ಸೋಲುವ ಭಯದಿಂದ ಪಾಲಿಕೆ ವಿಭಜನೆಗೆ ಮುಂದಾಗಿದ್ದಾರೆ ಇದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಹಾಗು ಟನಲ್ ರಸ್ತೆ ಟೋಲ್ ಹೊಂದಿದ್ದು ಜನತೆಗೆ ಭಾರವಾಗಲಿದೆ ಇದೆಲ್ಲವನ್ನೂ ಜನರಿಗೆ ತಿಳಿಸಬೇಕು, ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳ ವಿರುದ್ಧ ಸದನದ ಹೊರಗೆ ಮತ್ತು ಒಳಗೆ ಹೋರಾಟ ನಡೆಸಬೇಕು ಎನ್ನುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆ ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಈ ನಗರದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ. ರಾಜ್ಯ ಸರಕಾರ, ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಇದ್ದರೂ ನಗರದ ಅಭಿವೃದ್ಧಿ ವಿಚಾರದಲ್ಲಿ ವೈಜ್ಞಾನಿಕವಾಗಿ ಆಲೋಚಿಸಿಲ್ಲ; ಭೂಗತ ಟನೆಲ್ ರಸ್ತೆ, ಬಿಬಿಎಂಪಿಯನ್ನು 5 ವಿಭಾಗವಾಗಿ ಮಾಡುವ ಅವೈಜ್ಞಾನಿಕ ತೀರ್ಮಾನವು ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಪೂರಕವಾಗಿಲ್ಲ ಇದರ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದರು.
ಬೆಂಗಳೂರು ಮಹಾನಗರವನ್ನು 5 ವಿಭಾಗವಾಗಿ ಮಾಡುವ ಮೂಲಕ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ಇದು ನಿಶ್ಚಿತವಾಗಿ ಅಭಿವೃದ್ಧಿಗೆ ಪೂರಕವಲ್ಲ. ಮುಂಬೈ ಮತ್ತಿತರ ಮಹಾನಗರಗಳಲ್ಲಿ ಇಂಥ ಪ್ರಯೋಗ ಮಾಡಿ ಅವೆಲ್ಲವೂ ವಿಫಲವಾಗಿವೆ. ಬಿಜೆಪಿ ಇದನ್ನು ಹಿಂದೆ ವಿರೋಧಿಸಿದ್ದು, ಇಂದು ಮತ್ತು ಮುಂದೆಯೂ ವಿರೋಧಿಸಲಿದೆ, ಇದರ ವಿರುದ್ಧ ಹೋರಾಟ ಮಾಡಲಿದೆ ಎಂದರು.
ಭೂಗತ ಟನೆಲ್ ರಸ್ತೆಯ ಸಾಧಕ ಬಾಧಕವನ್ನು ಚರ್ಚೆ ಮಾಡದೆ, ಆತುರಾತುರವಾಗಿ ಟೆಂಡರ್ ಕರೆಯಲು ಹೊರಟಿದ್ದು ಖಂಡಿತ ಸರಿಯಲ್ಲ; ಬ್ಲ್ಯಾಕ್ ಲಿಸ್ಟ್ ಆದ ಕಂಪೆನಿಗಳನ್ನು ಸೇರಿಸಿಕೊಂಡು ಆತುರದಿಂದ ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಹೊರಟಿದ್ದು, ಇದರ ಹಿಂದೆ ಅಭಿವೃದ್ಧಿಯ ಚಿಂತನೆ ಇದೆಯೇ ಅಥವಾ ಬೇರೆ ಆಲೋಚನೆಗಳಿದೆಯೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ ನಾವು ಜನರ ಜತೆ ನಿಂತು ಸರ್ಕಾರದ ಈ ನಿರ್ಧಾರ ಖಂಡಿಸಿ ಹೋರಾಡುತ್ತೇವೆ ಎಂದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಬೆಂಗಳೂರನ್ನು ಅತಂತ್ರವಾಗಿ ಐದು ಭಾಗ ಮಾಡಲಾಗಿದೆ. ರಾಜಕೀಯ ದೃಷ್ಟಿಯಿಂದ ಹಾಗೂ ಕಾಂಗ್ರೆಸ್ ಗೆಲ್ಲಬೇಕೆಂಬ ಗುರಿಯಿಂದ ವಿಭಜನೆ ಮಾಡಲಾಗಿದೆ. ಐದು ಪಾಲಿಕೆಗಳ ನಡುವೆ ತಾರತಮ್ಯ ಉಂಟಾಗಲಿದೆ. ಇದರ ವಿರುದ್ಧ ಕೋರ್ಟ್ ಮೊರೆ ಹೋಗಿ ಹೋರಾಟ ಮಾಡಲಾಗುವುದು ಎಂದರು.
ಕಪ್ಪು ಪಟ್ಟಿಯಲ್ಲಿರುವ ಗುತ್ತಿಗೆದಾರರಿಗೆ ಸುರಂಗ ರಸ್ತೆ ಯೋಜನೆಯನ್ನು ನೀಡಲಾಗುತ್ತಿದೆ. ಸುರಂಗ ರಸ್ತೆಗೆ ಟೋಲ್ ಕೂಡ ಇರುವುದರಿಂದ ಶ್ರೀಮಂತರು ಮಾತ್ರ ಇದನ್ನು ಬಳಸಬಹುದು. ಜನಸಾಮಾನ್ಯರಿಗೆ ಇದರಿಂದ ಪ್ರಯೋಜನವಿಲ್ಲ. ಅಭಿವೃದ್ಧಿಗೆ ನಮ್ಮ ಸಹಕಾರವಿದೆ. ಆದರೆ ದುಡ್ಡು ಕೊಳ್ಳೆ ಹೊಡೆಯುವ ಯೋಜನೆಗಳನ್ನು ವಿರೋಧಿಸುತ್ತೇವೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಭೂಕಂಪದ ನಾಡು ಮಾಡಬಾರದು ಎಂದರು.
ಹೆಬ್ಬಾಳ ಮೇಲ್ಸೇತುವೆ ಬಳಿಯ ಜಂಕ್ಷನ್ಗೆ ಎಲ್ಲ ಕಡೆಯಿಂದ ವಾಹನಗಳು ಬರುತ್ತವೆ. ಅಂತಹ ಜಾಗವನ್ನು ಖಾಸಗಿ ಭೂ ಮಾಲೀಕರಿಗೆ ನೀಡಲು ಸರ್ಕಾರ ಮುಂದಾಗಿದೆ. ಇದನ್ನು ವಿರೋಧಿಸಿ ಸದನದಲ್ಲಿ ಚರ್ಚಿಸಲಾಗುವುದು. ಇ ಖಾತಾ ವಿಚಾರದಲ್ಲಿ ಜನರಿಗೆ ತೊಂದರೆ ನೀಡಲಾಗುತ್ತಿದೆ. ಹಣ ಲೂಟಿ ಮಾಡಲು ಬೆಂಗಳೂರನ್ನು ಬಳಸಬಾರದು ಎಂದರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)