ಕೆಎಸ್‌ಆರ್‌ಟಿಸಿಗೆ ಐದು ವೋಲ್ವೋ ಐರಾವತ ಕ್ಲಬ್ ಕ್ಲಾಸ್ 2.0 ಬಸ್‌ಗಳ ಸೇರ್ಪಡೆ..!
- by Suddi Team
- July 25, 2025
- 771 Views

ಬೆಂಗಳೂರು: ಪ್ರೀಮಿಯಂ ಸೇವೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್‌ಟಿಸಿ) 5 ನೂತನ ವೋಲ್ವೋ ಐರಾವತ ಕ್ಲಬ್ ಕ್ಲಾಸ್ 2.0 ಬಸ್‌ಗಳಿಗೆ ಚಾಲನೆ ನೀಡಲಾಯಿತು.
ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಕೇಂದ್ರ ಕಛೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಿಗಮದ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ ಅವರು ಐದು ಐರಾವತ ಕ್ಲಬ್ ಕ್ಲಾಸ್ 2.0 ವೋಲ್ವೋ ವಾಹನಗಳನ್ನು ಉದ್ಘಾಟನೆ ಮಾಡಿದರು.
2024ರ ಡಿಸೆಂಬರ್ ತಿಂಗಳಿನಲ್ಲಿ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಮುಖ್ಯಮಂತ್ರಿಗಳು 20 ಐರಾವತ ಕ್ಲಬ್ ಕ್ಲಾಸ್ 2.0 ವಾಹನಗಳಿಗೆ ಚಾಲನೆ ನೀಡಿದ್ದು, ಅದರ ಮುಂದುವರಿದ ಭಾಗವಾಗಿ ಮತ್ತೆ 5 ಐರಾವತ ಕ್ಲಬ್ ಕ್ಲಾಸ್ 2.0 ವಾಹನಗಳನ್ನು ಕೆಳಕಂಡ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸಲು ಯೋಜಿಸಲಾಗಿದೆ.
ಮಾರ್ಗ:
ಬೆಂಗಳೂರು – ತಿರುಪತಿ – 1
ಮಂಗಳೂರು – ಬೆಂಗಳೂರು – 2
ಮೈಸೂರು – ಮಂತ್ರಾಲಯ – 2
ಬಸ್‌ನ ವಿಶೇಷತೆ:
ಈ ಬಸ್‌ಗಳು 15 ಮೀಟರ್ ಉದ್ದವಿದ್ದು, ಪ್ರಯಾಣಿಕರಿಗೆ 2×2 ಸಂರಚನೆಯೊಂದಿಗೆ 51 ಆಸನಗಳ ವ್ಯವಸ್ಥೆ ಹೊಂದಿವೆ. ಶಕ್ತಿಯುತ ಹಾಲೋಜನ್ ಹೆಡ್‌ಲೈಟ್‌ಗಳು ಮತ್ತು ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು (DRL) ಹೊಂದಿರುತ್ತವೆ. ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಸ್ಕ್ಯಾಂಡಿನೇವಿಯನ್ ಶೈಲಿಯ ಎಕ್ಸ್ಟೀರಿಯರ್ಸ್ ಅನ್ನು ಹೊಂದಿದ್ದು, ಇದು ದೃಶ್ಯಾವಳಿಯಲ್ಲಿ ಆಕರ್ಷಕ ಎಸ್ಥೆಟಿಕ್ಸ್ ಅನ್ನು ನೀಡುತ್ತದೆ.
ವಾಯುಗತಿ ಶಾಸ್ತ್ರದ ವಿನ್ಯಾಸವು ಉತ್ತಮ ಇಂಧನ ದಕ್ಷತೆಯನ್ನು ಒದಗಿಸುತ್ತದೆ. ನೂತನ ಆವಿಷ್ಕಾರದ ಇಂಜಿನ್ ತಂತ್ರಜ್ಞಾನವು ಶ್ರೇಷ್ಠ ಕಾರ್ಯಕ್ಷಮತೆ ಮತ್ತು ಸುಧಾರಿತ ಇಂಧನ ದಕ್ಷತೆಯನ್ನು (KMPL) ಒದಗಿಸುತ್ತದೆ.
ಒಟ್ಟು ಬಸ್ ಉದ್ದದಲ್ಲಿ ಶೇ. 3.5 ಏರಿಕೆಯಿಂದ ಪ್ರಯಾಣಿಕರ ಆಸನಗಳ ನಡುವೆ ಹೆಚ್ಚು ಸ್ಥಳವನ್ನು ಒದಗಿಸುತ್ತದೆ. ಒಟ್ಟು ಬಸ್ ಎತ್ತರದಲ್ಲಿ ಶೇ. 5.6 ಏರಿಕೆಯಿಂದ ಹೆಚ್ಚಿನ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ. ಚಾಲಕರ ದೃಶ್ಯಾವಧಿಯನ್ನು ಸುಧಾರಿಸಲು ಮತ್ತು ಬ್ಲೈಂಡ್ ಸ್ಪಾಟ್ ಕಡಿಮೆ ಮಾಡಲು ಮುಂಭಾಗದ ಗಾಜು ಶೇ. 9.5 ಅಗಲವಾಗಿದೆ.
ಯುಎಸ್ಬಿ ಮತ್ತು ಸಿ-ಟೈಪ್ ಹೊಂದಿರುವ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳಿವೆ. ದೊಡ್ಡ ಏರ್ ಡಕ್ಟ್ ಹೊಂದಿರುವುದರಿಂದ ಹೆಚ್ಚಿನ ಏರ್ ಕಂಡೀಷನಿಂಗ್ ವ್ಯವಸ್ಥೆಯಿದ್ದು, ಇದರಿಂದ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ಮತ್ತು ಉತ್ತಮ ಆಸನಗಳು ಮತ್ತು ಉತ್ತಮ ಗುಣಮಟ್ಟದ ವಸ್ತುಗಳಿಂದ ಆದ ಅನುಕೂಲವನ್ನು ಒದಗಿಸುತ್ತದೆ.
ಪ್ಯಾಂಟೊಗ್ರಾಫಿಕ್ ವಿನ್ಯಾಸವು ವಾಹನ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ. ರಾತ್ರಿ ಸಮಯದಲ್ಲಿ ಚಾಲನೆ ಮಾಡುವಾಗ ಹೆಚ್ಚಿನ ಸುರಕ್ಷತೆಗಾಗಿ ಹಿಂಬದಿ ಫಾಗ್ ಲೈಟ್‌ಗಳು, ಚಾಲಕರ ಅನುಕೂಲತೆಗಾಗಿ ಸುಲಭವಾಗಿ ಕೈಗೆಟುಕುವ ನಿಯಂತ್ರಕಗಳು ಮತ್ತು ಸ್ವಿಚ್‌ಗಳನ್ನು ಹೊಂದಿವೆ.
ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (FAPS) ಸ್ಥಾಪಿಸಲಾಗಿದೆ. ಬೆಂಕಿ ಅಪಘಾತಗಳ ಸಂದರ್ಭದಲ್ಲಿ ನೀರು ಸಿಂಪಡಿಸಲು ಪ್ರಯಾಣಿಕರ ಆಸನಗಳ ಎರಡೂ ಬದಿಗಳಲ್ಲಿರುವ 30 ನೊಝಲ್‌ಗಳ ನೀರು ಪೈಪುಗಳನ್ನು ಅಳವಡಿಸಲಾಗಿದೆ. ಚಾಲಕರು ಪ್ರಯಾಣಿಕರ ಬಾಗಿಲಿನಿಂದ ಪಾದಚಾರಿಗಳನ್ನು ಸುಲಭವಾಗಿ ನೋಡಬಹುದಾದ ಕಾರಣ, ಪಾದಚಾರಿ ಸುರಕ್ಷತೆಯೂ ಸುಧಾರಿಸಲಿದೆ.
Related Articles
Thank you for your comment. It is awaiting moderation.
Comments (0)