ಸಾರಿಗೆ ಸಿಬ್ಬಂದಿಗೆ ಆರ್ಥಿಕ ಭದ್ರತಾ ಖಾತ್ರಿ ನೀಡಿದ್ದೇವೆ; ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ನಮ್ಮ ಸಾರಿಗೆ ಸಿಬ್ಬಂದಿ ಹಗಲಿರುಳೆನ್ನದೆ ಸಂಸ್ಥೆಗಾಗಿ ಶ್ರಮಿಸಿರುವುದರಿಂದ ಸಾರಿಗೆ ಸಂಸ್ಥೆಯ ಇಂದು ಉನ್ನತ ಸ್ಥಾನದಲ್ಲಿದ್ದು, ಮೃತ ಸಿಬ್ಬಂದಿಯ ಕುಟುಂಬವನ್ನು ನೋಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿಯಾಗಿದೆ. ಅದಕ್ಕಾಗಿ ನಾವು ನಮ್ಮ ಸಿಬ್ಬಂದಿಗೆ ಆರ್ಥಿಕ ಭದ್ರತಾ ಖಾತ್ರಿ ನೀಡಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಶಾಂತಿನಗರದಲ್ಲಿರುವ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಅನುಕಂಪದ ಆಧಾರದ ಮೇಲೆ ಇಂದು 45 ಅಭ್ಯರ್ಥಿಗಳಿಗೆ ಕರಾಸಾ ಪೇದೆ ಹುದ್ದೆಯ ನೇಮಕಾತಿ ಆದೇಶವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿತರಣೆ ಮಾಡಿದರು. ನಂತರ ಕರ್ತವ್ಯದಲ್ಲಿರುವಾಗ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಓರ್ವ ಸಿಬ್ಬಂದಿಯ ಅವಲಂಬಿತರಿಗೆ 1 ಕೋಟಿ ರೂ. ಗಳ ಚೆಕ್ ನೀಡಿದರು. ಬಳಿಕ ಇತರ ಕಾರಣಗಳಿಂದ‌ ಮೃತರಾದ 26 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ 10.00 ಲಕ್ಷ ರೂ. ಗಳಂತೆ ಒಟ್ಟು 2.60 ಕೋಟಿ ರೂ. ಪರಿಹಾರದ ಚೆಕ್ ವಿತರಿಸಿದರು.

ನಂತರ ಮಾತನಾಡಿದ ಸಚಿವರು, ಸಾರಿಗೆ ಸಿಬ್ಬಂದಿ ಸಂಸ್ಥೆಗಾಗಿ ಶ್ರಮಿಸಿರುವುದರಿಂದ ಸಾರಿಗೆ ಸಂಸ್ಥೆಯು ಇಂದು ಉನ್ನತ ಸ್ಥಾನದಲ್ಲಿದೆ. ಮೃತ ಸಿಬ್ಬಂದಿಗಳ ಕುಟುಂಬವನ್ನು ನೋಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿ. ಈ ನಿಟ್ಟಿನಲ್ಲಿ ಮೃತರ ಅವಲಂಬಿತರಿಗೆ ನಾಲ್ಕು ನಿಗಮಗಳಲ್ಲಿ ಅನುಕಂಪದ ಆಧಾರದ ಮೇಲೆ 1,000 ನೌಕರಿ ನೀಡಿರುವುದಾಗಿ ತಿಳಿಸಿದರು.

ಅಪಘಾತದಿಂದ ಮೃತಪಟ್ಟ ಸಿಬ್ಬಂದಿಯ ಅವಲಂಬಿತರಿಗೆ ಸಾಂತ್ವಾನ ಹೇಳಿ, ಸಿಬ್ಬಂದಿ ಜೀವ ಅಮೂಲ್ಯವಾದದ್ದು, ಅವರನ್ನು ಮರಳಿ ಕರೆತರಲು ಸಾಧ್ಯವಾಗುವುದಿಲ್ಲ. ಆದರೆ, ಅವರ ಅವಲಂಬಿತರ ಮುಂದಿನ ಜೀವನವು ಆರ್ಥಿಕವಾಗಿ ಭದ್ರತೆಯಿಂದ ಕೂಡಿರಲಿ ಎಂಬ ಸದ್ದುದೇಶದಿಂದ ಸಾರಿಗೆ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು.

ಇಂದು ವಿತರಿಸಲಾಗಿರುವ ಪರಿಹಾರದ ಮೊತ್ತವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳ ವಿದ್ಯಾಬ್ಯಾಸ, ಮನೆ ನಿರ್ಮಾಣ ಮತ್ತು ಇತರ ಶುಭ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದ ಸಚಿವರು, ಬಡ್ಡಿ ವ್ಯಾಮೋಹಕ್ಕೆ  ಒಳಗಾಗಿ ಪರಿಹಾರ ಧನವನ್ನು ಯಾರಿಗೂ ನೀಡದಂತೆ ಕಿವಿ ಮಾತು ಹೇಳಿದ‌ರು.

Related Articles

Comments (0)

Leave a Comment