- Uncategorized
- Like this post: 0
ಜುಲೈ 25ರಿಂದ ಆಗಸ್ಟ್ 23ರ ವರೆಗೆ ರಂಭಾಪುರಿ ಜಗದ್ಗುರುಗಳವರ 34ನೇ ವರ್ಷದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನ
- by Suddi Team
- July 23, 2025
- 125 Views

ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು): ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಜುಲೈ 25ರಿಂದ ಆಗಸ್ಟ್ 23ರ ವರೆಗೆ ತಮ್ಮ 34ನೇ ವರ್ಷದ ತ್ರಿಕಾಲ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನ ನಡೆಸುವರು. ಪ್ರತಿ ದಿನ ಬೆಳಿಗ್ಗೆ 8.30 ಗಂಟೆಗೆ ಸೇವಾಕರ್ತರು ಹಾಗೂ ಭಕ್ತಾದಿಗಳು ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.
ಶ್ರಾವಣ ಶುದ್ಧ ಚೌತಿ ಜುಲೈ 28 ಸೋಮವಾರದಂದು ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪುಣ್ಯ ಸ್ಮರಣೋತ್ಸವ ಜರುಗಲಿದ್ದು ಖಾಂಡ್ಯ ಮತ್ತು ಜಾಗರ ಹೋಬಳಿಯ ಶಿಷ್ಯ ಸಮುದಾಯದವರು ಪೂಜಾ ಹಾಗೂ ಅನ್ನ ದಾಸೋಹ ಸೇವೆ ನಡೆಸುವರು. ಶ್ರಾವಣ ಶುದ್ಧ ಅಷ್ಟಮಿ ಆಗಸ್ಟ್ 1 ಶುಕ್ರವಾರದಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರ ಪುಣ್ಯ ಸ್ಮರಣೆ ನಡೆಯಲಿದ್ದು ಆಲ್ಲೂರು ಹೋಬಳಿಯ ವೀರಶೈವ ಸಮಾಜದಿಂದ ಪೂಜಾ ಹಾಗೂ ಅನ್ನ ದಾಸೋಹ ಸೇವೆ ನಡೆಯುವುದು. ವರ್ಷದ 365 ದಿನ ರುದ್ರಾಭಿಷೇಕ ಹಾಗೂ ಶ್ರಾವಣ ಮಾಸ ಪರ್ಯಂತರ ಸಿಹಿ ಪ್ರಸಾದ ವಿತರಣೆ ಸೇವೆಯನ್ನು ಭದ್ರಾವತಿಯ ಲಿಂ. ಎಸ್.ಜಿ.ಶಿವಶಂಕರಯ್ಯನವರ ಮಕ್ಕಳು ನೆರವೇರಿಸುವರು. ಬೆಂಗಳೂರಿನ ಲತಾ ಜಿಗಳೂರ ಇವರು ಪುರಾಣ ಪೂಜಾ ಸೇವೆ, ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ ಇವರು ಗದ್ದಿಗೆ ಹೂವಿನ ಸೇವೆ, ಗದಗ-ಬೆಟಗೇರಿಯ ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರ ಟ್ರಸ್ಟಿನವರು ದಾಸೋಹ ಸೇವೆ. ಭದ್ರಾವತಿಯ ಎಸ್.ಎಸ್.ಉಮೇಶ್ ಇವರು ಹೂವಿನ ಸೇವೆ, ಬೆಂಗಳೂರಿನ ಆರ್.ಗಣೇಶಕುಮಾರ್ ಇವರು ಹೂವಿನ ಸೇವೆ ಹಾಗೂ ಚಿಕ್ಕಮಗಳೂರಿನ ಶ್ರೀ ದೇವ ಮತ್ತು ಕೋ. ಇವರು ಪತ್ರಿಕಾ ಮುದ್ರಣ ಸೇವೆ ವಹಿಸಿಕೊಂಡಿದ್ದಾರೆ.
ಶ್ರಾವಣ ಮಾಸ ಪರ್ಯಂತರವಾಗಿ ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರತಿ ದಿನ ಸಂಜೆ 7 ಗಂಟೆಗೆ “ಶ್ರೀ ಜಗದ್ಗುರು ರೇಣುಕ ವಿಜಯ” ಪುರಾಣ ಪ್ರವಚನ ಮಾಡುವರು. ಇದೇ ಸಂದರ್ಭದಲ್ಲಿ ಆಗಮಿಸುವ ಪಟ್ಟಾಧ್ಯಕ್ಷರಿಂದ ಹಾಗೂ ವಾಗ್ನಿಗಳಿಂದ ನುಡಿಸೇವೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಪ್ರತಿ ಸೋಮವಾರ ಹಾಗೂ ಗುರುವಾರದಂದು ಶ್ರೀ ರಂಭಾಪುರಿ ಜಗದ್ಗುರುಗಳು ಸಭೆಗೆ ಆಗಮಿಸಿ ಶುಭಾಶೀರ್ವಾದ ಸಂದೇಶ ದಯಪಾಲಿಸುವರು.
ಪ್ರತಿ ನಿತ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ, ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ, ಶಕ್ತಿಮಾತೆ ಶ್ರೀ ಚೌಡೇಶ್ವರಿ-ಶ್ರೀ ಭದ್ರಕಾಳಿ, ಶ್ರೀ ಪಾರ್ವತಿ ಅಮ್ಮನವರಿಗೆ. ಲಿಂಗೈಕ್ಯ ಜಗದ್ಗುರುಗಳವರ ಗದ್ದುಗೆಗಳಿದೆ ಮಹಾರುದ್ರಾಭಿಷೇಕ, ಅಷ್ಟೋತ್ತರ ಮಹಾ ಮಂಗಲ ವಿಶೇಷ ಪೂಜೆ ಜರುಗುತ್ತವೆ. ಆಗಮಿಸುವ ಭಕ್ತಾದಿಗಳಿಗೆ ಬೆಳಗಿನ ಫಲಾಹಾರ, ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದದ ವ್ಯವಸ್ಥೆ ಇರುತ್ತದೆ. ಸಮಸ್ತ ಭಕ್ತಾದಿಗಳು ಈ ಮೇಲಿನ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಪೀಠದ ಪ್ರಕಟಣೆಯಲ್ಲಿ ತಿಳಿಸಿದೆ.
Comments (0)