ಮನುಷ್ಯ ಜೀವನವನ್ನು ಶುದ್ಧಗೊಳಿಸುವುದೇ ವೀರಶೈವ ಧರ್ಮದ ಗುರಿ; ಶ್ರೀ ರಂಭಾಪುರಿ ಜಗದ್ಗುರುಗಳು

ದಾವಣಗೆರೆ:ಮನುಷ್ಯ ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ ಮೌಲ್ಯಾಧಾರಿತ ಜೀವನ ಬದುಕಿಗೆ ಬಲ ತರುತ್ತದೆ. ಮನುಷ್ಯ ಜೀವನವನ್ನು ಸುಂದರ ಶುದ್ಧಗೊಳಿಸುವುದೇ ವೀರಶೈವ ಲಿಂಗಾಯತ ಧರ್ಮದ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ಶ್ರೀ ಮದಭಿನವ ರೇಣುಕ ಮಂದಿರ ಸಭಾಂಗಣದಲ್ಲಿ ಜರುಗಿದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು,

ಮನಸ್ಸು ಬುದ್ದಿ ಮತ್ತು ಭಾವನೆಗಳು ಬೆಳೆದು ಬಂದಾಗ ಬದುಕು ಸಮೃದ್ಧ ಬದುಕಿಗೆ ಜೀವಂತಿಕೆಯ ಮತ್ತು ಸಜ್ಜನಿಕೆಯನ್ನು ತುಂಬಿದ ಶ್ರೇಯಸ್ಸು ವೀರಶೈವ ಲಿಂಗಾಯತ ಸಮಾಜಕ್ಕಿದೆ. ಪ್ರಾಪಂಚಿಕ ಸಂಬಂಧಗಳು ಕೆಲವು ಸಂದರ್ಭದಲ್ಲಿ ಕೆಡಬಹುದು. ಆದರೆ ಗುರು ಶಿಷ್ಯರ ಸಂಬಂಧ ಯಾವಾಗಲೂ ಶಾಶ್ವತವಾಗಿರುತ್ತವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜೀವನದ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುತ್ತದೆ. ಕಾರಣಾಂತರದಿಂದ ನಿಂತಿರುವ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಆಚರಣೆಯನ್ನು ಪ್ರಾರಂಭಿಸಬೇಕು. ದಾವಣಗೆರೆ ನಗರದಲ್ಲಿ ಜರುಗಿದ ಶೃಂಗ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಜರುಗಿದ್ದು ತಮಗೆ ಸಂತಸ ತಂದಿದೆ ಎಂದ ಅವರು ಇದಕ್ಕಾಗಿ ಶ್ರಮಿಸಿದ ಸಮಿತಿಯ ಎಲ್ಲಾ ಸದಸ್ಯರಿಗೆ ಶುಭ ಹಾರೈಸಿದರು. ಶೃಂಗ ಸಭೆಯಲ್ಲಿ ಕೈಕೊಂಡ 12 ನಿರ್ಣಯಗಳನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪಂಚ ಪೀಠದ ಜಗದ್ಗುರುಗಳ ಪರವಾಗಿ ಮಂಡಿಸಿದರು.

ಕಾಶೀ ಪೀಠದ ಡಾ. ಚಂದ್ರಶೇಖರ ಜಗದ್ಗುರುಗಳು ಮಾತನಾಡಿ, ವಿವಿಧತೆಯಲ್ಲಿ ಏಕತೆ ಕಾಪಾಡಿಕೊಂಡು ಬರುವುದು ಭಾರತೀಯ ಸಂಸ್ಕೃತಿಯಾಗಿದೆ. ವೀರಶೈವ ಲಿಂಗಾಯತ ಧರ್ಮ ಸರ್ವ ಸಮುದಾಯಕ್ಕೂ ಸದಾಕಾಲ ಒಳನ್ನೇ ಬಯಸುತ್ತ ಬಂದಿದೆ. ವೀರಶೈವ ಧರ್ಮದ ಪಂಚ ಪೀಠಗಳು ಸ್ವಧರ್ಮ ನಿಷ್ಠೆಯ ಜೊತೆಗೆ ಪರಧರ್ಮ ಸಹಷ್ಣುತೆಯನ್ನು ಬೋಧಿಸುತ್ತಾ ಬಂದಿವೆ. ಪಂಚ ಪೀಠಾಧೀಶ್ವರರು ಉಳಿದ ವಿರಕ್ತ ಮಠಗಳನ್ನು ಕೂಡಿಕೊಂಡು ಸಮನ್ವಯ ಸಂದೇಶ ನೀಡುವಂತೆ ಅನೇಕ ರಾಜಕಾರಣಿಗಳು ಅಪೇಕ್ಷೆಪಟ್ಟಿದ್ದಾರೆ. ಈಗಾಗಲೇ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಅಭೂತ ಪೂರ್ವ ಕಾರ್ಯವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಮಾಡಿದ್ದಾರೆ. ಮತ್ತೆ ಅಂತಹ ಕಾರ್ಯ ಮಾಡುವುದಾದರೆ ಉಳಿದ ಎಲ್ಲ ಸಮಾನ ಪೀಠಗಳು ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು. ಶ್ರೀ ಶ್ರೀಶೈಲ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಜಗದ್ಗುರುಗಳು, ಕಾಶೀ ಪೀಠದ ನೂತನ ಜಗದ್ಗುರು ಡಾ|| ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೇಂದ್ರದ ರೇಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ, ದಾವಣಗೆರೆ ನಗರದಲ್ಲಿ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಿಂದ ಸಮಾಜಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಭಕ್ತರ ಬಾಳಿಗೆ ಪಂಚ ಪೀಠಗಳು ಬಹಳಷ್ಟು ಜ್ಞಾನಶಕ್ತಿ ಕ್ರಿಯಾಶಕ್ತಿ ತುಂಬಿವೆ, ಪಂಚಪೀಠಗಳ ದರ್ಶನ ಮಾಡಿದರೆ ಭಗವಂತನ ದರ್ಶನ ಪಡೆದ ಭಾವನೆ ಎಲ್ಲರಿಗೂ ಇದೆ. ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿನಿಂದ ಹೆಜ್ಜೆ ಹಾಕಿದರೆ ಅಸಾಧ್ಯವಾದುದು ಯಾವುದೂ ಇಲ್ಲವೆಂದರು, ಹಾವೇರಿ ಸಂಸದ ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ವೀರಶೈವ ಲಿಂಗಾಯತ ಸಮಾಜಕ್ಕೆ ಪಂಚ ಪೀಠಗಳು ಬಹು ದೊಡ್ಡ ಶಕ್ತಿ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವದ ಸಂದೇಶ ಸರ್ವ ಜನಾಂಗಕ್ಕೂ ಅನ್ವಯಿಸುತ್ತವೆ ಎಂದು ಹರುಷ ವ್ಯಕ್ತಪಡಿಸಿದರು.

ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ ಮಾನವ ಧರ್ಮಕ್ಕೆ ಜಯವಾಗಲೆಂಬ ಸಂದೇಶ ಪಂಚಪೀಠಗಳದ್ದಾಗಿದೆ. ವೀರಶೈವ ಲಿಂಗಾಯತ ಧರ್ಮ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿವೆ ಎಂದರು. ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಶರಣ ಪ್ರಕಾಶ ಪಾಟೀಲ ಮಾತನಾಡಿ ಕರ್ನಾಟಕ ರಾಜ್ಯಕ್ಕೆ ಮಠಾಧೀಶರ ಕೊಡುಗೆ ದೊಡ್ಡದು, ಇಲ್ಲಿ ಶಾಂತಿ ಸಮೃದ್ಧಿ ಇದೆ. ಯುವಕರಿಗೆ ಒಳ್ಳೆಯ ಭವಿಷ್ಯವಿದೆ. ಮಠ ಮಾನ್ಯಗಳು ಬಹುದಿನಗಳಿಂದ ಒಳ್ಳೆಯ ಸಂದೇಶ ನೀಡುವ ಮೂಲಕ ಕೆಳಗೆ ಬಿದ್ದವರಿಗೆ ಆತ್ಮ ಸೈರ್ಯ ತುಂಬುವ ಕೆಲಸ ಮಾಡಿದ್ದಾರೆ. ನಮ್ಮ ನಡುವಳಿಕೆಯಿಂದ ಅಚಾರ ವಿಚಾರದಿಂದ ಜನ ವೀರಶೈವ ಲಿಂಗಾಯತರನ್ನು ಅಪ್ಪಿಕೊಳ್ಳುತ್ತಾರೆ ನಂಬುತ್ತಾರೆ. ಯುವ ಪೀಳಿಗೆಗೆ ನಮ್ಮ ಧರ್ಮದ ಪರಿಚಯವನ್ನು ಮಾಡಬೇಕಾಗಿದೆ. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವ, ಅಷ್ಟಾವರಣ ಪಂಚಾಚಾರ ಷಟ್ಟಲ ಸಿದ್ಧಾಂತವನ್ನು ಯುವಕರಿಗೆ ತಿಳಿಸಬೇಕಾಗಿದೆ. ಮಕ್ಕಳಿಗೆ ನಮ್ಮ ಆಚರಣೆ ಸಿದ್ಧಾಂತಗಳನ್ನು ಹೇಳಿಕೊಡಬೇಕಾಗಿದೆ. ನಿತ್ಯ ನಿತ್ಯ ಲಿಂಗಪೂಜೆ ಮಾಡುವ ಕುರಿತು ತಿಳಿಸಬೇಕಾಗಿದೆ. ಪಂಜೆ ಪೀಠದ ಜಗದ್ಗುರುಗಳು ಒಳ್ಳೆಯ ಸಂದೇಶ ನೀಡಿದ್ದಾರೆ. ಎಲ್ಲರನ್ನು ಒಗ್ಗೂಡಿಸುವ ಕೆಲಸವಾಗಬೇಕಾಗಿದೆ. ನಮ್ಮ ಸಂಸ್ಕೃತಿ ಸಿದ್ಧಾಂತವನ್ನು ಪರಿಚಯಿಸುವ ಕೆಲಸ ಆಗಬೇಕಾಗಿದೆ. ಗುರು ವಿರಕ್ತರನ್ನು ಒಂದುಗೂಡಿಸುವ ಕೆಲಸ ಆಗಬೇಕು. ಪಂಚ ಪೀಠಾಧೀಶರ ಮಾರ್ಗದರ್ಶನದಲ್ಲಿ ನಾವು ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಮಾಜಿ ಶಾಸಕ ಮಹಿಮಾ ಪಟೇಲ್, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಹರಿಹರದ ಶಾಸಕ ಬಿ.ಪಿ.ಹರೀಶ್, ನರಗುಂದ ಶಾಸಕ ಮಾಜಿ ಸಚಿವ ಸಿ.ಸಿ.ಪಾಟೀಲರು ಮಾತನಾಡಿ ವೀರಶೈವ ಲಿಂಗಾಯತ ಧರ್ಮದ ಆದರ್ಶ ಚಿಂತನಗಳು ಸರ್ವ ಜನಾಂಗದ ಏಳೆಗೆ ಅವಶ್ಯಕವಾಗಿದೆ. ಪರಸ್ಪರ ಸಹಕಾರದಿಂದ ಅರಿತು ಬಾಳಬೇಕೆಂದರು. ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಸಂಸದ ಆಯನೂರ ಮಂಜುನಾಥ, ಅರಸೀಕೆರೆ ಮಾಜಿ ಶಾಸಕರಾದ ಕೆ.ಪಿ.ಪ್ರಭುಕುಮಾರ್, ಜಿ.ಹೆಚ್.ಪರಮೇಶ್ವರ್, ಮಾಜಿ ಎಂ.ಎಲ್.ಸಿ. ಮಹಂತೇಶ ಕವಟಗಿಮಠ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಂಶೋಧಕ ಮತ್ತು ಅಧ್ಯಾತ್ಮ ಚಿಂತಕರಾದ ಭಂಡಿವಾಡದ ಡಾ.ಎ.ಸಿ.ವಾಲಿ ಅವರು ಮಾತನಾಡಿ ಉದಾತ್ತವಾದ ಜೀವನ ಮೌಲ್ಯ ಅರುಹಿದ ವೀರಶೈವ ಲಿಂಗಾಯತ ಧರ್ಮ ಅತ್ಯಂತ ಪ್ರಾಚೀನ ಇತಿಹಾಸ ಹೊಂದಿದೆ. ಧರ್ಮದ ಮೂಲ ತತ್ವ ಸಿದ್ಧಾಂತಗಳನ್ನು ಅರಿಯದ ಜನರಿಂದಾಗಿ ಕೆಲವರು ಅಡ್ಡ ಮಾರ್ಗದಲ್ಲಿ ನಡೆಯುತ್ತಿರುವುದು ಒಳ್ಳೆಯದಲ್ಲ, ಎಲ್ಲ ಒಳಪಂಗಡಗಳ ಜನರು ಒಂದಾಗಿ ಮೂಲ ಧರ್ಮದ ಶಕ್ತಿಯನ್ನು ಪುನರುತ್ಥಾನಗೊಳಿಸಲು ಪಂಚ ಪೀಠಗಳು ಸಂಕಲ್ಪದೊಂದಿಗೆ ಕಾರ್ಯೋನ್ಮುಖರಾಗಿರುವುದು ಭಕ್ತ ಸಂಕುಲಕ್ಕೆ ಸಂತೋಷ ತಂದ ಸಂಗತಿ ಎಂದರು.

ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿ ಎರಡು ದಿನಗಳ ಕಾಲ ಜರುಗಿದ ಶೃಂಗ ಸಮ್ಮೇಳನದಿಂದ ವೀರಶೈವ ಲಿಂಗಾಯತ ಸಮುದಾಯದ ಮೇಲೆ ಬಹಳಷ್ಟು ಪರಿಣಮವನು ಉಂಟು ಮಾಡಿದೆ ಎಂದರು. ಬಸವನಬಾಗೇವಾಡಿ ಶಿವಪ್ರಕಾಶ ಶಿವಾಚಾರ್ಯರು ಹೃದಯ ಹಂಬಲ ನುಡಿಗಳನ್ನಾಡಿ ಜೀವ ಶಿವನಾಗಲು ಅಂಗ ಲಿಂಗವಾಗಲು ಮತ್ತು ಭವಿ ಭಕ್ತನನ್ನಾಗಿ ಪರಿವರ್ತಿಸುವ ಶಕ್ತಿ ವೀರಶೈವ ಲಿಂಗಾಯತ ಧರ್ಮದಲ್ಲಿದೆ. ಧರ್ಮ ಪೀಠಗಳ ಮಾರ್ಗದರ್ಶನದಿಂದ ಮಾನವ ಜೀವನ ಸುಸಂಸ್ಕೃತಗೊಳ್ಳಲು ಸಾಧ್ಯವಾಗುವುದೆಂದರು. ವಿವಿಧ ಪ್ರಾಂತ ಪ್ರದೇಶಗಳಿಂದ ಆಗಮಿಸಿದ 300ಕ್ಕೂ ಹೆಚ್ಚಿನ ಶಿವಾಚಾರ್ಯರು ಉಪಸ್ಥಿತರಿದ್ದರು.

ಅಣಬೇರು ರಾಜಣ್ಣ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ದೇವರಮನೆ ಶಿವಕುಮಾರ್, ಹಿರಿಯ ನ್ಯಾಯವಾದಿ ಗಂಗಾಧರ ಗುರುಮಠ, ವೀಣಾ ಕಾಶಪ್ಪನವರ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಮುರಿಗೇಶ ಆರಾಧ್ಯರು ಸ್ವಾಗತಿಸಿದರು. ಬೀರೂರು ರುದ್ರಮುನಿ ಶಿವಾಚಾರ್ಯರು ಹಾಗೂ ಪ್ರಶಾಂತ ರಿಪ್ಪನ್ ಪೇಟೆ ನಿರೂಪಿಸಿದರು.

ಸಂಜೆ ಸಂಸ್ಕೃತಿ ಸಂವರ್ಧನೆಗಾಗಿ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಅಭೂತಪೂರ್ವ ಪಾದಯಾತ್ರೆ ಶ್ರೀಶೈಲ ಮಠದಿಂದ ಶ್ರೀಮದಭಿನವ ರೇಣುಕ ಮಂದಿರದ ವರೆಗೆ ನಡೆಯಿತು.

Related Articles

Comments (0)

Leave a Comment