ಪಾವಗಡಕ್ಕೆ ಏಷ್ಯಾದಲ್ಲಿ ನಂ.1 ವಿದ್ಯುತ್ ಉತ್ಪಾದನಾ ಘಟಕದ ಹೆಗ್ಗಳಿಕೆ; ಸಿಎಂ
- by Suddi Team
- July 22, 2025
- 1035 Views

ತುಮಕೂರು: ಇನ್ನೆರಡು ತಿಂಗಳಿನಲ್ಲಿ 2,400 ಮೆಗಾ ವ್ಯಾಟ್ ಸೌರಶಕ್ತಿ ಉತ್ಪಾದಿಸುವ ಗುರಿ ತಲುಪುವ ಮೂಲಕ ಏಷ್ಯಾದಲ್ಲಿ ನಂ.1 ವಿದ್ಯುತ್ ಉತ್ಪಾದನೆ ಘಟಕ ಎನ್ನುವ ಹೆಗ್ಗಳಿಕೆಗೆ ಪಾವಗಡ ಪಾತ್ರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಪಾವಗಡದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪಾವಗಡದಲ್ಲಿ ನಿರ್ಮಿಸಿರುವ ಸೌರ ವಿದ್ಯುತ್ ಉತ್ಪಾದನೆ ಪ್ಲಾಂಟ್ ಏಷ್ಯಾದಲ್ಲೇ ನಂ.1 ಆಗಿದೆ. ಈಗಾಗಲೇ ಅಲ್ಲಿ 2,050 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ನಮ್ಮ ಬಹು ನಿರೀಕ್ಷಿತ ಗುರಿಯಾದ 2,400 ಮೆ.ವ್ಯಾಟ್ ವಿದ್ಯುತ್ ಉತ್ಪಾದನಾ ಹಂತ ತಲುಪಲಿದ್ದು, ಇದರಿಂದ ಏಷ್ಯಾದಲ್ಲಿ ನಂ.1 ಸೌರ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಘಟಕವಾಗಲಿದೆ ಆ ಮೂಲಕ ಪಾವಗಡದ ಚಿತ್ರಣವೇ ಬದಲಾಗಲಿದೆ ಎಂದರು.
ನಂಜುಂಡಪ್ಪ ವರದಿಯಲ್ಲಿ ಪಾವಗಡ ನಮ್ಮ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕು ಎಂದು ಗುರುತಿಸಲ್ಪಟ್ಟಿತ್ತು. ಆದರೆ, ಈಗ ತುಮಕೂರಿನ ತಾಲೂಕಿನ ಪಟ್ಟಿಯಲ್ಲಿ ಪಾವಗಡ ಮೊದಲನೇ ಸ್ಥಾನ ತಲುಪಿದೆ. ಈ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ಹಾಗಾಗಿ ಈ ಭಾಗಕ್ಕೆ ಸೇರಿದ ಕಾಂಗ್ರೆಸ್ನ ಸಚಿವರು, ಶಾಸಕರಿಗೆ ಜನರು ಸದಾ ಆಶೀರ್ವಾದ ಮಾಡಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಪಾವಗಡ ತಾಲೂಕು ಈಗ ಮುಂದುವರಿಯುತ್ತಿರುವ ಬಗ್ಗೆ ಸಂತೋಷವಿದೆ. ಆದಷ್ಟು ಬೇಗ ಹಿಂದುಳಿದ ತಾಲೂಕು ಪಟ್ಟಿಯಿಂದ ಹೊರಬರುವಂತಾಗಲಿ ಎಂದು ಆಶಿಸಿದರು.
ಫ್ಲೋರೈಡ್ ನೀರು ಮುಕ್ತ ಪಾವಗಡ:
ಪಾವಗಡ ಭಾಗದ ಜನರು ಫ್ಲೋರೈಡ್ಯುಕ್ತ ನೀರನ್ನು ಕುಡಿಯುವ ಅನಿವಾರ್ಯತೆಯಿಂದ ಆರೋಗ್ಯದ ತೊಂದರೆಗಳಿಗೆ ಒಳಗಾಗುವ ಸನ್ನಿವೇಶವಿತ್ತು. ಹಾಗಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು 200 ಕಿ.ಮೀ ದೂರವಿರುವ ತುಂಗಭದ್ರಾ ಜಲಾಶಯದ ಹಿನ್ನೀರನ್ನು ಪಾವಗಡಕ್ಕೆ ತರುವ ಯೋಜನೆಗೆ ಚಾಲನೆ ನೀಡಿದ್ದೇವೆ. ಈ ಯೋಜನೆಯಿಂದ 17.50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿದ್ದು, ತಾಲೂಕಿನ 270 ಹಳ್ಳಿಗಳು ಮತ್ತು ಪಾವಗಡ ಪಟ್ಟಣಕ್ಕೆ ಈ ಯೋಜನೆಯಿಂದ ಶುದ್ಧ ಕುಡಿಯುವ ನೀರು ಪೂರೈಸಿದಂತಾಗಲಿದೆ. ಈ ಯೋಜನೆಗೆ ಹಗಲಿರುಳು ದುಡಿದ ಸಚಿವರು ಹಾಗೂ ಶಾಸಕರ ಪ್ರಯತ್ನಗಳು ಇಂದು ಫಲಿಸಿದೆ ಎಂದರು.
ಮತ್ತೊಮ್ಮೆ ನಮಗೇ ಅಧಿಕಾರ:
ನಾಳೆಯೇ ರಾಜ್ಯ ವಿಧಾನಸಭೆಗೆ ಚುನಾವಣೆಯಾದರೂ ನಾವು ಮತ್ತೆ ಗೆದ್ದೇ ಗೆಲ್ಲುತ್ತೇವೆ. ಆದರೆ, ನಾಡಿನ ಜನ ನಮಗೆ 2028ರ ಮೇ ವರೆಗೆ ಅಧಿಕಾರ ನೀಡಿದ್ದಾರೆ. ಐದು ವರ್ಷದ ಅವಕಾಶ ಕಲ್ಪಿಸಿದ್ದಾರೆ. ಹಾಗಾಗಿ ಜನ ನೀಡಿದಂತೆ ಐದು ವರ್ಷದವರೆಗೂ ನಾವು ಅಧಿಕಾರದಲ್ಲಿ ಮುಂದುವರಿಯುತ್ತೇವೆ. 2028ರ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ, ಜೆಡಿಎಸ್ ಅನ್ನು ಸೋಲಿಸಿ ಪುನಃ ನಾವೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.
Related Articles
Thank you for your comment. It is awaiting moderation.
Comments (0)