ಪುರುಷರ ಹೆಸರಿಗೆ ನಿವೇಶನ ಮಂಜೂರು ಮಾಡಬೇಡಿ; ಡಿಸಿಎಂ ಮಹತ್ವದ ಸೂಚನೆ

ಬೆಂಗಳೂರು ದಕ್ಷಿಣ: ಪುರುಷರ ಹೆಸರಿಗೆ ನಿವೇಶನ ಮಂಜೂರು ಮಾಡದಿರೆ ಅವರು ಆ ನಿವೇಶನವನ್ನು ಮಾರಿಕೊಂಡು ಹೋಗಿಬಿಡುತ್ತಾರೆ. ಹಾಗಾಗಿ ಮಹಿಳೆಯರ ಹೆಸರಿಗೆ ನೋಂದಣಿ ಮಾಡಬೇಕು, ಇಲ್ಲದಿದ್ದರೆ ಜಂಟಿಖಾತೆ ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ.

ಕನಕಪುರದಲ್ಲಿ ನಡೆದ ಜನಸ್ಪಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿಯಾಗಿದ್ದ ಇಕ್ಬಾಲ್ ಹುಸೇನ್ ಶಾಸಕರಾದ ನಂತರ ರಾಮನಗರದ ಅಭಿವೃದ್ಧಿ ವೇಗ ಪಡೆದುಕೊಂಡಿದೆ. 1 ಸಾವಿರ ಕೋಟಿ ಅನುದಾನ ನೀಡಿ ರಾಮನಗರ ಪಟ್ಟಣ ಅಭಿವೃದ್ಧಿ ಮಾಡಲಾಗುತ್ತಿದೆ. ವಸತಿ ಯೋಜನೆಯಲ್ಲೂ ದೊಡ್ಡ ಪ್ರಗತಿ ಕಾಣುತ್ತಿದೆ ಎನ್ನುತ್ತಲೇ ವಸತಿ ಯೋಜನೆಗಳ ಅಡಿಯಲ್ಲಿ ಯಾವುದೇ ಪುರುಷರ ಹೆಸರಿಗೆ ನಿವೇಶನ ಮಂಜೂರು ಮಾಡದೆ ನೇರವಾಗಿ ಮಹಿಳೆಯರ ಹೆಸರಿಗೆ ನಿವೇಶನಗಳ ಮಂಜೂರಾತಿಯಾಗಿ ನೋಂದಣಿ ಮಾಡಬೇಕು, ಗಂಡಸರು ಮಾರಿಕೊಂಡು ಹೋಗಿಬಿಡುತ್ತಾರೆ. ಹಾಗಾಗಿ ಮಹಿಳೆ ಹೆಸರಿಗೆ ಇಲ್ಲದಿದ್ದರೆ ಜಂಟಿ ಖಾತೆ ಮಾಡಿ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ವೇದಿಕೆಯಲ್ಲಿಯೇ ನೇರವಾದ ಸೂಚನೆ ನೀಡಿದರು.

ಒಂದೇ ಒಂದು ರೂಪಾಯಿ ಪಡೆಯದೇ ಕೆಲಸ ಮಾಡುವ ಅಧಿಕಾರಿಗಳನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಹಾಕಿದ್ದೇನೆ. ಜನರಿಗೆ ಹಾಗೂ ಯಾರಿಗೂ ತೊಂದರೆ ಕೊಡದ ಅಧಿಕಾರಿಗಳು ಕ್ಷೇತ್ರದಲ್ಲಿ ಇದ್ದಾರೆ. ನಮಗೆ ಯಾವುದೇ ತೊಂದರೆ ಇಲ್ಲ. ದೇವರು ನಮಗೆ ಕೊಟ್ಟಿದ್ದಾನೆ, ನಾನು ನಿಮ್ಮ ಸೇವೆ ಮಾಡುತ್ತಿದ್ದೇನೆ ಎಂದರು.

ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನಮ್ಮ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ್ದರು. ನಾನು ಈಗ ಅದನ್ನು ಸರಿ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ನಮ್ಮ ಮೂಲ ಹೆಸರನ್ನು ಬಿಡಬಾರದು ಎಂದು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿದ್ದೇವೆ. ಹೆಸರು ಬದಲಾವಣೆ ಮಾಡಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದರು. ಆದರೆ, ನಾನು ಮಾಡಿಯೇ ತೀರುತ್ತೇನೆ ಎಂದು ಮರುನಾಮಕರಣ ಮಾಡಿದ್ದೇನೆ. ನಾನು ನಿಮ್ಮ ಜೇಬಿಗೆ ಹಣ ಹಾಕಲು ಆಗದೇ ಇರಬಹುದು. ಆದರೆ, ನಿಮ್ಮ ಆಸ್ತಿ ಮೌಲ್ಯ ಹೆಚ್ಚಿಸಿದ್ದೇನೆ ಎಂದು ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಿದ್ದನ್ನು ಸಮರ್ಥಿಸಿಕೊಂಡರು..

Related Articles

Comments (0)

Leave a Comment