ನಿಮ್ಮ ಹೆಣ, ಪಲ್ಲಕ್ಕಿ ಹೊರುವವನು ನಾನು; ಡಿಕೆ ಶಿವಕುಮಾರ್ ಹೀಗಂದಿದ್ಯಾಕೆ?

ಬೆಂಗಳೂರು ದಕ್ಷಿಣ: ಚುನಾವಣೆ ವೇಳೆ ಅನೇಕರು ಬಂದು ನಿಮ್ಮ ತಲೆ ಕೆಡಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ನೀವು ಅವರ ಯಾವುದೇ ಆಮಿಷಗಳಿಗೂ ಮಣಿಯಬಾರದು. ನಿಮ್ಮ ಹೆಣ ಹಾಗೂ ಪಲ್ಲಕ್ಕಿ ಹೊರುವವನು ನಾನು. ನನ್ನ ಹೆಣ ಮತ್ತು ಪಲ್ಲಕ್ಕಿ ಹೊರುವವರು ನೀವು. ನಿಮ್ಮ- ನಮ್ಮ ಸಂಬಂಧ ಭಕ್ತ- ಭಗವಂತನ ನಡುವಿನ ಸಂಬಂಧವಿದ್ದಂತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಕನಕಪುರದ ಕೋಡಿಹಳ್ಳಿ ಹೋಬಳಿಯಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಅತೀವ ಬೇಸರ ಹೊರಹಾಕಿದರು. ನನ್ನ ಸಹೋದರ ಸುರೇಶ್ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಅವರ ಅಳಿಯನನ್ನು ಬಿಜೆಪಿ ಒಕ್ಷದ ಚಿನ್ಹೆಯಡಿ ಮೈತ್ರಿ ಅಭ್ಯರ್ಥಿಯಾಗಿ ನಿಲ್ಲಿಸಿದರು, ಅಲ್ಲಿ ನಮಗೆ ಹಿನ್ನಡೆಯಾಯಿತು. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಮಗ ನಿಖಿಲ್ ವಿರುದ್ಧ ನನ್ನ ಸಹೋದರ ಡಿ.ಕೆ. ಸುರೇಶ್ ಅವರನ್ನು ನಿಲ್ಲಿಸಬೇಕು ಎಂದು ಒತ್ತಡ ತರಲಾಯಿತು. ಆದರೆ, ಆಗಿನ ರಾಜಕೀಯ ಬೆಳವಣಿಗೆಯಲ್ಲಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು ಎಂದು ಉಪ ಸಮರದ ಗೆಲುವನ್ನು ಮೆಲುಕು ಹಾಕಿದರು.

ಲೋಕಸಭೆ ಚುನಾವಣೆಯಲ್ಲಿ ನಮ್ಮ ಜನ ನಮಗೆ ಸಂಪೂರ್ಣ ಮೋಸ ಮಾಡಿಲ್ಲ. ನಮಗೆ ಬೆಂಗಳೂರಿನಲ್ಲಿ ಮಾತ್ರ ಮೋಸ ಆಗಿದೆ. ಆದರೆ, ನಮ್ಮ ಗ್ರಾಮೀಣ ಭಾಗದಲ್ಲಿ ನಮಗೆ ಮೋಸ ಆಗಿಲ್ಲ. ಹಾಗಾಗಿ ಬೇರೆ ಕಡೆ ವಾಲಿರುವವರಿಗೆ ನೀವೆಲ್ಲ ಬುದ್ಧಿ ಹೇಳಿ. ಚುನಾವಣೆ ಸಮಯದಲ್ಲಿ ಅನೇಕರು ಬಂದು ತಲೆ ಕೆಡಿಸುವ ಪ್ರಯತ್ನ ಮಾಡುತ್ತಾರೆ. ನೀವು ಯಾವುದಕ್ಕೂ ಮಣಿಯಬಾರದು. ನಿಮ್ಮ ಹೆಣ ಹಾಗೂ ಪಲ್ಲಕ್ಕಿ ಹೊರುವವನು ನಾನು. ನನ್ನ ಹೆಣ, ಪಲ್ಲಕ್ಕಿ ಹೊರುವವರು ನೀವು ಎಂದರು.

ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಯಾವ ರೀತಿ ಸೋಲಿಸಿದರೋ ಅದೇ ತಂತ್ರಗಾರಿಕೆಯನ್ನು ಬಳಸಿಕೊಂಡು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆದ್ದಿದ್ದೇವೆ. ರಾಜಕೀಯ ಪಟ್ಟುಗಳನ್ನು ನಾವೂ ಕರಗತ ಮಾಡಿಕೊಂಡಿದ್ದೇವೆ. ಇನ್ನು ನಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿಯ ಮೂಲಕ ಹೊಸ ಶಕೆ ಆರಂಭವಾಗಲಿದೆ. ಈ ಅವಧಿಯಲ್ಲೇ ಮೆಡಿಕಲ್ ಕಾಲೇಜಿಗೆ ಮುಕ್ತಿ ನೀಡಲಾಗುತ್ತದೆ. ಆ ಮೂಲಕ ನಮ್ಮ ಕ್ಷೇತ್ರದಲ್ಲಿ ಎರಡು ಮೆಡಿಕಲ್ ಕಾಲೇಜು ಇರಲಿದೆ. ನಮ್ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಅವರು ಚಿಕ್ಕಬಳ್ಳಾಪುರಕ್ಕೆ ಹಾಕಿಬಿಟ್ಟರು. ಆದರೆ, ಈಗ ನಾವು ಮತ್ತೆ ಇಲ್ಲಿಗೇ ತರುತ್ತಿದ್ದೇವೆ. ಇಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾದರೆ ನೀವುಗಳು ಯಾರೂ ಬೆಂಗಳೂರಿಗೆ ಹೋಗಬೇಕಿಲ್ಲ ಎಂದು ಭರವಸೆ ನೀಡಿದರು.

Related Articles

Comments (0)

Leave a Comment