ಶಿಷ್ಟಾಚಾರ ಪಾಲಿಸಿಲ್ಲ ಎನ್ನುವ ಸಿಎಂ ಆರೋಪ ತಳ್ಳಿಹಾಕಿದ ಗಡ್ಕರಿ..!

ನವದೆಹಲಿ: ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಆಹ್ವಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಶಿಷ್ಟಾಚಾರ ಪಾಲನೆ ಮಾಡಿಲ್ಲ, ನನಗೆ ಆಹ್ವಾನ ನೀಡಿಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪವನ್ನು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಳ್ಳಿಹಾಕಿದ್ದು ಆಹ್ವಾನ ನೀಡಿದ್ದ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ ಕರ್ನಾಟಕದ ಶಿವಮೊಗ್ಗದಲ್ಲಿ ಬಹು ಪ್ರಮುಖ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ ನಡೆಯಿತು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 11ರಂದು ಅಧಿಕೃತ ಆಹ್ವಾನವನ್ನು ನೀಡಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಅವರನ್ನು ಆಹ್ವಾನಿಸಲಾಯಿತು. ಆದರೆ, ಅವರು ಬೇರೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನಿಗದಿಯಾದ ಕುರಿತು ಪತ್ರ ಬಂದ ಹಿನ್ನಲೆಯಲ್ಲಿ ಜುಲೈ 12ರಂದು ಅವರ ವರ್ಚುವಲ್ ಉಪಸ್ಥಿತಿಯನ್ನು ಕೋರಿ ಮುಂದಿನ ಪತ್ರವನ್ನು ಕಳುಹಿಸಲಾಯಿತು ಎಂದು ಎರಡೂ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಕೇಂದ್ರ ಸರ್ಕಾರವು ಸ್ಥಾಪಿತ ಶಿಷ್ಟಾಚಾರಗಳನ್ನು ಎತ್ತಿಹಿಡಿಯುವುದನ್ನು ಮುಂದುವರಿಸಿದೆ. ಕರ್ನಾಟಕ ಸರ್ಕಾರ ಮತ್ತು ಮುಖ್ಯಮಂತ್ರಿಯ ಕೊಡುಗೆಗಳು ಹಾಗೂ ಸಹಕಾರವನ್ನು ನಿರಂತರವಾಗಿ ಶ್ಲಾಘಿಸಿದೆ. ನಮ್ಮ ಸರ್ಕಾರ ಸಹಕಾರಿ ಒಕ್ಕೂಟ ವ್ಯವಸ್ಥೆ ಮತ್ತು ಎಲ್ಲ ರಾಜ್ಯಗಳೊಂದಿಗೆ ನಿಕಟ ಸಮನ್ವಯಕ್ಕೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಲ್ಹಾದ್ ಜೋಷಿ ಅಸಮಧಾನ:

ಶರಾವತಿ ನದಿಯ ಹಿನ್ನೀರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಬಾರಗೋಡ್ಲು- ಕಳಸವಳ್ಳಿ- ಸಿಗಂದೂರು‌ ಸೇತುವೆಯ ಲೋಕಾರ್ಪಣೆಯನ್ನು ಶಿವಮೊಗ್ಗದ ಜನ ನಿಜಕ್ಕೂ ಹಬ್ಬದ ಸಂದರ್ಭ ಎಂದೇ ಭಾವಿಸುತ್ತಿದ್ದಾರೆ. ಆದರೆ, ಈ ಸಂದರ್ಭವನ್ನು ರಾಜಕೀಯ ದಾಳವಾಗಿ ಉರುಳಿಸಲು ರಾಜ್ಯದ ಮುಖ್ಯಮಂತ್ರಿ  ಸಿದ್ದರಾಮಯ್ಯನವರು ಮುಂದಾಗಿರುವುದು ನಿಜಕ್ಕೂ ಬೇಸರದ  ಸಂಗತಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಕ್ಷೇತ್ರದ ‌ಲೋಕಸಭಾ ಸದಸ್ಯರ ಬಿ.ವೈ. ರಾಘವೇಂದ್ರ ಜುಲೈ 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನದ ಜತೆ ಪತ್ರವನ್ನೂ ಬರೆದಿದ್ದಾರೆ. ಅಲ್ಲದೆ, ಸಿಗಂದೂರು ಸೇತುವೆ ಕರ್ನಾಟಕದ ಹೆಮ್ಮೆ, ಜನರಿಗೆ ಅನುಕೂಲ ಹಾಗೂ ಪ್ರವಾಸಿ ಕ್ಷೇತ್ರವಾಗುವ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜುಲೈ 11ರಂದು ಪತ್ರ ಬರೆದು ಆಹ್ವಾನಿಸಿದ್ದಾರೆ. ರಾಜ್ಯದ ಅಭಿವೃದ್ಧಿಯನ್ನು ಮರೆತ ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ, ಇದೀಗ ಸಿಎಂ ಖುರ್ಚಿ ಜಗಳದಲ್ಲಿ ಮುಳುಗಿದೆ. ಕೇಂದ್ರ ಸರ್ಕಾರದ ಅನುದಾನದಲ್ಲಿ‌ ನಿರ್ಮಾಣವಾದ ಸೇತುವೆಯನ್ನು ಸಂಭ್ರಮಿಸುವ ಬದಲು ತನ್ನ ಕುರ್ಚಿ ಉಳಿಸಿಕೊಳ್ಳುವ ಬರದಲ್ಲಿ, ಶಿಷ್ಟಾಚಾರ ನಿಯಮ ಉಲ್ಲಂಘನೆ, ನನ್ನನ್ನು ಆಹ್ವಾನಿಸಿಯೇ ಇಲ್ಲ ಎಂಬ ಸುಳ್ಳು ಹಾಗೂ ಕೆಟ್ಟ ರಾಜಕಾರಣವನ್ನು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಮಾಡುತ್ತಿರುವುದು ರಾಜ್ಯಕ್ಕೆ ಮಾಡುತ್ತಿರುವ ದ್ರೋಹ ಎಂದಿದ್ದಾರೆ.

ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಜತೆ ಈ ಹಿಂದೆಯೇ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಅಧಿಕಾರಿಗಳು ಚರ್ಚಿಸಿ, ಉದ್ಘಾಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ‌, ಉದ್ಘಾಟನೆಯ ‌ಕುರಿತು ಮುಖ್ಯಮಂತ್ರಿಗಳಿಗೂ ಮಾಹಿತಿ ರವಾನೆಯಾಗಿದೆ. ಸಿಎಂ ಕುರ್ಚಿ ಗಲಾಟೆಯನ್ನು ಮರೆಮಾಚಲು ಈ ರೀತಿಯ ರಾಜಕಾರಣದ‌ ದಾಳ‌ ಉರುಳಿಸಿರುವುದು ರಾಜ್ಯದ ದುರಂತ ಎಂದಿದ್ದಾರೆ.

Related Articles

Comments (0)

Leave a Comment