ಅವಿರತ ಹೋರಾಟಕ್ಕೆ ಶಾಶ್ವತ ವಿಮುಕ್ತಿ: ಸಿಗಂದೂರು ಸೇತುವೆ ಸಂಚಾರಕ್ಕೆ ಮುಕ್ತ
- by Suddi Team
- July 14, 2025
- 313 Views
ಶಿವಮೊಗ್ಗ: ಶರಾವತಿ ಮುಕುಟದ ಮಲೆನಾಡ ಸೊಬಗಿನ ಐತಿಹಾಸಿಕ ಸಿಗಂದೂರ ಸಿಂಧೂರವನ್ನು ಇಂದು ರಾಷ್ಟ್ರಕ್ಕೆ ಅರ್ಪಣೆ ಮಾಡಲಾಯಿತು. ಈ ಮೂಲಕ ಮುಳುಗಡೆ ಸಂತ್ರಸ್ತರ ಆರು ದಶಕಗಳ ಅವಿರತ ಹೋರಾಟಕ್ಕೆ ಶಾಶ್ವತ ವಿಮುಕ್ತಿ ನೀಡಲಾಯಿತು.
ಕರ್ನಾಟಕದ ಮಲೆನಾಡ ರಾಜಧಾನಿಯ ಕಲಶಕ್ಕೆ ಮುಕುಟದ ಮಣಿಯಾಗಿ ಪ್ರಜ್ವಲಿಸುತ್ತಿದ್ದ ‘ಶರಾವತಿ ನದಿ’ಯ ಹಿನ್ನೀರಿಗೆ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯಿಂದ ನಿರ್ಮಿತವಾದ ರಾಜ್ಯದ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗುವಂತ ಐತಿಹಾಸಿಕ ಕೇಬಲ್ ಆಧಾರಿತ 2.25 ಕಿ.ಮೀ ಉದ್ದದ ಸುಮಾರು 423 ಕೋಟಿ ಅನುದಾನದಲ್ಲಿ ದೇಶದ ಎರಡನೇ ಅತಿ ದೊಡ್ಡ ಸಂಪರ್ಕ ಸೇತುವೆ ಅಂಬಾರಗೋಡ್ಲು – ಕಳಸವಳ್ಳಿ – ಸಿಗಂಧೂರು – ಕೊಲ್ಲೂರು (ಸ್ಥಳೀಯರ ಹೊಳೆಬಾಗಿಲು ಸೇತುವೆ) ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಿಸಲಾಗಿದೆ.
ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಸಚಿವ ನಿತಿನ್ ಗಡ್ಕರಿ ಅವರು ಕೇಂದ್ರ ಆಹಾರ ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಷಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಜತೆಗೂಡಿ ರಾಷ್ಟ್ರಕ್ಕೆ ಸಮರ್ಪಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಸ್ಥಳೀಯ ನಾಯಕರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.
ನಿರಂತರ ಆರು ದಶಕಗಳ ಹಿನ್ನೀರಿನ ಪ್ರದೇಶದ ಬಂಧುಗಳ ಹೋರಾಟದ ಕೂಗನ್ನು ಆಲಿಸಿ ಕೇಂದ್ರ ಸರ್ಕಾರ ಸುಮಾರು 423 ಕೋಟಿ ಅನುದಾನ ಬಿಡುಗಡೆಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆ ಇದಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಂಕಲ್ಪದ ಫಲ ಮತ್ತು ನಿಮ್ಮೆಲ್ಲರ ನಿಸ್ವಾರ್ಥ ಪ್ರೀತಿಯ ಆಶೀರ್ವಾದ ಬಲದಿಂದ ಈ ಒಂದು ಐತಿಹಾಸಿಕ ಘಟನೆಗೆ ನಮ್ಮ ಮಲೆನಾಡು ಸಾಕ್ಷಿಯಾಗಿದೆ ಎಂದು ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಇದರೊಂದಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡಿದ ಜನರ ಕೂಗಿಗೆ ತಕ್ಷಣವೇ ಸ್ಪಂದಿಸುವ ಮನೋಭಾವ ಇರುವ ಸರ್ಕಾರ ಎಂದು ಮತ್ತೊಮ್ಮೆ ದೇಶಕ್ಕೆ ಸಂದೇಶ ರವಾನಿಸಿದೆ. ಜತೆಗೆ ಶಂಕುಸ್ಥಾಪನೆ ಮಾಡಿದ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ತನ್ನ ಅಧಿಕಾರದ ಅವಧಿಯಲ್ಲಿ ಉದ್ಘಾಟನೆ ಮಾಡುವ ಸಂಪ್ರದಾಯ ಮುಂದುವರಿಸಿ ಇತಿಹಾಸ ನಿರ್ಮಿಸುತ್ತಿದೆ. ಈ ಒಂದು ಸೇತುವೆ ಕೇವಲ ಶರಾವತಿ ಹಿನ್ನೀರಿನ ಸಂತ್ರಸ್ತರ ಬವಣೆ ಮಾತ್ರ ನೀಗಿಸುವುದಲ್ಲದೆ ನಮ್ಮ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಇನ್ನಷ್ಟು ಬಾಂಧವ್ಯ ಬೆಸೆಯುವ ಕಾಲಘಟಕ್ಕೆ ಮುನ್ನುಡಿ ಬರೆಯುವುದು ನಿಶ್ಚಿತ. ಜತೆಗೆ ಎರಡು ಜಿಲ್ಲೆಗಳ ಆರ್ಥಿಕ ಚಟುವಟಿಕೆ, ಪ್ರವಾಸೋದ್ಯಮ ಹಾಗೂ ವೈವಿಧ್ಯಮಯ ಸಂಸ್ಕೃತಿಗಳ ಸಮ್ಮಿಲನ ಗಟ್ಟಿಯಾಗುವುದು ಹೊಸ ಶಖೆಯ ಆರಂಭಕ್ಕೆ ಸಾಕ್ಷಿಯಾಗಲಿದೆ ಎಂದಿದ್ದಾರೆ.
ಈ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂಥ ಐತಿಹಾಸಿಕ ಸಂದರ್ಭದಲ್ಲಿ ಈ ಸೇತುವೆ ಹೋರಾಟಕ್ಕೆ ದಶಕಗಳಿಂದ ಹೋರಾಟ ನಡೆಸುತ್ತಿದ್ದ ಪ್ರಸನ್ನ ಕೆರೆಕೈ ಅವರು ಸೇರಿದಂತೆ ಇನ್ನೂ ನೂರಾರು ಹೋರಾಟಗಾರರನ್ನು ನೆನಪು ಮಾಡಿಕೊಂಡು ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
Related Articles
Thank you for your comment. It is awaiting moderation.


Comments (0)