ಜಗದ್ಗುರು ರಂಭಾಪುರಿ ಪೀಠಕ್ಕೆ ಸುವರ್ಣ ಪೂಜಾ ಮಂಟಪ ಸಮರ್ಪಣೆ
- by Suddi Team
- July 14, 2025
- 206 Views

ಹಾಸನ: ಮನುಷ್ಯ ಕೊಟ್ಟಿದ್ದು ಮನೆತನಕ, ದೇವರು ಕೊಟ್ಟಿದ್ದು ಕೊನೆಯ ತನಕ. ಬದುಕಿ ಬಾಳುವ ಮನುಷ್ಯನಿಗೆ ಭಗವಂತ ಕೊಟ್ಟ ಕೊಡುಗೆ ಅಪಾರವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಭಾನುವಾರ ಚನ್ನರಾಯಪಟ್ಟಣ ತಾಲೂಕಿನ ಇತಿಹಾಸ ಪ್ರಸಿದ್ಧ ನಾಗರನವಿಲೆ ಗ್ರಾಮದಲ್ಲಿ ಶಿವಾನುಗ್ರಹ ಸೇವಾ ಪ್ರತಿಷ್ಠಾನದಿಂದ ಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಸುವರ್ಣ ಪೂಜಾ ಮಂಟಪ ಸಮರ್ಪಣೆ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಪೂಜಾ ವೃತ ಕೃತಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ನೆಲೆ ನಿಂತ ಭೂಮಿ, ಕುಡಿಯುವ ನೀರು, ತಿನ್ನುವ ಅನ್ನ, ಉಸಿರಾಡುವ ಗಾಳಿ ದೇವರ ಕೊಡುಗೆ ಎಂಬುದನ್ನು ಮರೆಯಲಾಗದು. ಏನೆಲ್ಲ ಕೊಟ್ಟ ಭಗವಂತನ ನಾಮಸ್ಮರಣೆ ಒಂದಿಷ್ಟಾದರೂ ಮಾಡಿದರೆ ಮಾನವ ಜೀವನ ಸಾರ್ಥಕ. ಅರಿವು ಆದರ್ಶಗಳನ್ನು ಬೋಧಿಸಿದ ಶ್ರೀ ಗುರುವಿನ ಕಾರುಣ್ಯದ ಕಿರಣ ಬಹು ದೊಡ್ಡದು. ಆಗಿ ಹೋದ ಅನೇಕ ಮಹಾತ್ಮರ ಮತ್ತು ಗಣ್ಯರ ಜೀವನದಲ್ಲಿ ಗುರು ತೋರಿದ ದಾರಿ ಕೊಟ್ಟ ಹಿತವಚನ ಜೀವನದ ಶ್ರೇಯಸ್ಸಿಗೆ ಕಾರಣ ಎಂಬುದನ್ನು ಯಾರು ಮರೆಯಬಾರದು ಎಂದರು.
ಅನೇಕ ಜನ್ಮಗಳ ಪುಣ್ಯ ಫಲದಿಂದ ಪ್ರಾಪ್ತವಾದ ಈ ಜೀವನ ಸಾರ್ಥಕಗೊಳ್ಳಲು ಧರ್ಮ ದೇವರು ಮತ್ತು ಗುರುವಿನಲ್ಲಿ ನಿಷ್ಠೆ ಶ್ರದ್ದೆ ಆವಶ್ಯಕ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜೀವನ ದರ್ಶನದ ಧರ್ಮ ಸೂತ್ರಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುತ್ತದೆ. ಶಿವಾನುಗ್ರಹ ಸೇವಾ ಪ್ರತಿಷ್ಠಾನದ ಎಲ್ಲ ಸದಸ್ಯರು ಅತ್ಯಂತ ಭಕ್ತಿ ಶ್ರದ್ದೆಯಿಂದ ಸುವರ್ಣ ಲೇಪಿತ ಪೂಜಾ ಮಂಟಪ ಸಮರ್ಪಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯ ಪೂಜಾ ವೃತ ಕೃತಿ ಬಿಡುಗಡೆಗೊಳಿಸಿರುವುದು ಅತ್ಯಂತ ಸಂತೋಷದ ಸಂಗತಿ. ನಾಗರನವಿಲೆ ಕ್ಷೇತ್ರದ ಅಭಿವೃದ್ಧಿ ಮತ್ತು ಸರ್ವ ಜನಾಂಗದ ಒಳಿತಿಗೆ ಭಗವಂತನ ಕೃಪೆ ಅನವರತಕಾಲ ಇರಲೆಂದು ಹರುಷ ವ್ಯಕ್ತಪಡಿಸಿ ಶಿವಾನುಗ್ರಹ ಸೇವಾ ಪ್ರತಿಷ್ಠಾನದ ಎಲ್ಲ ಸದಸ್ಯರಿಗೆ ಶ್ರೀ ಜಗದ್ಗುರು ರಂಭಾಪುರಿ ಪೀಠದಿಂದ ಗುರು ರಕ್ಷೆ ಇತ್ತು ಶುಭ ಹಾರೈಸಿದರು.
ಗೌರಿಗದ್ದೆ ಅವಧೂತ ಆಶ್ರಮದ ವಿನಯ ಗುರೂಜಿ ಮಾತನಾಡಿ, ಗುರು ಕರುಣೆ ಇಲ್ಲದೆ ಬಾಳು ಬೆಳಗದು ಬಲಿಯದು. ಗುರು ಬಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ಪರಶಿವನಿಗೆ ಪಂಚ ಮುಖಗಳು, ಆ ಪಂಚಮುಖಗಳಿಂದ ಅವತರಿಸಿದವರೇ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು, ಶ್ರೀ ಜಗದ್ಗುರು ರೇಣುಕಾಚಾರ್ಯರು ಸಂಸ್ಥಾಪಿಸಿರುವ ವೀರಶೈವ ಧರ್ಮ ಪರಂಪರೆ ಮೂಲ ಗಂಗೋತ್ರಿ ಮತ್ತು ಮಹಾನ್ ಶಕ್ತಿಯಾದ ರಂಭಾಪುರಿ ಪೀಠಕ್ಕೆ ಪೂಜಾ ಮಂಟಪ ಸಮರ್ಪಿಸಿರುವುದು ತಮ್ಮ ಧರ್ಮ ಶ್ರದ್ದೆಗೆ ಸಾಕ್ಷಿಯಾಗಿದೆ ಎಂದರು.
ಚನ್ನರಾಯಪಟ್ಟಣ ಶಾಸಕರಾದ ಬಾಲಕೃಷ್ಣ ಮಾತನಾಡಿ, ಮಾನವನ ಸುಖ ಶಾಂತಿ ಬದುಕಿಗೆ ದೈವ ಕೃಪೆ ಗುರು ಕಾರುಣ್ಯ ಬಹಳ ಮುಖ್ಯ. ಇತಿಹಾಸ ಪ್ರಸಿದ್ಧವಾದ ನಾಗರ ನವಿಲೆ ಗ್ರಾಮದ ಶಿವಾನುಗ್ರಹ ಸೇವಾ ಪ್ರತಿಷ್ಠಾನದಿಂದ ಕೈಗೊಂಡ ಕಾರ್ಯ ಶ್ರೇಷ್ಠವಾದದ್ದು. ನೂತನವಾಗಿ ನಿರ್ಮಿಸುತ್ತಿರುವ ಸಮುದಾಯ ಭವನದ ಕಟ್ಟಡದ ಉದ್ಘಾಟನೆಗೆ ಮತ್ತೊಮ್ಮೆ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಬರಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಪರಮೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಆನಂದ್ ಕುಮಾರ್ ಮುಜರಾಯಿ ತಹಶೀಲ್ದಾರ್ ಹಾಗೂ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಗಳಾದ ಎಚ್.ಎಮ್. ಲತಾ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
ನೊಣವಿನಕೆರೆ ಡಾ. ಕರಿವೃಷಭ ಶಿವಯೋಗೀಶ್ವರ ಸ್ವಾಮಿಗಳು, ನುಗ್ಗೆಹಳ್ಳಿ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು, ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು, ಹೆಗ್ಗಡಹಳ್ಳಿ ಮಠದ ಮತ್ತು ಅಂಬಲದೇವರಹಳ್ಳಿ ಮಠದ ಶ್ರೀಗಳು ಸಮ್ಮುಖ ವಹಿಸಿದ್ದರು.
ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಮುಖ್ಯಸ್ಥ ಪವನ್ ಕುಮಾರ್ ಸ್ವಾಗತಿಸಿದರು. ಮತ್ತೋರ್ವ ಸದಸ್ಯ ಸಂದೀಪ್ ಮತ್ತು ಸಿದ್ದೇಶ್ ಶಾಸ್ತ್ರಿಗಳು ರಂಭಾಪುರಿ ಜಗದ್ಗುರುಗಳಿಗೆ ಮಲ್ಲಿಗೆಯ ಹೂಮಾಲೆ ಹಾಕಿ ಗೌರವ ಸಮರ್ಪಿಸಿದರು. ಬೆಂಗಳೂರಿನ ಎಸ್.ಜೆ.ಎಸ್.ಜೆ.ಆರ್.ಸಿ. ಕಾಲೇಜಿನ ಉಪನ್ಯಾಸಕಿ ಡಾ. ಮಮತಾ ಸಾಲಿಮಠ ನಿರೂಪಿಸಿದರು.
Related Articles
Thank you for your comment. It is awaiting moderation.
Comments (0)