ಮೋದಿಯಂತೆ 18 ಗಂಟೆ ಕೆಲಸ ಮಾಡಿ; ನವ ಉದ್ಯೋಗಿಗಳಿಗೆ ಶೋಭಾ ಕರಂದ್ಲಾಜೆ ಸಲಹೆ
- by Suddi Team
- July 12, 2025
- 184 Views

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿನಿತ್ಯ 18 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡುತ್ತಾರೆ. ಇದೇ ರೀತಿ ಉದ್ಯೋಗಿಗಳು ಸಹಾ ಹೆಚ್ಚಿನ ಸಮಯ ಕಾರ್ಯನಿರ್ವಹಿಸಿ, ತಮ್ಮ ಇಲಾಖೆಗಳ ಪ್ರಗತಿಗೆ ಶ್ರಮಿಸಬೇಕು. ಇದರಿಂದ, ಸದೃಡ ಹಾಗೂ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ), ಕಾರ್ಮಿಕ ಹಾಗೂ ಉದ್ಯೋಗ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಬೆಂಗಳೂರಿನಲ್ಲಿ ಆಯೋಜಿಸಿದ್ದ 16ನೇ ರೋಜ್ ಗಾರ್ ಮೇಳವನ್ನು ಉದ್ಘಾಟಿಸಿ, ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ನವ ಹಾಗೂ ಯುವ ಉದ್ಯೋಗಿಗಳು ವಿಕಸಿತ ಭಾರತವನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ತಮ್ಮ ಮುಂದಿನ ಸೇವಾ ಅವಧಿಯಲ್ಲಿ ಸಮರ್ಪಣಾ ಭಾವನೆ, ಹೃದಯ ಪೂರ್ವಕವಾಗಿ ಮತ್ತು ಅಂತರಾಳದಿಂದ ಕಾರ್ಯನಿರ್ವಹಿಸಬೇಕು. ಇದರಿಂದ, ದೇಶ ಮತ್ತಷ್ಟು, ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ. ಸದೃಢ ಭಾರತ ನಿರ್ಮಿಸಲು ಅನುಕೂಲವಾಗಲಿ ಎಂದರು.
ರೋಜ್ ಗಾರ್ ಮೇಳಗಳಿಂದ ಉದ್ಯೋಗ ಪಡೆದುಕೊಂಡವರಿಗೆ ಕೆಲಸ ಮಾಡಲು ಪ್ರೇರಣೆ ದೊರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಇದುವರೆಗೂ 16 ರೋಜ್ ಗಾರ್ ಮೇಳಗಳನ್ನು ಆಯೋಜಿಸಲಾಗಿದೆ. ಇಂದಿನ ರೋಜ್ ಗಾರ್ ಮೇಳದಲ್ಲಿ ಹಲವರು ದೇಶದ ಹೆಮ್ಮೆಯ ಸೇನೆಯಲ್ಲಿಯೂ ಕೆಲಸ ಮಾಡಲು ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಇದು ಅತ್ಯಂತ ಸಂತಸದ ಸಂಗತಿ. ನಮ್ಮ ಸೈನಿಕರು ಕೇವಲ ಸಂಬಳಕ್ಕೆ ಮತ್ತು ಕುಟುಂಬಕ್ಕೆ ಕೆಲಸ ಮಾಡುವುದಿಲ್ಲ. ಬದಲಾಗಿ ಅವರು ಭಾರತದ 140 ಕೋಟಿ ಜನರ ರಕ್ಷಣೆಗೆ ಬದ್ಧರಾಗಿ, ಅನುದಿನವೂ ಕೆಲಸ ಮಾಡುತ್ತಿದ್ದಾರೆ. ಸದಾಕಾಲವೂ ದೇಶದ ರಕ್ಷಣೆ, ಸೇವೆಗಾಗಿ ಸಮರ್ಪಿಸಿಕೊಂಡಿದ್ದಾರೆ ಎಂದರು.
2047ರ ವೇಳೆಗೆ ವಿಕಸಿತ ಭಾರತದ ಸಂಕಲ್ಪ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಢ ಸಂಕಲ್ಪವಾಗಿದೆ. ಇದರಲ್ಲಿ ಪ್ರತಿಯೊಬ್ಬ ಪ್ರಜೆಯ ಹಾಗೂ ಉದ್ಯೋಗಿಯ ಕಾರ್ಯ ಮಹತ್ವದ್ದಾಗಿದೆ. ಯುವ ಸಮೂಹ ಮತ್ತು ನವ ಉದ್ಯೋಗಿಗಳು ದೇಶದ ಪ್ರಗತಿಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಏಳು ಕೋಟಿಗೂ ಅಧಿಕ ಮಂದಿ ಇ.ಪಿ.ಎಫ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇದರ ಸಂಖ್ಯೆ ಕಳೆದ ಕೆಲ ವರ್ಷಗಳಿಂದ ಗಣನೀಯ ಏರಿಕೆ ಕಂಡಿದೆ. ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಿದೆ. ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೂ ಹಲವು ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರೈಲ್ವೆಯ 61, ಸಾರ್ವಜನಿಕ ವಲಯದ ಬ್ಯಾಂಕ್‌ಗಳ 46, ಬಿಎಸ್‌ಎಫ್ ಮತ್ತು ಸಿಐಎಸ್‌ಎಫ್ ನ 14, ಅಂಚೆ ಇಲಾಖೆಯ 12, ಆದಾಯ ತೆರಿಗೆ ಇಲಾಖೆಯಲ್ಲಿ 7 ಅಭ್ಯರ್ಥಿಗಳು ಸೇರಿ ಒಟ್ಟು 185 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
Related Articles
Thank you for your comment. It is awaiting moderation.
Comments (0)