ಸಣ್ಣಪುಟ್ಟ ವರ್ತಕರಿಗೆ ನೋಟಿಸ್ ವಿವಾದ; ಸ್ಪಷ್ಟೀಕರಣ ನೀಡಿದ ವಾಣಿಜ್ಯ ತೆರಿಗೆ ಇಲಾಖೆ

ಬೆಂಗಳೂರು: ಸಣ್ಣಪುಟ್ಟ ವರ್ತಕರಿಗೆ ಕಾನೂನು ರೀತಿಯಲ್ಲಿಯೇ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌‌ಗಳನ್ನು ನೀಡಿದ್ದು, ಈ ನೋಟಿಸ್‌ಗಳಿಗೆ, ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರಗಳನ್ನು ನೀಡಿ ಸರಿಯಾದ ತೆರಿಗೆಯನ್ನು ಪಾವತಿಸಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಸೂಚಿಸಿದೆ.

ಸಣ್ಣಪುಟ್ಟ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ ನೋಟಿಸ್‌ಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆಯು ಸ್ಪಷ್ಟನೆ ನೀಡಿದ್ದು, ನೋಟಿಸ್ ಅನ್ನು ಸಮರ್ಥಿಸಿಕೊಂಡಿದೆ. 2017ರ ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆಯು ದೇಶಾದ್ಯಂತ ಜಾರಿಗೆ ಬಂದಿರುತ್ತದೆ. ಈ ಕಾಯ್ದೆಯ ಕಲಂ 22ರನ್ವಯ ಸರಕು ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂಪಾಯಿಗಳನ್ನು ಮೀರಿದರೆ ಅಥವಾ ಸೇವೆಗಳ ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿಗಳನ್ನು ಮೀರಿದರೆ ಜಿಎಸ್‌ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದೆ.

ಈ ಸಮಗ್ರ ವಹಿವಾಟಿನಲ್ಲಿ (exempted & Taxable) ಸರಕು ಮತ್ತು ಸೇವೆಗಳು ಸೇರಿರುತ್ತವೆ. ಆದರೆ, ತೆರಿಗೆ ಬಾಧ್ಯತೆಯು Taxable ಸರಕುಗಳು ಮತ್ತು ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ತೆರಿಗೆ ಬಾಧ್ಯತೆಯು ಮಾರಾಟ ಮಾಡಿದ ಸರಕುಗಳ ಪ್ರಕಾರ ನಿರ್ದರಿಸಲ್ಪಡುತ್ತದೆ. (ಉದಾಹರಣೆಗೆ ಬ್ರೆಡ್ ಮಾರಾಟದ ಮೇಲೆ ತೆರಿಗೆ ಇರುವುದಿಲ್ಲ. ಕುರುಕುಲು ತಿಂಡಿಗಳ ಮೇಲೆ ಶೇ.5 ತೆರಿಗೆ ಬಾದ್ಯತೆ ಇರುತ್ತದೆ). ವಾಣಿಜ್ಯ ತೆರಿಗೆಗಳ ಇಲಾಖೆಯು ಏಕೀಕೃತ ಪಾವತಿ ವ್ಯವಸ್ಥೆಯ (UPI) ಮೂಲಕ ವರ್ತಕರು 2021-22 ರಿಂದ 2024-25ರ ಸಾಲಿನಲ್ಲಿ ಸ್ವೀಕರಿಸಿರುವ ಹಣದ ವಿವರಗಳನ್ನು ವಿವಿಧ UPI ಸೇವೆಗಳ ಪೂರೈಕೆದಾರರಿಂದ ಸಂಗ್ರಹಿಸಿರುತ್ತದೆ. ವರ್ತಕರು ಮಾರಾಟದ ಹಣವನ್ನು (UPI) ಮಾತ್ರವಲ್ಲದೇ ನಗದು ಮತ್ತು ಇತರ ವಿಧಾನಗಳಲ್ಲಿ ಕೂಡ ಪಡೆಯುತ್ತಾರೆ. ಆದ್ದರಿಂದ, UPI ಮೂಲಕ 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದಿರುವ ವರ್ತಕರ ವಾರ್ಷಿಕ ವಹಿವಾಟು ಇನ್ನೂ ಗಣನೀಯವಾಗಿ ಹೆಚ್ಚಾಗಿರುತ್ತದೆ ಎಂದು ಉಲ್ಲೇಖಿಸಿದೆ.

ಸದರಿ ಮಾಹಿತಿಯನ್ನು ಪರಿಶೀಲಿಸಿ, 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರಡಿಯಲ್ಲಿ ನೋಂದಣಿ ಪಡೆಯದೆ, ತೆರಿಗೆ ಪಾವತಿಸದೆ ಇರುವ ವರ್ತಕರಿಗೆ ನೋಟೀಸನ್ನು ಜಾರಿಗೊಳಿಸಲಾಗಿರುತ್ತದೆ. ಈ ನೋಟಿಸುಗಳಿಗೆ, ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರಗಳನ್ನು ನೀಡಿ ಸರಿಯಾದ ತೆರಿಗೆ ಪಾವತಿಸಬೇಕಾಗಿರುತ್ತದೆ‌. ಇಂತಹ ವರ್ತಕರು ತಕ್ಷಣ ನೋಂದಣಿ ಪಡೆಯಬೇಕಾಗಿರುತ್ತದೆ. ವಾರ್ಷಿಕ ವಹಿವಾಟು 1.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ಇರುವ ಸಣ್ಣ ವರ್ತಕರು ರಾಜಿ ತೆರಿಗೆಯನ್ನು ಆಯ್ಕೆ ಮಾಡಿ, ಇನ್ನು ಮುಂದೆ ಶೇ. 1 ತೆರಿಗೆ ಪಾವತಿಸಬಹುದಾಗಿರುತ್ತದೆ ಎಂದು ತಿಳಿಸಿದೆ.

ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಮಾಹಿತಿಯನ್ನು ಇಲಾಖೆಯ ಜಾಲತಾಣ https://gst.kar.nic.in/ ದಲ್ಲಿ ಪಡೆಯಬಹುದಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Comments (0)

Leave a Comment