ದೇಶ ವೇಗವಾಗಿ ಬೆಳವಣಿಗೆ ಸಾಧಿಸಲು ಚುನಾವಣಾ ವ್ಯವಸ್ಥೆಯಲ್ಲೂ ಸುಧಾರಣೆ ಅಗತ್ಯ; ಕೆ.ಅಣ್ಣಾಮಲೈ
- by Suddi Team
- July 11, 2025
- 42 Views

ಬೆಂಗಳೂರು: ದೇಶವು ವೇಗವಾಗಿ ಬೆಳವಣಿಗೆ ಸಾಧಿಸಬೇಕಿದೆ. ಇದಕ್ಕಾಗಿ ಚುನಾವಣಾ ವ್ಯವಸ್ಥೆಯಲ್ಲೂ ಸುಧಾರಣೆ ಅಗತ್ಯವಿದೆ,ಒಂದು ದೇಶ ಒಂದು ಚುನಾವಣೆ ಪ್ರಸ್ತುತ ಸನ್ನುವೇಶದಲ್ಲಿ ಅಗತ್ಯವಾಗಿದೆ ಎಂದು ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ತಿಳಿಸಿದ್ದಾರೆ.
ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಕುರಿತು ಇಂದು “ಮತ್ತಿಕೆರೆಯ ಐ.ಐ.ಎಸ್.ಸಿ”ಯಲ್ಲಿ ಏರ್ಪಡಿಸಿದ ಸಂವಾದದಲ್ಲಿ ಮಾತನಾಡಿದ ಅವರು,ಒಂದು ದೇಶ- ಒಂದು ಚುನಾವಣೆ ಎಂಬುದು ದಿಢೀರ್ ಆಗಿ ಮಾಡಿದ ಪರಿಕಲ್ಪನೆಯಲ್ಲ; 1952ರಿಂದ 1967ರವರೆಗೆ ಇದು ಜಾರಿಯಲ್ಲಿತ್ತು. ಬಳಿಕ ಈ ಕುರಿತಂತೆ ಚರ್ಚೆಯೂ ನಡೆದಿತ್ತು.
ಹಿಂದಿನ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಒಂದೇ ಚುನಾವಣೆ ಸಾಧ್ಯಾಸಾಧ್ಯತೆ ಕುರಿತು ಅದು ದೇಶಾದ್ಯಂತ ಅಭಿಪ್ರಾಯ ಸಂಗ್ರಹಿಸಿತ್ತು. ಅರ್ಧದಲ್ಲೇ ಒಂದು ಸರಕಾರ ಅಧಿಕಾರ ಕಳಕೊಂಡರೆ ಏನು ಮಾಡಬೇಕೆಂಬ ವಿಷಯದಲ್ಲೂ ಕೋವಿಂದ್ ಅವರ ಸಮಿತಿ ಶಿಫಾರಸನ್ನು ನೀಡಿದೆ ಎಂದು ಹೇಳಿದರು. 1980- 90ರ ನಡುವಿನ ಅವಧಿಯಲ್ಲಿ ಹೆಚ್ಚು ಸರಕಾರಗಳ ಪತನ ಆಗಿತ್ತು. 2000ನೇ ಇಸವಿಯ ಬಳಿಕ ಅದು ಕಡಿಮೆಯಾಗುತ್ತ ಸಾಗಿದೆ ಎಂದು ಹೇಳಿದರು.
1983ರಲ್ಲೇ ಚುನಾವಣಾ ಆಯೋಗವು ತನ್ನ ವಾರ್ಷಿಕ ವರದಿಯಲ್ಲಿ ಒಂದು ದೇಶ ಒಂದು ಚುನಾವಣೆ ಅಗತ್ಯ ಎಂದು ತಿಳಿಸಿತ್ತು. 1990ರಲ್ಲಿ ಕಾನೂನು ಆಯೋಗವು ಒಂದೇ ಚುನಾವಣೆ ಕುರಿತು ತಿಳಿಸಿತ್ತು. 2015ರಲ್ಲಿ ಸಂಸತ್ತಿನ ಸಾರ್ವಜನಿಕ ಕುಂದುಕೊರತೆ ಸಮಿತಿಯು ಇದೇ ವಿಚಾರವನ್ನು ಹೇಳಿತ್ತು. 2017ರಲ್ಲಿ ನೀತಿ ಆಯೋಗವು ಶ್ವೇತಪತ್ರ ಹೊರಡಿಸಿ ಒಂದು ದೇಶ- ಒಂದು ಚುನಾವಣೆ ಪದ್ಧತಿಯಿಂದ ಆಗುವ ಪ್ರಯೋಜನಗಳ ಕುರಿತು ವಿವರ ಕೊಟ್ಟಿತ್ತು. 2018ರಲ್ಲಿ ಕಾನೂನು ಆಯೋಗವು ಮತ್ತೊಮ್ಮೆ ಇದೇ ಅಭಿಪ್ರಾಯ ಮಂಡಿಸಿತ್ತು ಎಂದು ಹೇಳಿದರು.
2019ರಲ್ಲಿ ಚುನಾವಣಾ ಆಯೋಗವು ಇದೇ ಸಂಬಂಧ ಸರ್ವಪಕ್ಷಗಳ ಸಭೆ ನಡೆಸಿತ್ತು. ಇದರಲ್ಲಿ 19 ಪಕ್ಷಗಳು ಭಾಗವಹಿಸಿದ್ದವು. ಬಿಜೆಪಿ, ಎನ್ಸಿಪಿ, ಜೆಡಿಯು ಸೇರಿದಂತೆ 16 ಪಕ್ಷಗಳು ಒಂದು ದೇಶ ಒಂದು ಚುನಾವಣೆ ಆಗಲಿ ಎಂದಿದ್ದರೆ ಕಮ್ಯುನಿಸ್ಟ್ ಪಕ್ಷ, ಆರ್ಎಸ್ಪಿ, ಎಐಎಂಐಎಂ- ಹೀಗೆ ಮೂರು ಪಕ್ಷಗಳ ವಿರೋಧವಿತ್ತು ಎಂದರು.
1957ರಲ್ಲೂ ಒಂದು ದೇಶ ಒಂದು ಚುನಾವಣೆ ಪದ್ಧತಿಯೇ ಇತ್ತು. 1962ರಲ್ಲೂ ಸಂಸದರ ಆಯ್ಕೆ ಮತ್ತು ರಾಜ್ಯದ ವಿಧಾನಸಭೆಗಳಿಗೆ ಶಾಸಕರ ಆಯ್ಕೆಗಾಗಿ ಒಂದೇ ಬಾರಿ ಚುನಾವಣೆ ನಡೆದಿತ್ತು. 1967ರಲ್ಲೂ ಇದೇ ಪದ್ಧತಿ ಮುಂದುವರೆದಿತ್ತು. 1952ರಿಂದ 1967ರವರೆಗೆ ಒಂದು ರಾಷ್ಟ್ರ ಒಂದು ಚುನಾವಣೆಯ ಪದ್ಧತಿ ನಮ್ಮ ದೇಶದಲ್ಲಿತ್ತು ಎಂದು ನುಡಿದರು.
1969ರಲ್ಲಿ ಆಗಿನ ಕಾಂಗ್ರೆಸ್ ಪಕ್ಷದ ಒಳಜಗಳವಿತ್ತು. ಒಂದು ಬಣದಲ್ಲಿ ಇಂದಿರಾ ಗಾಂಧಿ, ಇನ್ನೊಂದು ಬಣದಲ್ಲಿ ಕಾಮರಾಜ್ ಮತ್ತಿತರರು ಇದ್ದರು. ಆಗ ಕಾಂಗ್ರೆಸ್ ಎರಡು ಪಕ್ಷಗಳಾಗಿ ಒಡೆಯಿತು. ಕಾಂಗ್ರೆಸ್ (ಒ), ಕಾಂಗ್ರೆಸ್ (ಆರ್) ರಚನೆ ಆಗಿತ್ತು. 1970ರಲ್ಲಿ ಇಂದಿರಾ ಗಾಂಧಿಯವರು 15 ತಿಂಗಳ ಅಧಿಕಾರ ಇನ್ನೂ ಬಾಕಿ ಇರುವಾಗಲೇ ಸಂಸತ್ತನ್ನು ವಿಸರ್ಜಿಸಿದ್ದರು. 1972ರಲ್ಲಿ ಚುನಾವಣೆ ನಡೆಯಬೇಕಿದ್ದರೂ 1970ರ ಡಿಸೆಂಬರ್ನಲ್ಲೇ ಅವರು ಸಂಸತ್ತನ್ನು ವಿಸರ್ಜಿಸಿದ್ದರಿಂದ ಒಂದು ಚುನಾವಣಾ ವ್ಯವಸ್ಥೆಯಲ್ಲಿ ಏರುಪೇರಾಯಿತು ಎಂದು ತಿಳಿಸಿದರು.
ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಕುರಿತು ಎಲ್ಲ ಕಡೆ ಚರ್ಚೆ ನಡೆದಿದೆ, 140 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಚೀನಾದಲ್ಲಿ ಮತದಾನ ಪದ್ಧತಿ ಇಲ್ಲ. ಕಮ್ಯುನಿಸ್ಟ್ ಪಕ್ಷದ ಆಡಳಿತ ಅಲ್ಲಿದೆ. ಕಳೆದ 46 ವರ್ಷಗಳಲ್ಲಿ 23 ವರ್ಷಗಳ ಕಾಲ ಚೀನಾವು ಎರಡಂಕಿ (10ಕ್ಕಿಂತ ಹೆಚ್ಚು) ಬೆಳವಣಿಗೆ ದಾಖಲಿಸಿದೆ. ಯುರೋಪ್ ಒಕ್ಕೂಟ, ಲ್ಯಾಟಿನ್ ಅಮೆರಿಕ ಮೊದಲಾದ ಕಡೆ ಪ್ರಜಾಸತ್ತಾತ್ಮಕ ವ್ಯವಸ್ಥೆ ಅವನತಿ ಕಾಣುತ್ತಿದೆ ಎಂದು ವಿಶ್ಲೇಷಿಸಿದರು.
ಜನಸಂಖ್ಯೆಗೆ ಅನುಗುಣವಾಗಿ ಇದೀಗ ಸಂಸತ್ತಿನ ಸಂಸದರ ಸಂಖ್ಯೆಯೂ 543ರಿಂದ ಹೆಚ್ಚಾಗಲಿದೆ. ಮಹಿಳೆಯರಿಗೆ ಶೇ 33 ಮೀಸಲಾತಿಯೂ ಇರಲಿದೆ. ಜೊತೆಗೇ ಒಂದೇ ಚುನಾವಣೆಯೂ ಬರಬೇಕಿದೆ. 1971ರ ಜನಗಣತಿ ಪ್ರಕಾರ ಬೆಂಗಳೂರಿನ ಸಂಸದರ ಸಂಖ್ಯೆ 3 ಇದೆ. ಬೆಂಗಳೂರು ಈಗ ಸುಮಾರು 3 ಕೋಟಿ ಜನರನ್ನು ಹೊಂದಿ ದೊಡ್ಡ ನಗರವಾಗಿದೆ. ಸಹಜವಾಗಿ ಬೆಂಗಳೂರಿನ ಸಂಸದರ ಸಂಖ್ಯೆ ಐದೋ, ಆರೋ, ಏಳೋ ಆಗಬಹುದು ಎಂದು ತಿಳಿಸಿದರು.
Related Articles
Thank you for your comment. It is awaiting moderation.
Comments (0)