ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲು ಹೈಕಮಾಂಡ್ ಒಪ್ಪಿದೆ; ಸಿಎಂ ಸಿದ್ದರಾಮಯ್ಯ

ನವದೆಹಲಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗೆ ಸ್ವತಃ ಮುಖ್ಯಮಂತ್ರಿಗಳೇ ಮತ್ತೊಮ್ಮೆ ಸ್ಪಷ್ಟೀಕರಣ ನೀಡುವ ಮೂಲಕ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ. ಐದು ವರ್ಷ ಮುಖ್ಯಮಂತ್ರಿಯಾಗಲು ಹೈಕಮಾಂಡ್ ಒಪ್ಪಿದೆ, ಮುಂದಿನ ಚುನಾವಣೆಗೂ ನನ್ನದೇ ನಾಯಕತ್ವ ಎನ್ನುವ ಮೂಲಕ‌ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಪರೋಕ್ಷವಾಗಿ ಟಕ್ಕರ್ ನೀಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎಂಬುದು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಪಕ್ಷದೊಳಗೆ ಅಂತಹ ಒಪ್ಪಂದವಾಗಲೀ, ಚರ್ಚೆಗಳಾಗಲೀ ಯಾವುದೂ ನಡೆಯುತ್ತಿಲ್ಲ. ಐದೂ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಈ ಬಗ್ಗೆ ಈಗಾಗಲೇ ನಮ್ಮ ಹೈಕಮಾಂಡ್, ರಣದೀಪ್ ಸಿಂಗ್ ಸುರ್ಜೇವಾಲಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲರೂ ಸ್ಪಷ್ಟನೆ ನೀಡಿದ್ದಾರೆ ಎಂದಿದ್ದಾರೆ.

ನಿನ್ನೆಯಷ್ಟೇ ಸುದೀರ್ಘವಾದ ಸುದ್ದಿಗೋಷ್ಟಿ ನಡೆಸಿ ಸಿಎಂ ಬದಲಾವಣೆ ವಿಷಯದ ಕುರಿತು ವಿವರಣೆ ನೀಡಿದ್ದ ಸಿದ್ದರಾಮಯ್ಯ, ಇಂದು ಮತ್ತೊಮ್ಮೆ ತಮ್ಮ ಸ್ಥಾನ ಅಚಲ ಎನ್ನುವ ಸಂದೇಶ ರವಾನಿಸುವ ಮೂಲಕ‌ ಡಿ.ಕೆ. ಶಿವಕುಮಾರ್ ತಂಡಕ್ಕೆ ಶಾಕ್ ನೀಡಿದ್ದಾರೆ.

ಸಿಎಂ ಪರ ಬ್ಯಾಟಿಂಗ್ ಮಾಡಿದ ಸಚಿವ ಎಂ.ಬಿ. ಪಾಟೀಲ, ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯಾಗಲಿ, ಕೆಪಿಸಿಸಿ ಅಧ್ಯಕ್ಷರ ಹುದ್ದೆಯಾಗಲಿ ಖಾಲಿ ಇಲ್ಲ. ಆದ್ದರಿಂದ, ಈ ಬಗ್ಗೆ ಯಾರೂ ಮಾತನಾಡಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್ಸಿನಲ್ಲಿ ಹೈಕಮಾಂಡೇ ಪರಮೋಚ್ಚ. ಅದು ಹೇಳುವ ಮಾತೇ ಅಂತಿಮ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಸಿಎಂ ಸ್ಪಷ್ಟೀಕರಣ ಹೊರಬೀಳುತ್ತಿದ್ದಂತೆ ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಬೇಸರಗೊಂಡಿದ್ದಾರೆ. ನೇರವಾಗಿ ಅಸಮಧಾನ ಹೊರಹಾಕದಿದ್ದರೂ ಪರೋಕ್ಷವಾಗಿ ಬೇಸರ ತೋರ್ಪಡಿಸಿಕೊಂಡಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಂತೆ, ಸಿಎಂ ಬದಲಾವಣೆ ವಿಚಾರದಲ್ಲಿ ಸದ್ಯಕ್ಕೆ ನಾನು ಯಾವುದೇ ಉತ್ತರ ನೀಡುವುದಿಲ್ಲ ಎಂದು ತಿಳಿಸಿದ್ದೇ ಇದಕ್ಕೆ ನಿದರ್ಶನ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರಿಗೆ ಕೆಲವು ಶಾಸಕರ ಬೆಂಬಲ ಮಾತ್ರವಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಚರ್ಚೆಯಾಗುತ್ತಿದೆ, ನಾನು ಪಕ್ಷದ ರಾಜ್ಯ ಅಧ್ಯಕ್ಷ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ. ನಾನು ನಿನ್ನೆ ಬ್ಯುಸಿ ಇದ್ದೆ. ಅದರ ಮಧ್ಯೆ ಮುಖ್ಯಮಂತ್ರಿಗಳ ಹೇಳಿಕೆ ನೋಡಿದೆ. ನಿಮ್ಮ ಪ್ರಶ್ನೆಗಳಿಗೆ ಅವರೇ ಉತ್ತರ ನೀಡಿದ್ದಾರೆ. ಅವರು ಉತ್ತರ ನೀಡಿದ ಮೇಲೆ ನಾವು ಮತ್ತೆ ಆ ವಿಚಾರ ಚರ್ಚೆ ಮಾಡುವುದು ಸೂಕ್ತವಲ್ಲ. ನೀವುಗಳು ಸಹ ಮತ್ತೆ ಆ ವಿಚಾರವಾಗಿ ಪ್ರಶ್ನೆ ಮಾಡುವುದು ಸೂಕ್ತವಲ್ಲ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬ ಆಸೆ ಅನೇಕರಿಗೆ ಇರುತ್ತದೆ ಎಂದು ಕೇಳಿದಾಗ, ನಿಮ್ಮಲ್ಲೂ ಅನೇಕರಿಗೆ ಅನೇಕ ಆಸೆ ಇರುತ್ತವೆ. ನಾನು ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಅವಶ್ಯಕತೆ ಇಲ್ಲ. ಯಾರು ಏನೇನು ಮಾತನಾಡಿದ್ದಾರೆ, ಅವರೇ ಪ್ರಶ್ನೆ ಉತ್ತರ ಎಲ್ಲವನ್ನು ನೀಡಿದ್ದಾರೆ. ಸದ್ಯಕ್ಕೆ ನಾನು ಯಾವುದೇ ಉತ್ತರ ನೀಡುವುದಿಲ್ಲ ಎಂದು ತಿಳಿಸಿದರು.

Related Articles

Comments (0)

Leave a Comment