ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮಾಜದ ಬಡವರ ಪರಿಸ್ಥಿತಿಯನ್ನು ಉತ್ತಮಪಡಿಸಿದೆ; ಸಿಎಂ
- by Suddi Team
- July 10, 2025
- 171 Views

ನವದೆಹಲಿ: ಸರ್ಕಾರ ಗ್ಯಾರಂಟಿ ಯೋಜನೆಗಳು ಸಮಾಜದ ಬಡವರ ಪರಿಸ್ಥಿತಿಯನ್ನು ಉತ್ತಮಪಡಿಸಬಹುದು ಎಂದು ಸಾಕಷ್ಟು ಚರ್ಚೆಯ ನಂತರ ನಿರ್ಣಯ ಮಾಡಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮಾಜದ ಬಡವರ ಪರಿಸ್ಥಿತಿಯನ್ನು ಉತ್ತಮಪಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ರಂಭಾಪುರಿ ಮಠದ ಸ್ವಾಮೀಜಿಗಳು ಗ್ಯಾರಂಟಿ ಯೋಜನೆಗಳಿಂದಾಗಿ ಜನ ಸೋಮಾರಿಗಳಾಗಿದ್ದಾರೆ ಎಂದು ಹೇಳೀಕೆ ನೀಡಿರುವ ಬಗ್ಗೆ ಮಾತನಾಡಿ, ಯಾವ ಹಿನ್ನೆಲೆ ಅಥವಾ ಸಂದರ್ಭದಲ್ಲಿ ಸ್ವಾಮೀಜಿಗಳು ಈ ರೀತಿ ಹೇಳಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದರೆ, ಹೆಣ್ಣುಮಕ್ಕಳು ಶಕ್ತಿ ಯೋಜನೆಯಡಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಿದರೆ ಸೋಮಾರಿಗಳಾಗುತ್ತಾರೆಯೇ ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ 7 ಕೋಟಿ ಜನರಿದ್ದು ಅದರ ಅರ್ಧ ಭಾಗವಿರುವ 3.5 ಕೋಟಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣಿಸಿದರೆ ಹಣ ಉಳಿತಾಯವಾಗುತ್ತದೆ. ಅವರ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ 2,000 ರೂ.ಗಳನ್ನು ಒದಗಿಸಿದರೆ ಅವರು ಮಕ್ಕಳನ್ನು ಓದಿಸುತ್ತಾರೆ ಎಂದರು.
ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ದೊರೆತಿರುವ ಸ್ವಾತಂತ್ರ್ಯ ಸಾರ್ಥಕವಾಗಬೇಕಾದರೆ ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು ಎಂದಿದ್ದರು. ಅವರು ಮೇಧಾವಿಗಳಾಗಿದ್ದು, ಅವರು ಹೇಳಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಜಾತಿ ಹೋಗಬೇಕಾದರೆ ಆರ್ಥಿಕವಾಗಿ ಸಬಲರಾಗಲು, ಸಮಾನತೆ ತರಲು ಸಮಾಜಿಕ ಆರ್ಥಿಕ ಶಕ್ತಿ ದೊರಕಬೇಕು ಎಂದರು. ದೇಶ ಕಂಡ ಮೇಧಾವಿಗಳಲ್ಲಿ ಅಪ್ರತಿಮ ಮೇಧಾವಿಗಳಾದ ಅಂಬೇಡ್ಕರ್ ಅವರು ದೇಶದಲ್ಲಿನ ಅಸಮಾನತೆ ಹೋಗದೇ ಹೋದರೆ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ. ಸಮಸಮಾಜದ ನಿರ್ಮಾಣಕ್ಕೆ ಜಾತೀಯತೆ, ವರ್ಗ ವ್ಯವಸ್ಥೆ ಹೋಗಬೇಕು ಎಂದಿದ್ದಾರೆ.
ಜೆಡಿಎಸ್ ಅಧಿಕಾರಕ್ಕೆ ಬರುವುದು ಹಗಲು ಗನಸು:
ಮೇಕೆದಾಟು ಅಣೆಕಟ್ಟು ನಾವು ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಾವು ಅಧಿಕಾರಕ್ಕೆ ಬಂದ ಕೂಡಲೆ ಮೇಕೆದಾಟು ಅಣೆಕಟ್ಟನ್ನು ನಿರ್ಮಿಸಲಾಗುವುದು ಎಂದು ಲೋಕಸಭಾ ಚುನಾವಣೆಯ ವೇಳೆ ಹೇಳುತ್ತಿದ್ದರು. ಈಗ ಯಾಕೆ ಈ ರೀತಿ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ ಅವರು ಅಧಿಕಾರಕ್ಕೆ ಬರುವುದಿಲ್ಲ. ಹಾಗೆಂದು ಮೇಕೆದಾಟು ಅಣೆಕಟ್ಟು ರಾಜ್ಯಕ್ಕೆ ಬೇಡವೆ ಎಂದು ಪ್ರಶ್ನಿಸಿದರು. ನಾನು ಜನತಾದಳದ (ಎಸ್) ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ 2004ರಲ್ಲಿ ಅತಿ ಹೆಚ್ಚು ಅಂದರೆ 59 ಸ್ಥಾನಗಳನ್ನು ಪಡೆದಿದ್ದೆವು. ಅವರ ಶಕ್ತಿ ಚುನಾವಣೆಯಿಂದ ಚುನಾವಣೆಗೆ ಕುಂಠಿತವಾಗಿದೆಯೇ ಹೊರತು ಹೆಚ್ಚಾಗಿಲ್ಲ. ಈಗ ಎಷ್ಟು ಸ್ಥಾನಗಳಿವೆ ಅವರಿಗೆ ಎಂದು ಪ್ರಶ್ನಿಸಿದ ಸಿಎಂ, ಅವರದ್ದು ಹಗಲುಗನಸು ಎಂದರು.
ಕ್ಯಾಂಪಸ್ ಆಯ್ಕೆ ಪರಿಚಯಿಸಲು ಸರ್ಕಾರದ ಚಿಂತನೆ:
ಕ್ಯಾಂಪಸ್ ಆಯ್ಕೆಯನ್ನು ವಿವಿ, ಕಾಲೇಜುಗಳಲ್ಲಿ ಪುನ: ಪರಿಚಯಿಸುವ ಬಗ್ಗೆ ಚಿಂತನೆ ಸರ್ಕಾರಕ್ಕಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಿಎಂ ಪತ್ನಿಗೆ ನೋಟೀಸು; ವಿಷಯ ತಿಳಿದಿಲ್ಲ:
ಮುಡಾ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯ ಮುಖ್ಯಮಂತ್ರಿಗಳ ಪತ್ನಿಗೆ ನೋಟೀಸು ಜಾರಿ ಮಾಡಲು ಆದೇಶ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ನನಗೆ ತಿಳಿದಿಲ್ಲ, ಎಂದರು.
ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಹೆಚ್ಚಿನ ಹೋರಾಟ ಮಾಡುತ್ತಿದ್ದು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಪೈಕಿ ಸಿದ್ದರಾಮಯ್ಯ ಅವರು ಮಾತ್ರ ಒಬಿಸಿ ಸಿಎಂ ಆಗಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಯಾರೋ ಒಬ್ಬರು ಇಬ್ಬರು ಹೇಳಿದರೆ ಅದು ಹೈ ಕಮಾಂಡ್ ಚರ್ಚೆ ಮಾಡಿದಂತೆ ಅಲ್ಲ ಎಂದರು.
ಸಚಿವ ಸಂಪುಟದಲ್ಲಿ ಚರ್ಚೆಯಾಗಿಲ್ಲ:
ಸಿಬಿಎಸ್‌ಸಿ ಕನ್ನಡ ಪತ್ರಿಕೆಯನ್ನು 125 ಅಂಕಗಳಿಂದ 100ಕ್ಕೆ ಇಳಿಸುವ ಪ್ರಸ್ತಾಪ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಸಚಿವ ಸಂಪುಟದಲ್ಲಿ ಮಂಡನೆಯಾಗಲೀ, ಚರ್ಚೆಯಾಗಲೀ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಜನೌಷಧ ಕೇಂದ್ರ ಬಂದ್-ಮಾಹಿತಿ ಪಡೆದು ಪ್ರತಿಕ್ರಿಯೆ:
ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಜನೌಷಧ ಕೇಂದ್ರ ಬಂದ್ ಮಾಡಿರುವ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡಲಾಗುವುದು ಎಂದರು.
Related Articles
Thank you for your comment. It is awaiting moderation.
Comments (0)