ಒಎನ್‌ಡಿಸಿಗೆ ನಮ್ಮ ಮೆಟ್ರೊ; ರ‌್ಯಾಪಿಡೋ, ನಮ್ಮ ಯಾತ್ರಿ ಸೇರಿ 9 ಅಪ್ಲಿಕೇಷನ್‌ಗಳಲ್ಲಿ ಕ್ಯೂಆರ್ ಟಿಕೆಟ್ ಲಭ್ಯ
- by Suddi Team
- July 8, 2025
- 37 Views

ಬೆಂಗಳೂರು: ನಮ್ಮ ಮೆಟ್ರೊ ಟಿಕೆಟ್‌ಗಳು ಈಗ ಹೆಚ್ಚುವರಿ 9 ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿದ್ದು, ಪ್ರಯಾಣಿಕರಿಗೆ ಸುಗಮ ಹಾಗೂ ತಡೆರಹಿತ ಟಿಕೆಟ್ ಬುಕ್ಕಿಂಗ್ ಅನುಭವವನ್ನು ಒದಗಿಸುತ್ತವೆ ಎಂದು ನಮ್ಮ ಮೆಟ್ರೊ ರೈಲು ಸೇವೆ ಒದಗಿಸುತ್ತಿರುವ ಬಿಎಂಆರ್‌ಸಿಎಲ್ ಹೇಳಿದೆ.
ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ದೃಷ್ಟಿಯಿಂದ, ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ತನ್ನ ಸೇವೆಗಳಲ್ಲಿ ಮಹತ್ವಪೂರ್ಣ ಬದಲಾವಣೆ ಮಾಡಿದ್ದು, ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ಮೂಲಕ ಕ್ಯೂಆರ್ ಟಿಕೆಟ್ ಸೇವೆ ನೀಡಲು ಚಾಲನೆ ನೀಡಿದೆ.
ಈ ಹೊಸ ಸೌಲಭ್ಯದಿಂದ ಮೆಟ್ರೊ ಪ್ರಯಾಣಿಕರು ಈಗಿನಿಂದ ಈಜಿ ಮೈ ಟ್ರಿಪ್ (EaseMyTrip), ಹೈವೇ ಡಿಲೈಟ್ (Highway Delite), ಮೈಲ್ಸ್ ಆ್ಯಂಡ್ ಕಿಲೋಮೀಟರ್ಸ್ ವಯಾ ಟೆಲೆಗ್ರಾಮ್ (Miles & Kilometres via Telegram), ನಮ್ಮ ಯಾತ್ರಿ (Namma Yatri), ಒನ್ ಟಿಕೆಟ್ (OneTicket), ರ‌್ಯಾಪಿಡೋ (Rapido), ರೆಡ್‌ಬಸ್ (Redbus), ಟಮ್ಮಾಕ್ (Tummoc) ಮತ್ತು ಯಾತ್ರಿ – ಸಿಟಿ ಟ್ರಾವೆಲ್ ಗೈಡ್ (Yatri – City Travel Guide) ಎನ್ನುವ ಒಂಬತ್ತು ಜನಪ್ರಿಯ ಅಪ್ಲಿಕೇಶನ್‌ಗಳ ಮೂಲಕ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.
ಈ ಹೊಸ ಆಯ್ಕೆಗಳು ಈಗಾಗಲೇ ಲಭ್ಯವಿರುವ ಟಿಕೆಟ್ ಬುಕ್ಕಿಂಗ್ ಆಯ್ಕೆ ಮಾರ್ಗಗಳಾದ ನಮ್ಮ ಮೆಟ್ರೊ ಮೊಬೈಲ್ ಆ್ಯಪ್, ಬಿಎಂಆರ್‌ಸಿಎಲ್ ವಾಟ್ಸಾಪ್ ಚಾಟ್ ಬಾಟ್ (8105556677), ಮತ್ತು ಪೇಟಿಎಂ (Paytm) ಆ್ಯಪ್‌ಗೆ ಪೂರಕವಾಗಿ ಸೇರುತ್ತಿದ್ದು, ಡಿಜಿಟಲ್ ಬಳಕೆದಾರರಿಗೆ ಇನ್ನಷ್ಟು ಸುಲಭ, ಲಭ್ಯವಿರುವ ಮತ್ತು ಸಹಜ ಟಿಕೆಟ್ ಬುಕ್ಕಿಂಗ್ ಅನುಭವ ಒದಗಿಸುತ್ತವೆ.
ಈ ಕುರಿತು ಮಾಹಿತಿ ನೀಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್, ಡಿಜಿಟಲ್ ಟಿಕೆಟ್ ವ್ಯವಸ್ಥೆಯ ಈ ವಿಸ್ತರಣೆಯು ಮೊದಲ ಹಂತದಿಂದ ಕೊನೆಯ ಹಂತದ ಸಂಪರ್ಕವರೆಗೆ (ಫಸ್ಟ್ ಮಿಡ್ ಮತ್ತು ಲಾಸ್ಟ್ ಮೈಲ್ ಕನೆಕ್ಟಿವಿಟಿ) ಏಕೀಕೃತಗೊಳಿಸುವ ನಮ್ಮ ದೀರ್ಘಕಾಲಿಕ ಪ್ರಯತ್ನದ ಭಾಗವಾಗಿದೆ. ಈಗಾಗಲೇ 2023ರಿಂದ ಒಎನ್‌ಡಿಸಿ ನೆಟ್ವರ್ಕ್‌ನಲ್ಲಿ ಆಟೋ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿರುವ ಹಿನ್ನೆಲೆಯಲ್ಲಿ, ಮೆಟ್ರೊ ಟಿಕೆಟ್‌ಗಳ ಸೇರ್ಪಡೆ ಬಹು ಮಾಧ್ಯಮ ಸಂಚಾರ ವ್ಯವಸ್ಥೆಯ ಪ್ರಮುಖ ಅಂಗವಾಗುತ್ತಿದೆ ಎಂದರು.
ಪ್ರಯಾಣಿಕರು ಇದೀಗ ಒಂದೇ ಅಪ್ಲಿಕೇಷನ್‌ನಿಂದ ತಮ್ಮ ಮನೆಯಿಂದ ಗಮ್ಯ ಸ್ಥಳದವರೆಗೆ ಸಂಪೂರ್ಣ ಪ್ರಯಾಣವನ್ನು ಸುಲಭವಾಗಿ ಯೋಜಿಸಬಹುದಾಗಿದ್ದು, ಇದು ಸಮಯ ಮತ್ತು ಶ್ರಮ ಉಳಿತಾಯವನ್ನು ದ್ವಿಗುಣಗೊಳಿಸುತ್ತದೆ. ಬಿಎಂಆರ್‌ಸಿಎಲ್ ಈ ಮೂಲಕ ಒಂದು ಮುಕ್ತ, ಒಳಗೊಳ್ಳುವಿಕೆಯಿಂದ ಕೂಡಿದ, ತಂತ್ರಜ್ಞಾನಾಧಾರಿತ ಭವಿಷ್ಯದ ನಗದುರಹಿತ ನಗರ ಸಂಚಾರ ವ್ಯವಸ್ಥೆ ಕಡೆಗೆ ನಿರ್ಣಾಯಕ ಹೆಜ್ಜೆ ಇಡುತ್ತಿದೆ ಎಂದು ಹೇಳಿದರು.
ವಾರದ ದಿನಗಳಲ್ಲಿ ಪ್ರತಿ ದಿನ 8.5 ಲಕ್ಷಕ್ಕೂ ಅಧಿಕ ಪ್ರಯಾಣಿಕರು ನಮ್ಮ ಮೆಟ್ರೊ ಸೇವೆ ಬಳಸುತ್ತಿರುವ ಸಂದರ್ಭದಲ್ಲಿ, ಬೆಂಗಳೂರು ನಗರದಲ್ಲಿ ಸುಗಮ, ಏಕೀಕೃತ ಹಾಗೂ ಆ್ಯಪ್ ಆಧಾರಿತ ಸಾರಿಗೆ ಅನುಭವದತ್ತ ಮಹತ್ವದ ಮುಂದಿನ ಹೆಜ್ಜೆಯಾಗಿದೆ ಎಂದರು.
Related Articles
Thank you for your comment. It is awaiting moderation.
Comments (0)