ಹಣಕಾಸು ಸ್ಥಿತಿಯ ವಾಸ್ತವಿಕ ಮಾಹಿತಿ ನೀಡಿ; ಸಿಎಂ‌ಗೆ ಯಡಿಯೂರಪ್ಪ ಆಗ್ರಹ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು, ನಮ್ಮ ಆರೋಪ ತಳ್ಳಿಹಾಕುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಹಣಕಾಸಿನ ಸ್ಥಿತಿಯ ವಾಸ್ತವಿಕತೆಯ ಮಾಹಿತಿ ನೀಡಲಿ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಅವರು, ನಾವು ಅನೇಕ ಬಾರಿ ಸರ್ಕಾರ ದಿವಾಳಿಯಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುವಂತಹ ಪರಿಸ್ಥಿತಿ ಈ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದ್ದೇವೆ. ಆದರೆ, ಸರ್ಕಾರ ಇದನ್ನು ನಿರಾಕರಿಸುತ್ತಲೇ ಬಂದಿತ್ತು. ಪ್ರಸ್ತುತ ಗೃಹಲಕ್ಷ್ಮೀ ಯೋಜನೆಗೆ ಕಳೆದ 3 ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ. ಅನ್ನಭಾಗ್ಯ ಯೋಜನೆಯಡಿ ಆಹಾರ ಸರಬರಾಜು ಮಾಡುವ ಲಾರಿ ಮಾಲೀಕರಿಗೆ ಸುಮಾರು 250 ಕೋಟಿ ಬಾಡಿಗೆ ಬಾಕಿ ಇಟ್ಟುಕೊಂಡಿದ್ದಾರೆ. ಇದೇ ಸರ್ಕಾರದ ಆರ್ಥಿಕ ಸ್ಥಿತಿಗೆ ನಿದರ್ಶನ ಎಂದರು.

ಕಾಂಗ್ರೆಸ್ ಸರ್ಕಾರದ ಯಾವುದೇ ಒಂದು ಕಾರ್ಯಕ್ರಮ ಕೇವಲ ಪ್ರಚಾರಕ್ಕಾಗಿ ನಡೆಯುವ ಕಾರ್ಯಕ್ರಮಗಳೇ ಹೊರತು ಅದನ್ನು ಕಾರ್ಯರೂಪಕ್ಕೆ ತರುವಂಹ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿರುವುದಿಲ್ಲ. ಹೀಗಾಗಿ ಸರ್ಕಾರ ದಿವಾಳಿಯಾಗಿದೆ ಎಂಬುದು ಈ ಎಲ್ಲ ವಿಷಯ ಮತ್ತು ದಾಖಲೆಗಳ ಮೂಲಕ ಸ್ಪಷ್ಟವಾಗುತ್ತಿದೆ. ಸರ್ಕಾರದ ವಾಸ್ತವಿಕ ಸ್ಥಿತಿಯನ್ನು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯ ಮಂತ್ರಿಗಳು ಒಪ್ಪಿಕೊಳ್ಳಲಿ ಹಾಗೂ ರಾಜ್ಯದಲ್ಲಿನ ವಾಸ್ತವಿಕ ಹಣಕಾಸಿನ ಸ್ಥಿತಿಯನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.

Related Articles

Comments (0)

Leave a Comment