ಸಮಸ್ಯೆಗಳಿದ್ದರೆ ಬರವಣಿಗೆ ರೂಪದಲ್ಲಿ ನೀಡಿ; ಅಸಮಾಧಾನಿತರಿಗೆ ಸುರ್ಜೇವಾಲ ಸೂಚನೆ
- by Suddi Team
- July 8, 2025
- 187 Views

ಬೆಂಗಳೂರು: ಪಕ್ಷದಲ್ಲಿ ಕೆಲ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಅವರಿಗೆ ಆಗುತ್ತಿರುವ ಸಮಸ್ಯೆ, ಗೊಂದಲದ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡುವಂತೆ ಸೂಚನೆ ನೀಡಿರುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯ ಭೇಟಿಗೆ ವಿಶೇಷ ಕಾರಣವಿಲ್ಲ. ಶಾಸಕರ ಕ್ಷೇತ್ರದ ಪ್ರಗತಿ ಸೇರಿದಂತೆ ಗ್ಯಾರಂಟಿ ಯೋಜನೆಗಳು ಹೇಗೆ ಜನರಿಗೆ ತಲುಪಿವೆ ಎಂದು ತಿಳಿದುಕೊಳ್ಳುವುದು. ಮುಂದಿನ ವಿಧಾನಸಭಾ ಚುನಾವಣೆ ಬಗ್ಗೆ ಸಂಘಟನೆ ವಿಚಾರದ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಪಕ್ಷದಲ್ಲಿ ಕೆಲ ಹಿರಿಯ ಶಾಸಕರೂ ಸೇರಿ ಕೆಲವರು ಬಹಿರಂಗವಾಗಿ ಗ್ಯಾರಂಟಿ ಯೋಜನೆ ಸೇರಿ ಹಲವು ವಿಷಯ ಪ್ರಸ್ತಾಪಿಸಿದ್ದಾರೆ, ಅಭಿವೃದ್ಧಿ ವಿಚಾರಗಳಲ್ಲಿ ಅಸಮಧಾನ ಹೊರಹಾಕಿದ್ದು ಗಮನಕ್ಕೆ ಬಂದಿದೆ. ನಮ್ಮ ಶಾಸಕರು ಒಂದಷ್ಟು ಇರುಸು ಮುರುಸು ಅನುಭವಿಸುತ್ತಿದ್ದಾರೆ ಎನ್ನುವುದು ನಿಜ. ಇದನ್ನು ಬರವಣಿಗೆ ರೂಪದಲ್ಲಿ ನೀಡಿ ಎಂದು ಹೇಳಿದ್ದೇನೆ ಎಂದರು.
ಕೇಂದ್ರದ ವಿರುದ್ಧ ವಾಗ್ದಾಳಿ:
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ರೈತರ ಜೀವ ಹಿಂಡುತ್ತಿದೆ. ರೈತರ ಮಾರುಕಟ್ಟೆಯನ್ನು ಹಾಳುಗೆಡವುತ್ತಿದೆ. ತೊಗರಿ ಬೇಳೆಯ ಆಮದು ನೀತಿಯಿಂದಾಗಿ ರಾಜ್ಯದ ತೊಗರಿ ಬೆಳೆಗಾರರು ವಾರ್ಷಿಕವಾಗಿ 1,550 ಸಾವಿರ ಕೋಟಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕದ ಪ್ರಲ್ಹಾದ್ ಜೋಶಿ, ಸೋಮಣ್ಣ ಏನು ಮಾಡುತ್ತಿದ್ದಾರೆ? ಸ್ವಯಂ ಘೋಷಿತ ರೈತನ ಮಗನಾದ ಕುಮಾರಸ್ವಾಮಿ ಕರ್ನಾಟಕದ ರೈತರ ಕತ್ತು ಹಿಸುಕುತ್ತಿದ್ದರೂ ಏನೂ ಮಾತನಾಡದೇ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ಕರ್ನಾಟಕ ಸರ್ಕಾರ 11,032 ರೂ. ಮೂಲ ಬೆಲೆಯೊಂದಿಗೆ 16,548 ರೂ. ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ ತೊಗರಿಗೆ ಘೋಷಣೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಆಗ್ರಹ ಮಾಡಿದ್ದರು. ಆದರೂ, ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಎಸಗುತ್ತಿದೆ. ಉದ್ದೇಶಪೂರ್ವಕವಾಗಿಯೇ ಮೋದಿ ಸರ್ಕಾರ ತೊಗರಿ ಹಾಗೂ ಇತರ ಕಾಳುಗಳ ಬೆಳೆಗಾರರಿಗೆ ದ್ರೋಹ ಬಗೆಯುತ್ತಿದೆ. ಕೇಂದ್ರ ಕೃಷಿ ಮಂತ್ರಾಲಯ 2022-23ರ ವರೆಗೆ ಮಾತ್ರ ದಾಖಲೆಗಳನ್ನು ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. ದೇಶದ ರೈತರು 276 ಲಕ್ಷ ಕೋಟಿ ಟನ್ ತೊಗರಿ ಹಾಗೂ ಬೇಳೆ ಕಾಳುಗಳ ಉತ್ಪಾದನೆ ಮಾಡಿದ್ದಾರೆ. ಕುಚೋದ್ಯವೆಂದರೆ ಮೋದಿ ಸರ್ಕಾರ ಖರೀದಿ ಮಾಡಿರುವುದು 1.20 ಲಕ್ಷ ಕೋಟಿ ಮಾತ್ರ. ಅಂದರೆ, 274 ಲಕ್ಷ ಕೋಟಿ ಟನ್ ಬೆಳೆ ಎಂಎಸ್ಪಿ ಒಳಗೆ ಬಂದೇ ಇಲ್ಲ. ಹೀಗಿದ್ದಾಗ ಇದರ ಉಪಯೋಗವೇನು ಎಂಬುದನ್ನು ಮೋದಿ ಅವರು ತಿಳಿಸಬೇಕು. ಎಂಎಸ್ಪಿ ಎನ್ನುವುದು ರೈತರಿಗೆ ಹಕ್ಕಿಯ ಹಿಕ್ಕೆಯಂತಾಗಿದೆ ಎಂದು ಟೀಕಿಸಿದರು.
ಸಂಸದ ತೇಜಸ್ವಿಸೂರ್ಯ ಕರ್ನಾಟಕ ಸರ್ಕಾರ ದಿವಾಳಿಯಾಗಿದೆ ಎಂದು ಹೇಳಿರುವ ಬಗ್ಗೆ ಕೇಳಿದಾಗ, ಮೊದಲು ಆತ ಅಮೆರಿಕದಲ್ಲಿ ಆದ ಅವಮಾನದ ಬಗ್ಗೆ ಉತ್ತರ ನೀಡಲಿ. ಇದು ಅವರಿಗೆ ಮಾತ್ರ ಆದ ಅವಮಾನವಲ್ಲ, ದೇಶಕ್ಕಾದ ಅಪಮಾನ. ಅಪಮಾನ ಅನುಭವಿಸಿದರೂ ಸುಮ್ಮನಿರುವ ಬಗ್ಗೆ ಕೇಳಿ ಎಂದರು.
Related Articles
Thank you for your comment. It is awaiting moderation.
Comments (0)