ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಸಿಎಂ ವಿರುದ್ಧ ದೂರು ನೀಡಿಲ್ಲವೇಕೆ?: ವಿಜಯೇಂದ್ರ

ಬೆಂಗಳೂರು: ಪಕ್ಷದ ನಾಯಕ ರವಿಕುಮಾರ್ ವಿರುದ್ಧ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ದೂರು ನೀಡಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಐಎಎಸ್ ಅಧಿಕಾರಿಗಳ ವಿರುದ್ಧ ಅವಮಾನ ಆಗುವಂತೆ ನಡೆದುಕೊಂಡಾಗ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯ ರವಿಕುಮಾರ್ ತಮ್ಮ ಹೇಳಿಕೆ ಸಂಬಂಧ ಸ್ಪಷ್ಟನೆಯನ್ನ ನೀಡಿದ್ದಾರೆ. ಅದಾದ ನಂತರ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್‍ನವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ಬೆಳಗಾವಿಯಲ್ಲಿ ಬಹಿರಂಗ ಸಭೆಯಲ್ಲಿ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಗೆ ಕಪಾಳಕ್ಕೆ ಹೊಡೆಯಲು ಹೋದಾಗ ಈ ಅಸೋಸಿಯೇಷನ್ ಎಲ್ಲಿ ಹೋಗಿತ್ತು? ಇದೇ ಮುಖ್ಯಮಂತ್ರಿಗಳು ಇನ್ನೊಂದು ಕಡೆ ಸರಕಾರಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳನ್ನು ‘ಏಯ್ ಎದ್ದೇಳು’ ಎಂದು ಅಪಮಾನ ಮಾಡಿದ್ದರು. ಆಗ ಐಎಎಸ್ ಅಸೋಸಿಯೇಷನ್ ಎಲ್ಲಿ ಹೋಗಿತ್ತು? ಇದು ಕೂಡ ಚರ್ಚೆ ಆಗಲಿ ಎಂದು ರವಿಕುಮಾರ್ ಪರ ಬ್ಯಾಟ್ ಬೀಸಿದರು.

ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಹಳ ಜನ ಪ್ರಾರ್ಥನೆ ಮಾಡುತ್ತಿದ್ದಾರೆ; ಪ್ರಯತ್ನವನ್ನೂ ಮಾಡುತ್ತಿದ್ದಾರೆ.ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲಾರನ್ನು ಕರೆಸಿ ಭೂಮಿ ಪೂಜೆ, ಗುದ್ದಲಿ ಪೂಜೆ ಮಾಡಿಸಲಿದ್ದಾರೆ ಎಂದು ಪರೋಕ್ಷವಾಗಿ ಡಿಸಿಎಂ ಹೆಸರೇಳದೆ ಲಾಭಿ ಹಿಂದೆ ಯಾರಿದ್ದಾರೆ ಎನ್ನುವುದನ್ನು ಉಲ್ಲೇಖಿಸಿದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರೆಸ್ಸೆಸ್ ನಿಷೇಧಿಸುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರವು ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ನರೇಂದ್ರ ಮೋದಿ ಅವರ ಜನಪ್ರಿಯತೆಯೂ ಜಾಸ್ತಿ ಆಗುತ್ತಿದೆ. ದೇಶವೂ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುತ್ತಿದೆ. ಪ್ರಿಯಾಂಕ್ ಖರ್ಗೆ ರಾತ್ರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದರೆ ಅದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದು ತಿಳಿಸಿದರು.

Related Articles

Comments (0)

Leave a Comment