ಖರ್ಗೆ ಮಾತಿಗೆ ಬದ್ಧವಾಗಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ: ಡಿ.ಕೆ.ಶಿವಕುಮಾರ್
- by Suddi Team
- July 4, 2025
- 40 Views

ಮೈಸೂರು: ಪಕ್ಷದ ಹಿರಿಯ ನಾಯಕರಾಗಿರುವ“ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರು. ಅವರು ನಮಗೆ ಬುದ್ಧಿವಾದ ಹೇಳಿದ್ದಾರೆ, ಸಂದೇಶ ನೀಡಿದ್ದಾರೆ. ಅವರ ಮಾತಿಗೆ ನಾವೆಲ್ಲರೂ ಬದ್ಧರಾಗಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಆಷಾಡ ಶುಕ್ರವಾದ ಪ್ರಯುಕ್ತ ದೇವಿಯ ದರ್ಶನ ಪಡೆದ ಡಿಸಿಎಂ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಿಎಂ ರೇಸ್ ನಿಂದ ನೀವು ಹೊರಬಿದ್ದಿದ್ದೀರಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, “ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದಿದ್ದೇನೆ. ಇಲ್ಲಿ ರಾಜಕೀಯ ಮಾತನಾಡುವುದಕ್ಕೆ ಬಂದಿಲ್ಲ. ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಬಂದಿದ್ದೇನೆ” ಎಂದು ತಿಳಿಸಿದರು.
“ಯಾವುದೇ ಕೆಲಸ ಪ್ರಾರಂಭ ಮಾಡಬೇಕಾದರೂ ತಾಯಿಯ ಆಶೀರ್ವಾದ ಕೇಳುತ್ತೇನೆ. ಆದ ಕಾರಣ ಕುಟುಂಬ ಸಮೇತವಾಗಿ ಬಂದು ಈ ರಾಜ್ಯಕ್ಕೆ, ನಿಮಗೆ ಹಾಗೂ ನಮಗೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ” ಎಂದರು.
ನಿಮ್ಮ ಪ್ರಾರ್ಥನೆಗೆ ಭಗವಂತ ಫಲ ನೀಡುವ ದಿನಗಳು ಹತ್ತಿರ ಬಂದಿವೆಯೇ ಎಂದು ಕೇಳಿದಾಗ, “ನನಗೆ ಏನು ಬೇಕೋ ಅದನ್ನು ಪ್ರಾರ್ಥನೆ ಮಾಡಿದ್ದೇನೆ” ಎಂದು ಮಾರ್ಮಿಕವಾಗಿ ನುಡಿದರು.
“ದುಃಖವನ್ನು ದೂರ ಮಾಡುವ ದೇವಿ ದುರ್ಗಾದೇವಿ. ಈ ವರ್ಷ ನಾಡದೇವಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ರಾಜ್ಯದಲ್ಲಿ ಉತ್ತಮವಾಗಿ ಮಳೆ ಬೀಳುತ್ತಿದೆ. ಈ ವರ್ಷ ಉತ್ತಮ ಮಳೆ, ನೆಮ್ಮದಿ, ಶಾಂತಿ ಲಭಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಪ್ರಯತ್ನ ವಿಫಲವಾಗಬಹುದು ಪ್ರಾರ್ಥನೆ ವಿಫಲವಾಗುವುದಿಲ್ಲ ಎನ್ನುವುದು ನನ್ನ ನಂಬಿಕೆ” ಎಂದು ತಿಳಿಸಿದರು.
Related Articles
Thank you for your comment. It is awaiting moderation.
Comments (0)