ಜೀವನದಲ್ಲಿ ಗುರಿ ಇರಬೇಕೆ ಹೊರತು ಉರಿ ಇರಬಾರದು; ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- July 4, 2025
- 186 Views

ಬೆಂಗಳೂರು:ಮನಸ್ಸಿಗೆ ಬಂದಂತೆ ಮಾತನಾಡಿದರೆ ಸಂಬಂಧಗಳು ಕೆಟ್ಟು ಹೋಗುತ್ತವೆ. ಮನಸ್ಸಿಗೆ ಬಂದದ್ದೆಲ್ಲ ತಿಂದರೆ ಆರೋಗ್ಯ ಕೆಟ್ಟು ಹೋಗುತ್ತದೆ. ಪರಸ್ಪರ ನಂಬಿಕೆ ವಿಶ್ವಾಸಗಳು ಮುಖ್ಯ. ಜೀವನದಲ್ಲಿ ಗುರಿ ಇರಬೇಕೇ ಹೊರತು ಬೇರೆಯವರ ಮೇಲೆ ಉರಿ ಇರಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಮದ್ದೀರಶೈವ ಸದ್ದೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಘಟಕದಿಂದ ಸಂಘಟಿಸಿದ ಧರ್ಮೋತೇಜಕ ಸಂಗಮ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು,ಸಮಯ ಸ್ನೇಹ ಮತ್ತು ಆರೋಗ್ಯಕ್ಕೆ ಬೆಲೆ ಕಟ್ಟಲಾಗದು ಅವುಗಳನ್ನು ಕಳೆದುಕೊಂಡಾಗ ನಿಜವಾದ ಬೆಲೆ ತಿಳಿಯುತ್ತದೆ. ಅರ್ಥ ಮಾಡಿಕೊಳ್ಳುವ ಮನಸ್ಸು ಕ್ಷಮಿಸುವ ಗುಣ ಕೈ ಜೋಡಿಸುವ ಸ್ನೇಹ ಸಮಾಧಾನ ಮಾಡುವ ಹೃದಯ ಜೀವನಕ್ಕೆ ನಿಜವಾದ ಆಸ್ತಿ. ಸುಖ ಯಾವಾಗಲೂ ಸಾಸುವೆ ಕಾಳಿನಷ್ಟು, ಕಷ್ಟ ಸಾಗರದಷ್ಟು ಜೀವನವು ಸಹ ಹಾಗೆ, ಕತ್ತಲು ದೊಡ್ಡದು. ಅದನ್ನು ಓಡಿಸುವ ದೀಪ ಚಿಕ್ಕದು. ನಿಜವಾದ ಆಧ್ಯಾತ್ಮ ಸಾಧನೆಯಿಂದ ಸುಖ ಶಾಂತಿ ಪ್ರಾಪ್ತವಾಗುತ್ತದೆ ಎಂಬ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಎಲ್ಲರಿಗೂ ಎಲ್ಲ ಕಾಲಕ್ಕೂ ಅನ್ವಯಿಸುತ್ತವೆ ಎಂದರು.
‘ಬಾಳಿಗೆ ಬೆಳಗು’ ಕಿರು ಕೃತಿ ಬಿಡುಗಡೆ ಮಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಇಂದಿನ ನವ ನಾಗರೀಕತೆಯಲ್ಲಿ ಧರ್ಮ ಸಂಸ್ಕೃತಿ ಮತ್ತು ಆದರ್ಶಗಳ ಬಗೆಗೆ ನಿರ್ಲಕ್ಷ್ಯ ಮನೋಭಾವ ಇರುವುದು ಒಳ್ಳೆಯದಲ್ಲ. ಧರ್ಮ ಪೀಠಗಳು ಜನಮನದ ಕೊಳೆಯನ್ನು ಕಳೆದು ಜ್ಞಾನ ಜ್ಯೋತಿ ಬೆಳಗುತ್ತಾ ಬಂದಿವೆ. ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಮಾಡುತ್ತಾ ಬಂದಿದೆ. ಶ್ರೀ ರಂಭಾಪುರಿ ಜಗದ್ಗುರುಗಳವರ ಧರ್ಮ ಯಜ್ಞ ಪವಿತ್ರ ಗಂಗಾ ನದಿಯಂತೆ ಪ್ರವಹಿಸಿ ಜನಮನದ ಮೇಲೆ ಬೆಳಕು ತೋರುತ್ತಿದೆ ಎಂದರು.
ಮುಖ್ಯ ಉಪನ್ಯಾಸ ನೀಡಿದ ಪ್ರಶಾಂತ ರಿಪ್ಪನ್ ಪೇಟೆ, ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳಿವೆ. ಸಂಗದಲ್ಲಿ ಬೆಳೆದರೆ ಆದರ್ಶ ವ್ಯಕ್ತಿಯಾಗಿ ಬಾಳಲು ಸಾಧ್ಯ. ದುರ್ಜನರ ಒಡನಾಟದಿಂದ ಬದುಕು ಕೆಟ್ಟು ಹೋಗುತ್ತಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಜೀವನ ದರ್ಶನದ ಮೌಲ್ಯಗಳನ್ನು ಬೋಧಿಸಿದ್ದಾರೆ. ಅಂಗ ಲಿಂಗವಾಗಲು ದೇಹ ದೇವಾಲಯವಾಗಲು ಭವಿ ಭಕ್ತನಾಗಲು ವೀರಶೈವ ಧರ್ಮ ಉತ್ತಮ ಸಂಸ್ಕಾರದ ಮೌಲ್ಯಗಳ ಮೂಲಕ ಭಕ್ತ ಸಂಕುಲಕ್ಕೆ ಹೊಂಬೆಳಕು ನೀಡುತ್ತ ಬಂದಿದೆ ಎಂದರು.
ಎಡೆಯೂರು ರೇಣುಕ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿ ವ್ಯವಸ್ಥಿತವಾದ ಜೀವನ ವಿಧಾನವೇ ನಿಜವಾದ ಧರ್ಮ, ಹೇಳುವುದು ಬಲು ಸುಲಭ, ಆಚರಣೆಯಲ್ಲಿ ಕಷ್ಟ, ವೀರಶೈವ ಧರ್ಮದಲ್ಲಿ ನಡೆ ನುಡಿಗಳಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ರಂಭಾಪುರಿ ಪೀಠದ ಉದ್ಯೋಷಣೆ ಮಾನವ ಜೀವನದ ಶ್ರೇಯಸ್ಸಿಗೆ ಕಾರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ-ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಪಡೆದರು.ಎಸ್.ಅಪ್ಪಾಜಿ. ಕುಮಾರಿ ಶಿವಲೀಲಾ, ಬಿ.ಸಿ.ನಟರಾಜ್, ಸಿದ್ದಲಿಂಗಸ್ವಾಮಿ, ಕೆ.ಬಿ.ಉದಯ್ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಬೀರೂರು ಶಿವಸ್ವಾಮಿ ಮೊದಲ್ಗೊಂಡು ಹಲವಾರು ಗಣ್ಯರು ಉಪಸ್ಥಿತರಿದ್ದರು. ನಾಗಲಾಪುರ ತೇಜೇಶಲಿಂಗ ಶಿವಾಚಾರ್ಯರು, ಕಲ್ಲುಬಾಳುಮಠದ ಶಿವಾನಂದ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ ನಾಗೇಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಸ್ಥೆಯ
ಕಾರ್ಯದರ್ಶಿ ಆರ್.ಆರ್. ಹಿರೇಮಠ ಸ್ವಾಗತಿಸಿದರು. ಡಾ. ಮಮತಾ ಸಾಲಿಮಠ ನಿರೂಪಿಸಿದರು. ಶಿವಶಂಕರ ಶಾಸ್ತ್ರಿಗಳವರಿಂದ ಭಕ್ತಿಗೀತೆ, ಕುಮಾರಿ ವರುಣಾ ಸಾಯಿ ತಂಡದವರಿಂದ ಭರತ ನಾಟ್ಯ ಜರುಗಿತು.
ಇಷ್ಟಲಿಂಗ ಪೂಜೆ: ಆಷಾಢ ಮಾಸದ ಅಂಗವಾಗಿ ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು.
Related Articles
Thank you for your comment. It is awaiting moderation.
Comments (0)