ಜುಲೈ 7ರಿಂದ 19ರವರೆಗೆ ಉತ್ತರ ಭಾರತ ರಾಜ್ಯಗಳಲ್ಲಿ ಶ್ರೀಕಾಶಿ ಜಗದ್ಗುರುಗಳ ಧರ್ಮಪ್ರಚಾರ ಅಭಿಯಾನ
- by Suddi Team
- July 3, 2025
- 53 Views

ವಾರಾಣಸಿ (ಉ.ಪ್ರ.): ಜುಲೈ 7ರಿಂದ 19ರವರೆಗೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಉತ್ತರಪ್ರದೇಶದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಧರ್ಮಪ್ರಚಾರ ಅಭಿಯಾನ ನಡೆಯಲಿದೆ.
ಉತ್ತರ ಭಾರತ ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಆಚಾರ್ಯ ರಾಮಕುಮಾರ ಜಂಗಮ ಮಾಧ್ಯಮ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿ, ಉತ್ತರ ಭಾರತದ ಬಹುಪಾಲು ರಾಜ್ಯಗಳಲ್ಲಿ ಅನಾದಿಕಾಲದಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ವೀರಶೈವರು ವಾಸವಾಗಿದ್ದು, ಅವರು ಈ ಧರ್ಮ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಹರಿಯಾಣಾ ಪ್ರದೇಶದ ಜಂಗಮರು ಶಿವ ಕಥೆಯನ್ನು ಹೇಳುವುದರ ಮೂಲಕ ಸರ್ವರಲ್ಲಿ ಶಿವಭಕ್ತಿಯನ್ನು ಜಾಗೃತ ಮಾಡಿದ್ದಾರೆ.
ಮೂಲತಃ ಕರ್ನಾಟಕದ ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ಸಮೀಪದ ತೋಗುಣಸಿ ಗ್ರಾಮದವರಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕಳೆದ 20 ವರ್ಷಗಳಿಂದ ಈ ಎಲ್ಲ ರಾಜ್ಯಗಳಲ್ಲಿ ಸಂಚರಿಸಿ ಅಲ್ಲಿಯ ಜನರಲ್ಲಿ ಧರ್ಮಪ್ರಜ್ಞೆಯನ್ನು ಮೂಡಿಸುವದರ ಜತೆಗೆ ಅವರೆಲ್ಲರನ್ನು ವೀರಶೈವ ಧರ್ಮದ ಮೂಲ ವಾಹಿನಿಗೆ ಬರುವಂತೆ ಮಾಡಿದ್ದಾರೆ. ಅಲ್ಲದೇ ಹತ್ತಾರು ಸಾವಿರ ಜನರಿಗೆ ಇಷ್ಟಲಿಂಗದೀಕ್ಷೆಯನ್ನು ಮಾಡಿ ವೀರಶೈವ ಧರ್ಮದ ತತ್ವಗಳನ್ನು ಅವರಿಗೆ ತಿಳಿಸುವುದರ ಜತೆಗೆ ಧರ್ಮಗ್ರಂಥವಾದ ‘ಶ್ರೀಸಿದ್ಧಾಂತ ಶಿಖಾಮಣಿ’ಯೂ ಸೇರಿ ವಿವಿಧ ಹಿಂದಿ ಭಾಷೆಯ ಅನುಭಾವ ಗ್ರಂಥಗಳನ್ನು ಅವರ ಅಧ್ಯಯನಕ್ಕೆ ದೊರಕಿಸಿ ಕೊಟ್ಟಿದ್ದಾರೆ.
13 ದಿನಗಳ ಅಭಿಯಾನ: ಜುಲೈ 7, 8 ಮತ್ತು 9ರಂದು ದಿಲ್ಲಿ, ಗುಡಗಾಂವ್, ನಜಫ್ಗಡ, ಜುಲೈ 10, 11 ಮತ್ತು 12ರಂದು ಹರಿಯಾಣದ ಕುರುಕ್ಷೇತ್ರದಲ್ಲಿ, ಜುಲೈ 13ರಂದು ಚಂಡೀಗಡದ ರಾಜಭವನದಲ್ಲಿ ರಾಜ್ಯಪಾಲ ಭಂಡಾರು ದತ್ತಾತ್ರೇಯರೊಂದಿಗೆ ಸಮಾಜದ ಹಿತಚಿಂತನೆ, ಜುಲೈ 14, 15 ಮತ್ತು 16ರಂದು ಪಂಜಾಬ್ನ ಲುಧಿಯಾನಾ ನಗರದಲ್ಲಿ, ಜುಲೈ 17 ಮತ್ತು 18 ಹರಿಯಾಣದ ಮಡಲೋಡಾ ಮತ್ತು ಪಾಣಿಪತ್ಗಳಲ್ಲಿ, ಜುಲೈ 19ರಂದು ಹರಿಯಾಣದ ರೋಹತಕ ನಗರದಲ್ಲಿ ಆಯೋಜನೆಯಾಗಲಿರುವ ಅನೇಕ ಧಾರ್ಮಿಕ ಕಾರ್ಯಕ್ರಮಗಳ ಸಾನ್ನಿಧ್ಯವಹಿಸುವ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನಿತ್ಯ ಪ್ರಾತಃಕಾಲದಲ್ಲಿ ನಡೆಸುವ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯ ಸಂದರ್ಭದಲ್ಲಿ ಭಕ್ತ ಸಂಕುಲಕ್ಕೆ ಇಷ್ಟಲಿಂಗ ದೀಕ್ಷೆ ನೀಡುವರು. ಜತೆಗೆ ಶ್ರೀಸಿದ್ಧಾಂತ ಶಿಖಾಮಣಿ ಪ್ರಣೀತ ಶಿವಾದ್ವೈತ ಸಿದ್ಧಾಂತದ ಶುಭಾಶೀರ್ವಾದ ಧರ್ಮಸಂದೇಶ ನೀಡುವರು.
ಉತ್ತರ ಭಾರತ ವೀರಶೈವ ಸಮಾಜ ಸಂಘಟನೆಯ ಆಶ್ರಯದಲ್ಲಿ ನಡೆಯುವ ಈ ಅಭಿಯಾನದಲ್ಲಿ ಬಾರ್ಶಿ ದಹೀವಡಕರ ಮಠದ ಶ್ರೀ ಗುರುಸಿದ್ಧ ಮಣಿಕಂಠ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ನವನಗರದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಸಂಸ್ಥೆಯ ಮಹಾನಿದೇಶಕ ಡಾ. ರಾಮನಿವಾಸ ಜಂಗಮ, ರಾಷ್ಟ್ರೀಯ ಅಧ್ಯಕ್ಷ ಆಚಾರ್ಯ ರಾಮಕುಮಾರ ಜಂಗಮ, ದಿಲ್ಲಿ ಪ್ರದೇಶಾಧ್ಯಕ್ಷ ಸೋಮವೀರ ಬೈನಿವಾಲ್, ಹರಿಯಾಣ ಪ್ರದೇಶ ಅಧ್ಯಕ್ಷ ಶಾಮ ನಂಬರದಾರ, ಹರಿಯಾಣಾ ಪ್ರದೇಶದ ಉಪಾಧ್ಯಕ್ಷ ಮುಕೇಶ ಕುಮಾರ ಭಾರದ್ವಾಜ, ಪಂಜಾಬ ಪ್ರದೇಶ ಅಧ್ಯಕ್ಷ ಸಂಜಯ ಥಾಪರ ಮತ್ತು ಉತ್ತರ ಭಾರತ ವೀರಶೈವ ಸಮಾಜ ಸಂಸ್ಥೆಯ ದೀನದಯಾಲ ಜಂಗಮ, ಲಾತೂರಿನ ಪ್ರಾಧ್ಯಾಪಕರಾದ ರೇವಣಸಿದ್ಧ ಶಾಬಾದೆ ಪಾಲ್ಗೊಂಡು ಸೇವೆ ಸಲ್ಲಿಸುವರು.
Related Articles
Thank you for your comment. It is awaiting moderation.
Comments (0)