ನಾಗರಿಕತೆಯ ಹೆಸರಿನಲ್ಲಿ ಜೀವನ ಮೌಲ್ಯಗಳು ಕಣ್ಮರೆಯಾಗಬಾರದು; ರಂಭಾಪುರಿ ಜಗದ್ಗುರುಗಳು
- by Suddi Team
- July 3, 2025
- 501 Views

ಬೆಂಗಳೂರು: ಮನುಷ್ಯ ಯಾವಾಗಲೂ ಆಶಾವಾದಿಯಾಗಿ ಬದುಕಬೇಕಲ್ಲದೇ ನಿರಾಶಾವಾದಿಯಾಗಿ ಬದುಕಬಾರದು. ಜೀವನದಲ್ಲಿ ಭರವಸೆಯ ದೀಪವು ಎಂದಿಗೂ ಆರಬಾರದು. ಆಧುನಿಕತೆ ಮತ್ತು ನಾಗರಿಕತೆಯ ಹೆಸರಿನಲ್ಲಿ ನಿಜವಾದ ಜೀವನ ಮೌಲ್ಯಗಳು ಕಣ್ಮರೆಯಾಗಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಬುಧವಾರ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಮದ್ವೀರಶೈವ ಸಮ್ಮೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಘಟಕದಿಂದ ಜರುಗಿದ ಧರ್ಮೋತ್ತೇಜಕ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಹೊರಗೆ ಸಿರಿ ಸಂಪತ್ತು ಹೆಚ್ಚುತ್ತಿದ್ದರೂ ಆಂತರಿಕವಾಗಿ ಬಡತನ ಬೆಳೆಯುತ್ತಿದೆ. ಆಧುನಿಕ ನಾಗರೀಕತೆ ಬೆಳೆಯುತ್ತಿದ್ದರೂ ಪರಸ್ಪರ ನಂಬಿಕೆ ವಿಶ್ವಾಸಗಳು ಇಲ್ಲದಂತಾಗುತ್ತಿವೆ. ಸಂಪತ್ತಿನಿಂದ ಬದುಕಿಗೆ ಸೌಭಾಗ್ಯ ಪ್ರಾಪ್ತವಾಗುತ್ತದೆ. ನೀತಿ ನಿಯತ್ತುಗಳು ಮಾನವೀಯ ಸಂಬಂಧಗಳನ್ನು ಜೋಡಿಸುತ್ತವೆ. ಮೌಲ್ಯಗಳನ್ನು ಧಿಕ್ಕರಿಸಿದರೆ ಮನುಷ್ಯ ಮುಂದೊಂದು ದಿನ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ವೀರಶೈವ ಧರ್ಮದಲ್ಲಿರುವ ಆಧ್ಯಾತ್ಮ ಸಂಪತ್ತು ಬದುಕಿನ ಉತರ್ಷತೆಗೆ ಅಡಿಪಾಯವಾಗಿದೆ. ಒಳ್ಳೆಯ ಮಾತಿಗೆ ಬದುಕನ್ನು ಪರಿವರ್ತಿಸುವ ಶಕ್ತಿಯಿದೆ ಎಂಬ ಸತ್ಯವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ್ದನ್ನು ಮರೆಯಲಾಗದೆಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ-ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಜೀವನದ ಜಂಜಡದಲ್ಲಿ ಸಿಲುಕಿದ ಮನುಷ್ಯನಿಗೆ ಧರ್ಮದ ಅರಿವು ಆಚರಣೆ ಇರಬೇಕಾಗುತ್ತದೆ. ಸಂತಸ ಮತ್ತು ಶಾಂತಿಯ ಬದುಕಿಗೆ ಆಧ್ಯಾತ್ಮ ಜ್ಞಾನದ ಅವಶ್ಯಕತೆಯಿದೆ. ನಮಗಾಗಿ ಹೇಗೆ ಸುಖ ಸಂತೋಷ ಬಯಸುತ್ತೇವೆಯೋ ಅದೇ ರೀತಿ ಇತರರಿಗಾಗಿ ಬಯಸುವುದೇ ನಿಜವಾದ ಧರ್ಮ, ಶ್ರೀ ರಂಭಾಪುರಿ ಜಗದ್ಗುರುಗಳ ಜ್ಞಾನ ಯಜ್ಞ ಜನಮನವನ್ನು ತಿದ್ದಿ ತೀಡುವಲ್ಲಿ ಅದ್ಭುತ ಪರಿಣಾಮವನ್ನು ಕಾಣುತ್ತೇವೆ ಎಂದು ಹರುಷ ವ್ಯಕ್ತಪಡಿಸಿದರು.
ಗೌರಿಗದ್ದೆ ಅವಧೂತ ಆಶ್ರಮದ ವಿನಯ ಗುರೂಜಿ ಮಾತನಾಡಿ, ಭವ ಬಂಧನದಿಂದ ಮುಕ್ತಗೊಳ್ಳಲು ಗುರು ಕಾರುಣ್ಯದ ಅವಶ್ಯಕತೆಯಿದೆ. ಸಂಪತ್ತಿನ ಬೆನ್ನು ಹತ್ತಿ ಹೊರಟ ಮನುಷ್ಯನಿಗೆ ಜೀವನದಲ್ಲಿ ಸುಖ ಶಾಂತಿ ಇಲ್ಲ. ನಿಜವಾದ ಆತ್ಮ ಜ್ಞಾನದ ಅರಿವು ಪಡೆದು ಆ ದಾರಿಯಲ್ಲಿ ನಡೆದಾಗ ಜೀವನ ಮೌಲ್ಯ ಸಂವರ್ಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ದಿಶೆಯಲ್ಲಿ ವೀರಶೈವ ಧರ್ಮದ ಪಂಚ ಪೀಠಗಳು ಪ್ರಾಚೀನ ಕಾಲದಿಂದ ಇವತ್ತಿನವರೆಗೂ ಭಾರತೀಯ ಆಧ್ಯಾತ್ಮ ಸಂಪತ್ತನ್ನು ಸರ್ವ ಜನಾಂಗದ ಶ್ರೇಯಸ್ಸಿಗಾಗಿ ಮಾರ್ಗದರ್ಶನ ನೀಡುತ್ತಾ ನಡೆದಿರುವುದು ನಮ್ಮೆಲ್ಲರ ಸೌಭಾಗ್ಯವೆಂದರು.
ಕೆ.ವಿ.ವಿ.ಎಸ್. ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಕೋಣಂದೂರು ಕೆ.ಆರ್.ಪ್ರಕಾಶ್, ಡಾ.ಎಂ.ಜಿ. ನಾಗರಾಜ್, ಅ.ಭಾ.ವೀ.ಮ. ಸಭಾ ಬೆಂಗಳೂರು ಘಟಕದ ಅಧ್ಯಕ್ಷ ಗುರುಸ್ವಾಮಿ, ರಾಷ್ಟ್ರೀಯ ಕಾರ್ಯದರ್ಶಿ ಹೆಚ್.ಎಂ. ರೇಣುಕ ಪ್ರಸನ್ನ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯರು ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿದರು. ಶಿವಶಂಕರ ಶಾಸ್ತ್ರಿ ತಂಡದವರಿಂದ ಭಕ್ತಿಗೀತೆ ಜರುಗಿತು. ಕುಮಾರಿ ಅಪರ್ಣಾ ಸುರೇಶ ಅವರಿಂದ ಭರತ ನಾಟ್ಯ ಜರುಗಿತು. ಶ್ರೀಮದ್ದೀರಶೈವ ಸದ್ಯೋಧನಾ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಬೀರೂರು ಶಿವಸ್ವಾಮಿ ಸ್ವಾಗತಿಸಿದರು. ಲಾವಣ್ಯ ಮಂಜುನಾಥ ನಿರೂಪಿಸಿದರು.
ಬೆಳಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು.
Related Articles
Thank you for your comment. It is awaiting moderation.
Comments (0)