ಐದು ವರ್ಷ ನಾನೇ ಮುಖ್ಯಮಂತ್ರಿ; ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದ್ದು, ಸಿಎಂ, ಡಿಸಿಎಂ ಇಬ್ಬರೂ ವಿಚಾರಕ್ಕೆ ಏಕಕಾಲಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ನಾನೇ ಪೂರ್ಣಾವದಿ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದರೆ, ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಇರುವಾಗ ಬೇರೆ ಹೆಸರು ಏಕೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ನಾಯಕತ್ವ ಬದಲಾವಣೆ ವಿಚಾರಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.

ನಂದಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನವೆಂಬರ್‌ನಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ಇಳಿಯಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿರಬಹುದು. ಆದರೆ, ಬಿಜೆಪಿ ನಮ್ಮ ಹೈ ಕಮಾಂಡ್ ಅಲ್ಲ. ಆರ್.ಅಶೋಕ್, ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಹೇಳಿದ್ದೆಲ್ಲ ಸತ್ಯವಲ್ಲ. ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ಹಗಲುಗನಸು ಕಾಣುತ್ತಿದೆ. ಬಿಜೆಪಿಯವರು ಸುಳ್ಳನ್ನು ಮಾತ್ರ ನಂಬುತ್ತಾರೆ, ಸತ್ಯವನ್ನಲ್ಲ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿರುವ ಬಿಜೆಪಿಯವರಿಗೆ ಸತ್ಯ ಹೇಳಿ ಗೊತ್ತೇ ಇಲ್ಲ. ಅವರು ನಂಬುತ್ತಾರೋ ಬಿಡುತ್ತಾರೋ ನಾವೆಲ್ಲಾ ಒಟ್ಟಾಗಿದ್ದೇವೆ. ನಮ್ಮ ಸರ್ಕಾರ ಬಂಡೆಯಂತೆ ಐದು ವರ್ಷ ಆಡಳಿತ ನಡೆಸಲಿದೆ ಎಂದರು.

“ನನ್ನ ಹೆಸರು ಹೇಳಿ, ನನ್ನನ್ನು ಸಿಎಂ ಮಾಡಿ ಎಂದು ಹೇಳುವ ಅವಶ್ಯಕತೆಯಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಇರುವಾಗ ಬೇರೆ ಹೆಸರು ಏಕೆ?” ಎಂದು ನಾಯಕತ್ವ ಬದಲಾವಣೆ ವಿಚಾರದ ಚರ್ಚೆಗೆ ಡಿಸಿಎಂ ಡಿಕೆ ಶಿವಕುಮಾರ್ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.

ಶಾಸಕ ಇಕ್ಬಾಲ್ ಹುಸೇನ್‌ಗೆ ನೋಟಿಸ್ ನೀಡಿರುವ ಬಗ್ಗೆ ಕೇಳಿದಾಗ, “ಪಕ್ಷದಲ್ಲಿ ಶಿಸ್ತು ಮುಖ್ಯ. ಅವರಿಗೂ ನೋಟಿಸ್ ನೀಡುವೆ, ಬೇರೆಯವರಿಗೂ ನೋಟಿಸ್ ನೀಡಬೇಕಾಗುತ್ತದೆ ಎಂದರು. ನೀವು ಪಕ್ಷ‌ ಕಟ್ಟಲು ಕಷ್ಟಪಟ್ಟಿದ್ದೀರಿ. ಆ ಕಾರಣಕ್ಕೆ ನಿಮ್ಮ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಕೇಳಿದಾಗ, “ನಾನೊಬ್ಬನೆ‌ ಪಕ್ಷ‌ ಕಟ್ಟಿದ್ದೇನೆಯೇ? ನನ್ನಂತೆ ನೂರಾರು, ಸಾವಿರಾರು ಲಕ್ಷಾಂತರ ಜನ ಪಕ್ಷ ಕಟ್ಟಿದ್ದಾರೆ. ಮೊದಲು ಅವರ ನಂಬಿಕೆ ಉಳಿಸಿಕೊಳ್ಳೋಣ” ಎಂದು ಹೇಳಿದರು.

“ಪಕ್ಷದಲ್ಲಿ ಎಲ್ಲಿಯೂ ಅಸಮಾಧಾನವಿಲ್ಲ. ಪಕ್ಷ ಸಂಘಟನೆ ಸೇರಿದಂತೆ ಪಕ್ಷದ ಆಗುಹೋಗುಗಳನ್ನು ಗಮನಿಸಲು ರಣದೀಪ್ ಸುರ್ಜೇವಾಲ ಅವರು ಭೇಟಿ ನೀಡಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೈಕಮಾಂಡ್ ರಂಗಪ್ರವೇಶಕ್ಕೆ ಸಮಜಾಯಿಷಿ ನೀಡಿದರು.

Related Articles

Comments (0)

Leave a Comment