ಕ್ವಾಂಟಮ್‌ ಕ್ಷೇತ್ರದ ಬೆಳವಣಿಗೆಗೆ ಹೊಸ ನೀತಿ ರೂಪಿಸಲು ಚಿಂತನೆ: ಬೋಸರಾಜು

ಬೆಂಗಳೂರು: ದೇಶದಲ್ಲೇ ಮೊದಲ ಕ್ವಾಂಟಮ್‌ ಕಂಪ್ಯೂಟರ್‌ ನಿರ್ಮಾಣ ಮಾಡಿ ಈ ಕ್ಷೇತ್ರದ ಹೆಚ್ಚಿನ ಅಭಿವೃದ್ದಿ ಅಗತ್ಯವಿರುವ ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ದವಿದ್ದು, ಹೊಸ ನೀತಿ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌. ಎಸ್‌. ಭೋಸರಾಜು ತಿಳಿಸಿದರು.

ವಿಕಾಸಸೌಧದ ಕಚೇರಿಯಲ್ಲಿ ರಾಜ್ಯದ ಕ್ವಾಂಟಮ್‌ ಕ್ಷೇತ್ರದ ಪ್ರಮುಖ ಕಂಪನಿಗಳಾದ ಕ್ಯೂಪೈ ಎಐ (QπAi), ತಕ್ಷೈ ಲ್ಯಾಬ್ಸ್‌ (Takshaya labs) ಸೇರಿ ಇತರ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ವಿಸ್ತ್ರುತ ಮಾಹಿತಿ ಪಡೆದುಕೊಂಡರು.

ನಂತರ ಮಾತನಾಡಿದ ಅವರು, ಕ್ವಾಂಟಮ್‌ ಕ್ಷೇತ್ರದಲ್ಲಿ ದೇಶದಲ್ಲೇ ಪ್ರಪ್ರಥಮವಾಗಿ ಹಲವಾರು ಸಾಧನೆಗಳನ್ನು ಕರ್ನಾಟಕ ರಾಜ್ಯ ಸಾಧಿಸಿದೆ. ದೇಶದ ಮೊದಲ ಕ್ವಾಂಟ್‌ಮ್‌ ಕಂಪ್ಯೂಟರ್‌ ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ದಿಗೊಂಡಿದ್ದು, ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರ ಕ್ವಾಂಟಮ್‌ ಇನ್ನೋವೇಷನ್‌ ಎಕೋಸಿಸ್ಟಮ್‌ ಅಭಿವೃದ್ದಿಗೆ ಅಗತ್ಯ ಸಹಕಾರ ನೀಡುತ್ತಿದೆ. ಅಲ್ಲದೇ, ಐಐಎಸ್ಸ್‌ಸಿ, ಆರ್‌ಆರ್‌ಐ, ಐಸಿಟಿಎಸ್‌ ನಂತಹ ಜಾಗತಿಕ ಸಂಶೋಧನಾ ಸಂಸ್ಥೆಗಳ ಜತೆಗೂಡಿ ಸಂಶೋಧನೆಯನ್ನು ಪ್ರಾರಂಭಿಸಿದೆ ಎಂದರು.

ನಮ್ಮ ರಾಜ್ಯದಲ್ಲಿರುವಂತಹ ಪ್ರಮುಖ ಸಾರ್ವಜನಿಕ ರಕ್ಷಣಾ ಕಂಪನಿಗಳು ಕ್ವಾಂಟಮ್‌ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಹೊಂದಿದೆ. ಇಂತಹ ಅವಕಾಶಗಳು ದೇಶದ ಬೇರೆ ರಾಜ್ಯಗಳಲ್ಲಿ ಕಡಿಮೆ. ಈ ಕ್ಷೇತ್ರದ ಅಭಿವೃದ್ದಿಗೆ ಈಗಾಗಲೇ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುತ್ತಿದೆ. ಇಂದು ನಡೆದ ಸಭೆಯಲ್ಲಿ ಕಂಪನಿಗಳ ಪ್ರತಿನಿಧಿಗಳು ಅವರಿಗೆ ಸರ್ಕಾರದಿಂದ ಅಗತ್ಯವಿರುವ ಸಹಕಾರದ ಬಗ್ಗೆ ಮಾಹಿತಿ ನೀಡಿದ್ದಾರೆ, ಕ್ವಾಂಟಮ್‌ ಕ್ಷೇತ್ರದ ಅಭಿವೃದ್ದಿಗೆ ಹೊಸ ನೀತಿಯನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹಾಗೂ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಸಭೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.

Related Articles

Comments (0)

Leave a Comment