ಅನ್ಯ ರಾಜ್ಯಗಳ ಪೊಲೀಸರಿಗೆ ಕರ್ನಾಟಕ ಪೊಲೀಸರು ಮಾದರಿಯಾಗಿ ನಿಲ್ಲಬೇಕು: ಪರಮೇಶ್ವರ್
- by Suddi Team
- June 28, 2025
- 88 Views

ಬೆಂಗಳೂರು: ನಮ್ಮ ಪೊಲೀಸ್ ಇಲಾಖೆಯಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಅನ್ಯ ರಾಜ್ಯಗಳ ಪೊಲೀಸರಿಗೆ ಕರ್ನಾಟಕ ಪೊಲೀಸರು ಮಾದರಿಯಾಗಿ ನಿಲ್ಲಬೇಕು ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದ ಎರಡನೇ ದಿನದ ಸಭೆಯಲ್ಲಿ ಪಾಲ್ಗೊಂಡು, ಇಲಾಖೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಗೃಹಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಕರ್ನಾಟಕ ಪೊಲೀಸ್ ಎಂದರೆ ದೇಶದಲ್ಲಿ ಬೇರೆ ರಾಜ್ಯಗಳ ಪೊಲೀಸರು ನಮ್ಮಿಂದ ಹೊಸತನ್ನು ಕಲಿಯಬೇಕು. ಆ ನಿಟ್ಟಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿಗಳಾಗಬೇಕು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಅನ್ಯ ರಾಜ್ಯಗಳ ಪೊಲೀಸರಿಗೆ ಕರ್ನಾಟಕ ಪೊಲೀಸರು ಮಾದರಿಯಾಗಿ ನಿಲ್ಲಬೇಕು ಎಂದು ಕರೆ ನೀಡಿದರು.
‘ಮನೆಮನೆಗೆ ಪೊಲೀಸ್’ ಉಪಕ್ರಮವನ್ನು ಯಶಸ್ವಿಗೊಳಿಸಿದರೆ, ಕರ್ನಾಟಕ ಪೊಲೀಸ್ ಇಲಾಖೆಗೆ ದೇಶದಲ್ಲಿ ಕೀರ್ತಿ ಬರುತ್ತದೆ. ಪೊಲೀಸರು ಮನೆಗಳಿಗೆ ಭೇಟಿ ನೀಡುವುದರಿಂದ, ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಮಸ್ಯೆಗಳು ಏನೆಂಬುದು ಗೊತ್ತಾಗುತ್ತದೆ. ಅಪರಾಧಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ ಎಂದರು.
ಸರ್ಕಾರ ಹಾಗೂ ಜನರ ಆಶಯದಂತೆ ಪೊಲೀಸ್ ಇಲಾಖೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ಠಾಣೆಗಳಿಗೆ ಬರುವ ಜನರನ್ನು ಹತ್ತಾರು ಬಾರಿ ಅಲೆಸದೆ ಅವರ ದೂರುಗಳನ್ನು ಸ್ವೀಕರಿಸಿ, ಜನಸ್ನೇಹಿಯಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಡಿಜಿ ಪ್ರಶಾಂತ್ ಕುಮಾರ್ ಠಾಕೂರ್, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಡಿಜಿ ಮಾಲಿನಿ ಕೃಷ್ಣಮೂರ್ತಿ, ಸಿಐಡಿ ಸೈಬರ್ ಕ್ರೈಂ ಮತ್ತು ಮಾದಕವಸ್ತು ವಿಭಾಗದ ಡಿಜಿ ಪ್ರಣವ್ ಮೊಹಾಂತಿ, ರಾಜ್ಯ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.
Comments (0)