ಮುಂಗಾರು ಮಳೆಗೆ ಕೆಆರ್‌ಎಸ್ ಭರ್ತಿ: ಜೂನ್‌ನಲ್ಲೇ ಗರಿಷ್ಠ ಮಟ್ಟ ತಲುಪಿದ ಕನ್ನಂಬಾಡಿ

ಮಂಡ್ಯ: ರಾಜ್ಯದಲ್ಲಿ ವ್ಯಾಪಕ ಮಳೆ ಮುಂದುವರಿದಿದ್ದು, ಹಳೇ ಮೈಸೂರು ಭಾಗದ ಜೀವನಾಡಿಯಾಗಿರುವ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ (ಕೆಆರ್​ಎಸ್) ಡ್ಯಾಂ ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಭರ್ತಿಯಾಗಿದ್ದು, ಜಲಾಶಯದಿಂದ ನದಿಗೆ ನೀರನ್ನು ಹರಿಸಲಾಗುತ್ತಿದೆ.

124.80 ಅಡಿ ಸಾಮರ್ಥ್ಯದ ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, 30 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಜಲಾಶಯದ ಎಲ್ಲ ಗೇಟ್‌‌ಗಳ ಮೂಲಕ ನದಿಗೆ ಬಿಡಲಾಗುತ್ತಿದೆ. ವಿಶೇಷವೇನೆಂದರೆ, 84 ವರ್ಷಗಳ ನಂತರ ಜೂನ್ ತಿಂಗಳಲ್ಲಿ ಅಣೆಕಟ್ಟಿನಿಂದ ಭಾರಿ ಪ್ರಮಾಣದ ನೀರು ಹೊರಬಿಡಲಾಗಿದೆ. ಯಾವುದೇ ಕ್ಷಣದಲ್ಲಿ ಸುಮಾರು 30,000ರಿಂದ 50,000 ಕ್ಯೂಸೆಕ್ ನೀರನ್ನು ನದಿಗೆ ಬಿಡುವ ಸಾಧ್ಯತೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಸಾಮಾನ್ಯವಾಗಿ ಕೆಆರ್​ಎಸ್ ಡ್ಯಾಂ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗುತ್ತದೆ. ಆ ನಂತರ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಿಸಲಾಗುತ್ತದೆ. ಆದರೆ, ಈ ವರ್ಷ ಜೂನ್ ಕೊನೆಯ ವಾರದಲ್ಲೇ ಡ್ಯಾಂ ಭರ್ತಿಯಾಗಿದೆ. ಈ ವರ್ಷ ಅವಧಿಪೂರ್ವ ಮುಂಗಾರು ಮಳೆಯ ಕಾರಣದಿಂದಾಗಿ ಜೂನ್ ಆರಂಭದಲ್ಲೇ ಡ್ಯಾಂ ನೀರಿನ ಮಟ್ಟ 100 ಅಡಿ ದಾಟುವ ಮೂಲಕ ದಾಖಲೆ ಬರೆದಿತ್ತು. ಕೆ‌ಆರ್‌ಎಸ್​ ಜಲಾಶಯದಲ್ಲಿ ಸಾಮಾನ್ಯವಾಗಿ ಜೂನ್ ಅಂತ್ಯ ಅಥವಾ ಜುಲೈನಲ್ಲಿ ಮಾತ್ರ ನೀರಿನ ಮಟ್ಟ 100 ಅಡಿ ದಾಟುತ್ತದೆ. ಈ ವರ್ಷ ಜೂನ್ 15ರಂದೇ ನೀರಿನ ಮಟ್ಟ 115.78 ಅಡಿ ತಲುಪಿತ್ತು. ಅದಾದ ಹತ್ತು ದಿನಗಳಲ್ಲಿ ಇದೀಗ ಗರಿಷ್ಠ ಮಟ್ಟ ತಲುಪಿದ್ದು, ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.

ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯೊಂದನ್ನು ಬರೆಯುವ ಸಾಧ್ಯತೆಯೂ ಇದ್ದು, ಈ ತಿಂಗಳಲ್ಲೇ ಬಾಗಿನ ಅರ್ಪಿಸಿದರೆ, ಜೂನ್ ತಿಂಗಳಲ್ಲಿಯೇ ಕನ್ನಂಬಾಡಿಗೆ ಬಾಗಿನ ಅರ್ಪಿಸಿದ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ. 1979 ರಿಂದ ಕಾವೇರಿಗೆ ಬಾಗಿನ ಅರ್ಪಿಸುವ ಪದ್ದತಿ ಆರಂಭವಾಗಿದೆ. ಮೊದಲ ಬಾರಿಗೆ ಡಿ. ದೇವರಾಜ ಅರಸ್ ಬಾಗಿನ ಅರ್ಪಿಸಿದ್ದರು. ಆದರೆ, ಯಾರೂ ಜೂನ್‌ನಲ್ಲಿ ಬಾಗಿನ ಅರ್ಪಿಸಿಲ್ಲ,

​ಕಬಿನಿ ಅಣೆಕಟ್ಟೆಯ ಒಳಹರಿವು 20,000 ಕ್ಯೂಸೆಕ್ ಮತ್ತು ಹೊರಹರಿವು 25,000 ಕ್ಯೂಸೆಕ್ ಇದೆ. ಜನರ ಸುರಕ್ಷತೆಗಾಗಿ ಪ್ರವಾಹ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಜೂನ್ 25ರಂದು ಅಣೆಕಟ್ಟೆಯ ನೀರಿನ ಮಟ್ಟ 2,284 ಅಡಿಗಳಷ್ಟಿತ್ತು. ಆದರೆ, ಈಗ ಅದು 2,278.43 ಅಡಿಗಳಷ್ಟಿದೆ.

Related Articles

Comments (0)

Leave a Comment