ಎತ್ತಿನಹೊಳೆ ವಿಚಾರದಲ್ಲಿ ಅಸಾಧ್ಯ ಎಂದಿದ್ದನ್ನು ಸಾಧ್ಯವಾಗಿಸಿದ್ದೇವೆ; ಎಚ್‌ಡಿಕೆಗೆ ಡಿಸಿಎಂ ಟಕ್ಕರ್

ತುಮಕೂರು: “ಅವರು ಎತ್ತಿನಹೊಳೆ ನೀರು ಹೊರಗೆ ಹರಿಸುವುದು ಅಸಾಧ್ಯ ಎಂದಿದ್ದರು. ನಾವು ಅದನ್ನು ಸಾಧ್ಯವಾಗಿಸಿದ್ದೇವೆ” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ಟಕ್ಕರ್ ನೀಡಿದ್ದಾರೆ.

ಗುಬ್ಬಿ ತಾಲೂಕಿನ 42 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ 50 ಕೋಟಿ ರೂ. ವೆಚ್ಚದ ‘ಮಠದ ಹಳ್ಳ’ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, “ಕುಮಾರಸ್ವಾಮಿ ಅವರು ಎತ್ತಿನಹೊಳೆ ನೀರು ಹೊರಗೆ ಹರಿಸುವುದು ಅಸಾಧ್ಯ ಎಂದಿದ್ದರು. ನಾವು ಅದನ್ನು ಸಾಧ್ಯವಾಗಿಸಿದ್ದೇವೆ. ಮಾತನಾಡುವವರು ಕಣ್ಣಾರೆ ನೋಡಲಿ ಎಂದು ನೀರನ್ನು ಹರಿಸಿದ್ದೇವೆ. ಅದು ನಿಮ್ಮ ಜಿಲ್ಲೆ ಗಡಿವರೆಗೂ ಬಂದಿದೆ. ಕೆಲವು ಕಡೆ ಅರಣ್ಯ ಇಲಾಖೆ ಸಮಸ್ಯೆ ಇದೆ. ಹಾಸನ ಹಾಗೂ ಜಿಲ್ಲಾಧಿಕಾರಿಗಳು ಭೂಮಿ ನೀಡಿದ್ದು, ಆದಷ್ಟು ಬೇಗ ಇಲ್ಲಿಗೆ ನೀರು ಹರಿಯಲಿದೆ” ಎಂದು ತಿಳಿಸಿದರು.

ಬಹಳ ಸಂತೋಷದಿಂದ ಇಂದು ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದೇನೆ. ವಾಸು ಅವರ ಕ್ಷೇತ್ರ ಬೇರೆ ಅಲ್ಲ, ಡಿ.ಕೆ. ಶಿವಕುಮಾರ್ ಕ್ಷೇತ್ರ ಬೇರೆ ಅಲ್ಲ. ಇದು ನಮ್ಮ ಕ್ಷೇತ್ರ. ಯಾರು ಎಷ್ಟೇ ವಿರೋಧ ಮಾಡಲಿ, ಇಲ್ಲಿನ ರೈತರಿಗಾಗಿ ಏನು ಕೆಲಸ ಮಾಡಬೇಕೋ ಅದನ್ನು ಮಾಡುತ್ತೇವೆ. ಟಿ.ಬಿ ಜಯಚಂದ್ರ ಅವರಂತೆಯೇ ವಾಸು ಅವರೂ ನೀರಾವರಿ ಯೋಜನೆಗೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಪಕ್ಕದ ರಂಗನಹಳ್ಳಿಯವರು ನಮ್ಮ ಊರಿಗೂ ನೀರು ಕೊಡಿ ಎಂದು ಮನವಿ ಸಲ್ಲಿಸಿದರು. ಅವರ ಗ್ರಾಮಕ್ಕೂ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರದಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈ ವಿಚಾರವಾಗಿ ಪರಮೇಶ್ವರ್ ಜತೆ ಮಾತನಾಡಿದ್ದೇನೆ. ರೈತರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ನಾವು ಕನಿಷ್ಠ 3 ಟಿಎಂಸಿ ನೀರು ಸಂಗ್ರಹ ಮಾಡದಿದ್ದರೆ, ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀರು ನೀಡಲು ಸಾಧ್ಯವಿಲ್ಲ. ಹೀಗಾಗಿ ಈ ಯೋಜನೆ ಜಾರಿಗೆ ತಾಂತ್ರಿಕ ಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಿದ್ದು, ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ತಿಳಿಸಿದರು.

ಈ ಯೋಜನೆಯಲ್ಲಿ ಮೊದಲು ಕುಡಿಯುವ ನೀರನ್ನು ಪೂರೈಸಬೇಕು. ಆನಂತರ ಕೆರೆಗಳಿಗೆ ನೀರು ತುಂಬಿಸಲಾಗುವುದು. ಎಲ್ಲರಿಗೂ ಸರಿಯಾಗಿ ನೀರು ಹಂಚುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರಲ್ಲದೆ, ಒಂದೇ ರಾಜ್ಯದವರಾಗಿ ನೀರಿಗಾಗಿ ನಾವು ನಾವೇ ಕಿತ್ತಾಟ ನಡೆಸುವುದು ಬೇಡ. ಎಲ್ಲರಿಗೂ ಸರಿಯಾದ ರೀತಿಯಲ್ಲಿ ನೀರನ್ನು ನೀಡಲಾಗುವುದು. ನೆರೆ ರಾಜ್ಯದವರ ಜತೆ ತಿಕ್ಕಾಟ ನಡೆಸುವಂತೆ ನಾವು, ನಾವೇ ಕಿತ್ತಾಡುವುದು ಸರಿಯಲ್ಲ ಎಂದರು.

ರಾಜ್ಯದ ಜಲಾಶಯಗಳು ಬಹುತೇಕ ಭರ್ತಿ, ಡಿಸಿಎಂ ಹರ್ಷ:

ಬೆಂಗಳೂರಿನಲ್ಲಿ ಕಾವೇರಿ ಆರತಿ ಮಾಡಿ ಪ್ರಾರ್ಥನೆ ಮಾಡಿದೆ. ಕಾವೇರಿ ತಾಯಿ ಕೃಪೆಯಿಂದ ಮುಂಗಾರು ಆರಂಭವಾಗುವ ಮುನ್ನವೇ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳು ಬಹುತೇಕ ತುಂಬಿವೆ. ಕಳೆದ ವರ್ಷ ಶೇ. 30 ತುಂಬಿದ್ದ ಕೆಆರ್‌ಎಸ್ ಈ ವರ್ಷ ಶೇ. 89 ತುಂಬಿದೆ. ಕಳೆದ ವರ್ಷ ಶೇ. 30 ತುಂಬಿದ್ದ ಹೇಮಾವತಿ ಈ ಬಾರಿ ಶೇ. 85 ಭರ್ತಿಯಾಗಿದೆ. ಶೇ. 40 ತುಂಬಿದ್ದ ಹಾರಂಗಿ ಈ ವರ್ಷ ಶೇ. 70 ಹಾಗೂ ಶೇ. 51 ತುಂಬಿದ್ದ ಕಬಿನಿ ಈ ವರ್ಷ ಶೇ. 80 ಪ್ರಮಾಣದಲ್ಲಿ ಭರ್ತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹೇಮಾವತಿ ನೀರು ಬರುತ್ತಿದೆ. ಎತ್ತಿನಹೊಳೆ ನೀರನ್ನು ಕಳೆದ ವರ್ಷ ವಾಣಿ ವಿಲಾಸಕ್ಕೆ ಹರಿಸಲಾಗಿತ್ತು. ಕಾವೇರಿ ಅಂತಿಮ ತೀರ್ಪಿನಂತೆ ನೀರನ್ನು ಹೇಮಾವತಿ ತುಂಬಿಸಲಾಗುವುದು. ಇನ್ನು ಸ್ಥಳೀಯ ನಾಯಕರ ಮನವಿಯಂತೆ ಈ ಭಾಗದ ಕಾಲುವೆಗಳಿಗೆ ಎರಡು ದಿನಗಳಲ್ಲಿ ನೀರನ್ನು ಹರಿಸಿ ಕೆರೆ ತುಂಬಿಸಲು ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಇಲ್ಲಿರುವ ಮೇಲ್ಗಾಲುವೆ ದೇಶದಲ್ಲಿ  ಬೇರೆ ಎಲ್ಲೂ ಇಲ್ಲ. ಇದಕ್ಕಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ. ನಿಮ್ಮ ಸಹಕಾರ ಇರಲಿ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಶ್ರಮಿಸುತ್ತೇವೆ. ನೀವು ಶಾಸಕ ಗುಬ್ಬಿ ವಾಸು ಅವರ ಪರವಾಗಿ ನಿಲ್ಲಿ. ನಾನು ನಿಮ್ಮ ಪರ ನಿಲ್ಲುತ್ತೇನೆ ಎಂದರು.

Related Articles

Comments (0)

Leave a Comment