ಹಂಸಲೇಖ ನಿರ್ದೇಶನದ ‘ಓಕೆ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ ಸಿಎಂ ಸಿದ್ದು
- by Suddi Team
- June 25, 2025
- 120 Views
ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ನಿರ್ದೇಶನದ ‘ಓಕೆ’ ಚಲನಚಿತ್ರದ ಚಿತ್ರೀಕರಣಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಸಿನಿಮಾ ಸಕ್ಸಸ್ ಜತೆ ನಿರ್ದೇಶನದಲ್ಲೂ ಹಂಸಲೇಖ ಅಪಾರ ಯಶಸ್ಸು ಸಾಧಿಸಲಿ ಎಂದು ಶುಭ ಕೋರಿದ್ರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಮೀಟಿಂಗ್ ಬದಲು ಸಿನಿಮಾ ಶೂಟಿಂಗ್ ನಡೆಯಿತು. ನಾದಬ್ರಹ್ಮ ಹಂಸಲೇಖ ನಿರ್ದೇಶನದ ‘ಓಕೆ’ ಸಿನಿಮಾದ ಚಿಕ್ಕ ಸೆಟ್ ಅನ್ನು ಕಾವೇರಿ ಆವರಣದಲ್ಲಿ ಹಾಕಲಾಯಿತು. ಮೊಟ್ಟ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟ ಹಂಸಲೇಖ ಕ್ಯಾಮರಾಮ್ಯಾನ್‌ಗೆ ಶಾಟ್ ಕುರಿತು ವಿವರಣೆ ನೀಡಿದ್ರು.
ಅಷ್ಟರಲ್ಲಿ ಕಾವೇರಿಯಿಂದ ಹೊರಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರ ತಂಡವನ್ನು ಕೂಡಿಕೊಂಡರು. ಹಂಸಲೇಖ ನೀಡಿದ ಡೈರೆಕ್ಟರ್ ಕ್ಯಾಪ್ ಧರಿಸಿಕೊಂಡ ಸಿಎಂ, ಸ್ಟಾರ್ಟ್ ಕ್ಯಾಮರಾ ಆ್ಯಕ್ಷನ್ ಎಂದು ಹೇಳುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟ ಹಂಸಲೇಖ ಹಾಡಿನ ದೃಶ್ಯವೊಂದರ ಚಿತ್ರೀಕರಣಕ್ಕೆ ಆ್ಯಕ್ಷನ್ ಕಟ್ ಹೇಳಿ ಸಿನಿಮಾ ಚಿತ್ರೀಕರಣಕ್ಕೆ ಅಧಿಕೃತ ಚಾಲನೆ ನೀಡಿದರು.
ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಂಸಲೇಖ ಓಕೆ ಎನ್ನುವ ಚಿತ್ರದೊಂದಿಗೆ ಮೊದಲ ಬಾರಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಭ್ರೂಣಹತ್ಯೆ. ಕಥಾವಸ್ತು ಆಧಾರ ಮಾಡಿಕೊಂಡು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಂಗೀತ ನಿರ್ದೇಶಕರಾಗಿ ಅಪಾರ ಅನುಭವ ಹೊಂದಿದ್ದು, ನಿರ್ದೇಶನದಲ್ಲಿಯೂ ಅವರು ಅಪಾರ ಯಶಸ್ಸು ಗಳಿಸಲಿದ್ದಾರೆ ಎನ್ನುವ ವಿಶ್ವಾಸವಿದೆ. ಅವರಿಗೆ ಶುಭವಾಗಲಿ, ಅವರ ಓಕೆ ಚಿತ್ರಕ್ಕೂ ಶುಭವಾಗಲಿ ಎಂದರು.
‘ಸಿನಿ ಬೆಳೆ’ ಕೊಟ್ಟು ಖುಷಿಪಡಿಸುತ್ತೇನೆ:
ಸಿನಿಮಾ ಚಿತ್ರೀಕರಣ ಆರಂಭಿಸಿದ ಹಂಸಲೇಖ, ಪೂಜ್ಯ ಕನ್ನಡಿಗರೇ, ನನ್ನ ಹಾಡನ್ನು ಆನಂದಿಸಿದ್ದೀರಿ. ನನ್ನನ್ನು ಎಂದೂ ಸಂಭ್ರಮದಲ್ಲಿ ಇರುವಂತೆ ಅಭಿಮಾನಿಸಿದ್ದೀರಿ. ಈಗ ನಿಮ್ಮ ಆರೈಕೆಯ ಧೈರ್ಯ ಮತ್ತು ಪ್ರೀತಿಯಿಂದ ನಿರ್ದೇಶನದ ನೊಗ ಹೊತ್ತಿದ್ದೇನೆ. ಖಂಡಿತ ನೀವೆಲ್ಲರು ಮೆಚ್ಚುವಂತಹ ‘ಸಿನಿ ಬೆಳೆ’ ಕೊಟ್ಟು ಖುಷಿಪಡಿಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನಮಗಿರಲಿ ಎಂದಿದ್ದಾರೆ.
Related Articles
Thank you for your comment. It is awaiting moderation.


Comments (0)