ತಪ್ಪು ಮಾಡಿಲ್ಲ, ರಾಜೀನಾಮೆ ನೀಡಲ್ಲ: ವಸತಿ ಸಚಿವ ಜಮೀರ್ ಅಹಮದ್
- by Suddi Team
- June 24, 2025
- 163 Views
 
                                                          ಬೆಂಗಳೂರು: “ನಾನು ಸತ್ಯ ಹರಿಶ್ಚಂದ್ರ ಅಲ್ಲದೇ ಇರಬಹುದು. ಆದರೆ, ಬಡವರಿಗೆ ಕೊಡುವ ಮನೆಗೆ ಹಣ ಪಡೆದು ಬದುಕುವ ದರಿದ್ರ ನನಗೆ ಬಂದಿಲ್ಲ. ನಾನು ತಪ್ಪು ಮಾಡಿಲ್ಲ, ರಾಜೀನಾಮೆ ಕೊಡಲ್ಲ. ತಪ್ಪು ಮಾಡಿದ್ದರೆ ಬೇರೆಯವರು ಹೇಳುವ ಮೊದಲೇ ರಾಜೀನಾಮೆ ಕೊಟ್ಟಿರುತ್ತಿದ್ದೆ” ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಪ್ರತಿಪಕ್ಷಗಳ ರಾಜೀನಾಮೆ ಬೇಡಿಕೆಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಡವರಿಗೆ ಮನೆ ಹಂಚಿಕೆ ಮಾಡಲು ನಾನು ಹಣ ಪಡೆದಿರುವುದು ಸಾಬೀತು ಮಾಡಿದರೆ ಬೇರೆಯವರು ಕೇಳುವುದು ಬೇಡ ನಾನೇ ಸ್ವಯಂಪ್ರೇರಿತವಾಗಿ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಅಧಿಕಾರಕ್ಕೆ ಅಂಟಿಕೊಂಡು ಕೂರುವವನು ನಾನಲ್ಲ. ಹಿಂದೆ ಕುಮಾರಸ್ವಾಮಿ ಸರ್ಕಾರದಲ್ಲಿ ಮೊದಲ ಬಾರಿ ಸಚಿವನಾಗಿದ್ದಾಗ ಕುಮಾರಸ್ವಾಮಿ ಕಾರ್ಯಕ್ರಮವೊಂದಕ್ಕೆ ಬರಲಿಲ್ಲ ಎಂದು ಕೇವಲ ಆರು ತಿಂಗಳಿನಲ್ಲೇ ರಾಜೀನಾಮೆ ನೀಡಿದ್ದವನು ನಾನು. ನಾನು ತಪ್ಪು ಮಾಡದಿರುವಾಗ ರಾಜೀನಾಮೆ ಯಾಕೆ ನೀಡಬೇಕು ಎಂದರು.
ಬಡವರ ಮನೆಗೆ ಹಣ ಪಡೆಯುವುದು ಅಕ್ಷಮ್ಯ ಅಪರಾಧ. ಅದಕ್ಕೆ ನಮ್ಮ ಇಲಾಖೆಯಲ್ಲಿ ಅವಕಾಶ ಇಲ್ಲ. ಹಿರಿಯ ಶಾಸಕರಾದ ಬಿ.ಆರ್. ಪಾಟೀಲ್ ಅವರು ಮಾಡಿರುವ ಆರೋಪ ಸಂಬಂಧ ತನಿಖೆಗೆ ಆದೇಶಿಸಲಾಗುವುದು. ತನಿಖೆ ನಂತರ ಯಾರಾದರೂ ತಪ್ಪು ಮಾಡಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಿ.ಆರ್. ಪಾಟೀಲರ ಜತೆಯೂ ಮಾತನಾಡುತ್ತೇನೆ ಎಂದು ತಿಳಿಸಿದರು.
ಬಿ.ಆರ್. ಪಾಟೀಲ್ ಸಹ ಸಚಿವರು ಹಣ ಪಡೆದಿದ್ದಾರೆ ಎಂದು ಹೇಳಿಲ್ಲ. ಅಧಿಕಾರಿಗಳ ಹೆಸರೂ ಹೇಳಿಲ್ಲ. ಪಂಚಾಯಿತಿಯಲ್ಲಿ ಯಾರಾದರೂ ಹಣ ಪಡೆದಿದ್ದರೆ ಮಾಹಿತಿ ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಯವರಿಗೂ ಈ ವಿಚಾರದ ಬಗ್ಗೆ ಎಲ್ಲ ಮಾಹಿತಿ ತಿಳಿಸಿದ್ದೇನೆ. ನಾನು ಪ್ರವಾಸದಲ್ಲಿ ಇದ್ದ ಕಾರಣ ಮಾತನಾಡಲು ಸಾಧ್ಯವಾಗಿರಲಿಲ್ಲ. ಇದೀಗ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದುಕೊಂಡಿದ್ದೇನೆ ಎಂದರು.
ಸ್ವಪಕ್ಷದ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ರಾಜೀನಾಮೆಗೆ ಆಗ್ರಹ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರಿಗೆ ವಾಸ್ತವದ ಬಗ್ಗೆ ಮಾಹಿತಿ ಇಲ್ಲ. ಮನೆ ಹಂಚಿಕೆ ವಿಚಾರದಲ್ಲಿ ನಮ್ಮ ಪಾತ್ರವೇ ಇರುವುದಿಲ್ಲ. ಫಲಾನುಭವಿ ಆಯ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತದೆ. ಶಾಸಕರ ಪತ್ರದ ಆಧಾರದಲ್ಲೇ ಮನೆ ಹಂಚಿಕೆ ಮಾಡಲಾಗುವುದು. ಆಳಂದ ಕ್ಷೇತ್ರಕ್ಕೂ ಬಿ.ಆರ್. ಪಾಟೀಲ್ ಅವರ ಪತ್ರದ ಆಧಾರದಲ್ಲೇ ನೀಡಲಾಗಿದೆ. 950 ಮನೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
Related Articles
                            Thank you for your comment. It is awaiting moderation.
                        
                                        
                    
                    
                 
                            
                                            
 
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                    
Comments (0)