ಆಯಾ ಇಲಾಖೆಗಳಲ್ಲಿ‌ ಸಚಿವರೇ ರೇಟ್ ಫಿಕ್ಸ್ ಮಾಡಿಕೊಂಡಿದ್ದಾರೆ; ಕುಮಾರಸ್ವಾಮಿ

ಬೆಂಗಳೂರು: “ವಿಧಾನಸೌಧದಲ್ಲಿ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ. ಸಚಿವರುಗಳೇ ಎಲ್ಲ ಶುರು ಮಾಡಿಕೊಂಡಿದ್ದಾರೆ. ಆಯಾ ಇಲಾಖೆಗಳಲ್ಲಿ ಅವರೇ ರೇಟ್ ಫಿಕ್ಸ್ ಮಾಡಿಕೊಂಡಿದ್ದಾರೆ! ಎಷ್ಟು ಕೊಡಬೇಕು ಅಂತ ರೇಟ್ ಕಾರ್ಡ್ ಇದೆ” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಮಂಡ್ಯದಲ್ಲಿ ಸುಸಜ್ಜಿತ ಆಟೋ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ವಸತಿ ಇಲಾಖೆಯಲ್ಲಿ ಕೇಳಿ ಬರುತ್ತಿರುವ ಆಕ್ರಮಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಸಚಿವ ಎಚ್.ಕೆ. ಪಾಟೀಲ್ ಬರೆದಿರುವ ಪತ್ರವನ್ನು ತೇಲಿ ಬಿಡಲಾಗಿದೆ. ವಸತಿ ಇಲಾಖೆಯಲ್ಲಿ ಏನೆಲ್ಲ ಅಕ್ರಮಗಳು ನಡೆದಿವೆ ಎಂಬುದನ್ನು ಜನರು ಹಾದಿಬೀದಿಗಳಲ್ಲಿ ಮಾತನಾಡುತ್ತಿದ್ದಾರೆ. ಹಣ ಕೊಟ್ಟವರಿಗೆ ಮನೆ ಹಂಚಿಕೆ ಮಾಡಲಾಗಿದೆ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರು, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರ ಆಡಿಯೋದಲ್ಲಿ ಏನಿದೆ ಎಂಬುದನ್ನು ಎಲ್ಲರೂ ಕೇಳಿದ್ದಾರೆ ಎಂದರು.

ಬಡಜನರಿಂದಲೇ ವಸತಿ ಇಲಾಖೆಯಲ್ಲಿ ಸುಲಿಗೆ ಮಾಡಲಾಗುತ್ತಿದೆ. ಎಲ್ಲ ಇಲಾಖೆಯಲ್ಲೂ ಇದು ನಡೆಯುತ್ತಿದೆ. ಈ ಸರ್ಕಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಮುಂದಿನ ಚುನಾವಣೆ ಬರುವವರೆಗೆ ಕಾಯಬೇಕು‌ ಅಷ್ಟೆ. ಸರ್ಕಾರ ಬಹುತೇಕ ಎಲ್ಲ ಇಲಾಖೆಗಳಲ್ಲಿ ದುಡ್ಡು ಬಿಡುಗಡೆ ಆಗಲು ಸ್ವತಃ ಆಡಳಿತ ಪಕ್ಷ ಶಾಸಕರು ಸೇರಿ ಎಲ್ಲ ಪಕ್ಷಗಳ ಶಾಸಕರು ಹಣ ಕೊಡಬೇಕಿದೆ. ಕೆಲ ಶಾಸಕರು ನಿಮ್ಮದೊಂದು ಲೆಟರ್ ಕೊಡಿ‌ ಸರ್, ದುಡ್ಡು ತಗೊಂಡು ಬರ್ತೀವಿ ಅಂತಾರೆ. ಹೆಸರಿಗೆ ಶಾಸಕರ ಪಾತ್ರವಷ್ಟೇ. ಮಿಕ್ಕಿದ್ದೆಲ್ಲವನ್ನೂ ಮಧ್ಯವರ್ತಿಗಳು ನೋಡಿಕೊಳ್ಳುತ್ತಾರೆ. ಮಧ್ಯವರ್ತಿಗಳು ದುಡ್ಡು ಕೊಟ್ಟು ಹಣ ತರುತ್ತಾರೆ. ಇದು ರಾಜ್ಯದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಅತ್ಯಂತ ಕೆಟ್ಟ ವ್ಯವಸ್ಥೆಯಾಗಿದೆ ಎಂದು ಟೀಕಿಸಿದರು.

2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಾರಂತೆ! ಡಿಕೆಶಿ ಏನಿದ್ದರೂ ಕನಸು ಕಾಣಬೇಕು ಅಷ್ಟೇ. ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಯಾರು ಬಿಟ್ಟು ಕೊಡ್ತಾರೆ ಎಂಬುದನ್ನು ನೋಡೋಣ. ನಮ್ಮ ಕೈಯಲ್ಲಿ ಏನೂ ಇಲ್ಲ, ಎಲ್ಲ ಭಗವಂತನ ಕೈಯಲ್ಲಿ ಇದೆ. ನೋಡೋಣ, ಏನಾಗುತ್ತದೋ ಎಂದು ಮಾರ್ಮಿಕವಾಗಿ ಹೇಳಿದರು.

ಮಂಡ್ಯದ ಮೈಶುಗರ್ ಶಾಲೆಯನ್ನು ಕಾಂಗ್ರೆಸ್ ಮುಖಂಡನ ವಿದ್ಯಾಸಂಸ್ಥೆಗೆ ಗುತ್ತಿಗೆಗೆ ನೀಡುವ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮೈಶುಗರ್ ಸ್ಕೂಲ್‌ ಅನ್ನು ಮಾದರಿ ಶಾಲೆ ಮಾಡಲು ನಾನು ತಯಾರಿದ್ದೇನೆ. ಈ ಬಗ್ಗೆ ಶಾಲೆಯ ಟ್ರಸ್ಟಿಗಳಿಗೆ ಹೇಳಿದ್ದೇನೆ. ಅದನ್ನು ಉಪಯೋಗಿಸಿಕೊಳ್ಳುವುದು ಬಿಡುವುದು ಅವರಿಗೆ ಸೇರಿದ್ದು. ಇಂತಹ ಆಸ್ತಿಯನ್ನು ಗುತ್ತಿಗೆ ಮೇಲೆ ಕೊಡುವುದು ಎಂದರೆ ಹೇಗೆ? ಇದು ಹಗಲು ದರೋಡೆ ಆಗಿದೆ. ಮೈಶುಗರ್ ಶಾಲೆ ಅಭಿವೃದ್ಧಿಗೆ ₹25 ಕೋಟಿ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ಕೊಡಲು ತಯಾರಿದ್ದೇನೆ. ಗುತ್ತಿಗೆ ನೀಡುವ ಆಲೋಚನೆ ಸರಿ ಅಲ್ಲ ಎಂದು ಸಚಿವರು ಹೇಳಿದರು.

Related Articles

Comments (0)

Leave a Comment