ಎತ್ತಿನಹೊಳೆ ಯೋಜನೆ; ಸರ್ಕಾರಿ ಜಾಗದಲ್ಲಿ ಗ್ರಾಮಗಳ ಪುನರ್ವಸತಿ
- by Suddi Team
- June 21, 2025
- 68 Views

ದೊಡ್ಡಬಳ್ಳಾಪುರ: “ಎತ್ತಿನಹೊಳೆ ಯೋಜನೆ ಸಂಬಂಧ ಅಸ್ತಿತ್ವ ಕಳೆದುಕೊಳ್ಳಲಿರುವ ದೊಡ್ಡಬಳ್ಳಾಪುರದ ಗ್ರಾಮಗಳ ಪುನರ್ವಸತಿ ಬಗ್ಗೆ ಚಿಂತನೆ ಇದ್ದು, ಸರ್ಕಾರಿ ಜಾಗದಲ್ಲಿ ಗ್ರಾಮಗಳ ಪುನರ್ವಸತಿ ಕಲ್ಪಿಸುವ ಬಗ್ಗೆ ಆಲೋಚನೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಎತ್ತಿನಹೊಳೆ ಯೋಜನೆ ಸಂಬಂಧ ದೊಡ್ಡಬಳ್ಳಾಪುರ ತಾಲೂಕಿನ ಲಕ್ಕೇನಹಳ್ಳಿಯಲ್ಲಿ ಶನಿವಾರ ಉದ್ದೇಶಿತ ಜಲಾಶಯ ಸ್ಥಳ ಪರಿಶೀಲಿಸಿದ ನಂತರ ಸ್ಥಳೀಯ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, “ಎತ್ತಿನಹೊಳೆ ಯೋಜನೆಯಲ್ಲಿ ಮೊದಲು ಕುಡಿಯಲು 14 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಇತರ ತಾಲೂಕಿಗೆ ನೀಡಬೇಕು. ಇದಾದ ನಂತರವೇ ಕೆರೆ ತುಂಬಿಸಲಾಗುವುದು ಎಂದರು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈ ಸಮತೋಲಿತ ಜಲಾಶಯ ನಿರ್ಮಾಣವಾಗುತ್ತಿದ್ದು, ನಿಮ್ಮ ತಾಲೂಕಿಗೆ ವಿಶೇಷ ಆದ್ಯತೆ ನೀಡಲಾಗುವುದು. ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು. ಬೆಂಗಳೂರು ಸುತ್ತಮುತ್ತಲ ಐದಾರು ಜಿಲ್ಲೆಗೆ ನೀರು ಒದಗಿಸಲು ನೀವು ಸಹಕಾರ ನೀಡುತ್ತಿದ್ದು, ನಿಮಗೆ ಎಷ್ಟು ಸಾಧ್ಯವೋ ಅಷ್ಟು ಪರಿಹಾರ ನೀಡಲಾಗುವುದು. ನಿಮ್ಮ ಮನವಿಯಂತೆ ಸರ್ಕಾರಿ ಜಾಗದಲ್ಲಿ ಗ್ರಾಮಗಳ ಪುನರ್ವಸತಿ ಕಲ್ಪಿಸುವ ಬಗ್ಗೆ ಆಲೋಚನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹೊಸ ತಂತ್ರಜ್ಞಾನದ ಮೂಲಕ ದುರ್ವಾಸನೆ ಮುಕ್ತ ಕಸ ವಿಲೇವಾರಿ ಕೇಂದ್ರ:
ಇನ್ನು ಕಸದ ವಿಚಾರವಾಗಿ ನೀವು ಪ್ರಸ್ತಾಪ ಮಾಡಿದ್ದೀರಿ. ಕಸ ವಿಲೇವಾರಿಗೆ ಸಂಬಂಧಿಸಿದಂತೆ ದೆಹಲಿ, ಚೆನ್ನೈ, ಹೈದರಾಬಾದ್ ನಲ್ಲಿ ಅಧ್ಯಯನ ಮಾಡಿದ್ದೇವೆ. ಹೊಸ ಮಾದರಿಯಲ್ಲಿ ಒಂದು ದಿನದಲ್ಲಿ ಬಂದ ಕಸವನ್ನು ಮೂರು ದಿನಗಳಲ್ಲಿ ಖಾಲಿ ಮಾಡುವಂತೆ ಸುಡಲಾಗುವುದು. ಈಗಿನಂತೆ ಕಸವನ್ನು ತಂದು ಸುರಿಯುವುದಿಲ್ಲ. ಈ ಕಸದಿಂದ ವಿದ್ಯುತ್ ಹಾಗೂ ಅನಿಲ ಉತ್ಪಾದನೆ ಮಾಡಲಾಗುವುದು ಎಂದರು.
ಕಸ ವಿಲೇವಾರಿ ಮಾಡುವ 10 ಎಕರೆ ಜಾಗದ ಒಳಗೆ ಎಲ್ಲ ಕಸವನ್ನು ವಿಲೇವಾರಿ ಮಾಡಲಾಗುವುದು. ನೂತನ ಮಾದರಿಯಲ್ಲಿ ಯಾವುದೇ ರೀತಿಯ ದುರ್ವಾಸನೆ ಬಾರದಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು. ರಾಜ್ಯದಲ್ಲಿ ಈ ಕಸ ಸಮಸ್ಯೆಯನ್ನು ನಿವಾರಣೆ ಮಾಡಲಾಗುವುದು ಎಂದು ಹೇಳಿದರು.
ಬೆಂಗಳೂರು ನಗರ ಸೇರಿ ಗುಡ್ಡಗಳ ಪಕ್ಕ ಖಾಸಗಿ ಜಮೀನು ಕೊಟ್ಟರೆ, ಅದನ್ನು ಖರೀದಿ ಮಾಡಿ ಕಸ ವಿಲೇವಾರಿ ಮಾಡಲಾಗುವುದು. ಬೆಂಗಳೂರು ನಗರದಲ್ಲೇ ಇದರ ಮೊದಲ ಪ್ರಯೋಗ ಮಾಡುತ್ತೇವೆ. ದುರ್ವಾಸನೆ ಮುಕ್ತ ಕಸ ವಿಲೇವಾರಿ ಕೇಂದ್ರ ನಗರದಲ್ಲಿ ಬಂದರೆ, ಆಗ ಈ ಕಸ ವಿಲೇವಾರಿ ಕೇಂದ್ರಗಳಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ನಿಮಗೂ ಅರಿವಾಗುತ್ತದೆ. ಇನ್ನು ಮಳೆ ಬಂದಾಗ ಕೊಳಚೆ ನೀರು ಹರಿಯದಂತೆ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವಾಗಿ ಮತ್ತೊಂದು ದಿನ ಇಲ್ಲಿಗೆ ಬಂದು ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
Related Articles
Thank you for your comment. It is awaiting moderation.
Comments (0)