ಈಶ್ವರಪ್ಪ ಬಿಜೆಪಿ ಮರು ಸೇರ್ಪಡೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ; ಬಿ‌.ವೈ. ವಿಜಯೇಂದ್ರ

ಬೆಂಗಳೂರು: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ. ಈಶ್ವರಪ್ಪ ಅವರ ವಿಚಾರದಲ್ಲಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥಭವನದಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತ‌ನಾಡಿದ ಅವರು, ಕೆ.ಎಸ್.ಈಶ್ವರಪ್ಪ ಅವರ ಮರುಸೇರ್ಪಡೆ ಕುರಿತು ರಾಜ್ಯಮಟ್ಟ ಅಥವಾ ಕೇಂದ್ರ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ಅಮಿತ್ ಶಾ ರಾಜ್ಯ ಭೇಟಿಯ ಸಂದರ್ಭದಲ್ಲಿಯೂ ಇಂತಹ ಯಾವುದೇ ಚರ್ಚೆಗಳು ನಡೆದಿಲ್ಲ. ನಾನು ಮತ್ತು ಪಕ್ಷದ ಕೆಲ ಹಿರಿಯ ಮುಖಂಡರು ನಿನ್ನೆ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸುಮಾರು 20-25 ನಿಮಿಷಗಳ ಕಾಲ ಸುದೀರ್ಘವಾಗಿ ರಾಜ್ಯ ರಾಜಕಾರಣ, ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಿದ್ದೇವೆ. ಆದರೆ, ಈಶ್ವರಪ್ಪ ವಿಷಯ ಚರ್ಚೆಗೆ ಬಂದಿಲ್ಲ ಎಂದು ತಿಳಿಸಿದರು.

ರಾಜ್ಯಾಧ್ಯಕ್ಷರ ಹುದ್ದೆ ಕುರಿತು ಪಕ್ಷ ಸದ್ಯವೇ ನಿರ್ಧರಿಸುವ ವಿಶ್ವಾಸವಿದೆ. ನಮ್ಮದು ರಾಷ್ಟ್ರೀಯ ಪಕ್ಷ. ಎಲ್ಲ ಜಿಲ್ಲಾಧ್ಯಕ್ಷರ ಅಭಿಪ್ರಾಯ ಪಡೆದು, ಪಕ್ಷದ ಮುಖಂಡರ ಅಭಿಮತ ಪಡೆದುಕೊಂಡು ಅಂತಿಮವಾಗಿ ಯಾರನ್ನು ಮಾಡಿದರೆ ಒಳ್ಳೆಯದು ಎಂಬ ಕುರಿತ ಅಂತಿಮ ನಿರ್ಧಾರ ಸದ್ಯವೇ ಆಗುವ ವಿಶ್ವಾಸವಿದೆ. ನಾನು ಕಳೆದ ಒಂದೂ ಕಾಲು ವರ್ಷದಿಂದ ಕೊಟ್ಟಿರುವ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತನಾಗಿ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದೇನೆ ಎಂಬ ಅನಿಸಿಕೆ ನನ್ನದು. ಕೇಂದ್ರ ಮತ್ತು ರಾಷ್ಟ್ರೀಯ ನಾಯಕರಿಗೆ ಕೊಡಬೇಕಾದ ಮಾಹಿತಿಯನ್ನು ಕೊಡುತ್ತ ಬಂದಿದ್ದೇನೆ ಎಂದರು.

Related Articles

Comments (0)

Leave a Comment