ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟಿಸಿದ ಅಮಿತ್ ಶಾ
- by Suddi Team
- June 20, 2025
- 64 Views

ಬೆಂಗಳೂರು: ಆದಿಚುಂಚನಗಿರಿ ಮಠ ಕೇವಲ ವ್ಯಕ್ತಿಯ ಆತ್ಮೋನ್ನತಿಗೆ ಮಾತ್ರವಲ್ಲದೆ, ಸಮಾಜದ ಆತ್ಮವನ್ನೂ ಜಾಗೃತಗೊಳಿಸಲು ಸಮರ್ಪಿತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಆದಿಚುಂಚನಗಿರಿ ವಿಶ್ವವಿದ್ಯಾಲಯದ (ಎಸಿಯು) ಬೆಂಗಳೂರು ಕ್ಯಾಂಪಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, 16 ಎಕರೆ ಜಾಗದಲ್ಲಿ ₹200 ಕೋಟಿ ವೆಚ್ಚದಲ್ಲಿ 20 ಲಕ್ಷ ಚದರ ಅಡಿ ವಿಸ್ತೀರ್ಣದ ಕ್ಯಾಂಪಸ್ ನಿರ್ಮಿಸಲಾಗಿದ್ದು, ಇದು 4 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಿದೆ. 1 ಸಾವಿರ ಹಾಸಿಗೆಗಳ ಸಾಮರ್ಥ್ಯದ ಈ ಆಧುನಿಕ ಆಸ್ಪತ್ರೆ ಎಲ್ಲ ಆರೋಗ್ಯ ಸೌಲಭ್ಯಗಳನ್ನೂ ಹೊಂದಿದ್ದು, ಬಡವರಿಗೆ ಉಚಿತ ಮತ್ತು ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವುದರ ಜತೆಗೆ ಶಿಕ್ಷಣವನ್ನೂ ಒದಗಿಸುವ ಮೂಲಕ ನಿಜಕ್ಕೂ ಒಂದು ದೊಡ್ಡ ಸೇವಾ ಮಾಧ್ಯಮವಾಗಲಿದೆ ಎಂದು ಹೇಳಿದರು.
ಆದಿಚುಂಚನಗಿರಿ ಮಠ ಕೇವಲ ವ್ಯಕ್ತಿಯ ಆತ್ಮೋನ್ನತಿಗೆ ಮಾತ್ರವಲ್ಲದೆ ಸಮಾಜದ ಆತ್ಮವನ್ನು ಜಾಗೃತಗೊಳಿಸಲು ಸಮರ್ಪಿತವಾಗಿದೆ. ಮಹಾಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಉಚಿತ ವಸತಿಯೊಂದಿಗೆ ಶಿಕ್ಷಣ ನೀಡಿ, ಅವರು ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಪಡೆಯಲು ಅನುವು ಮಾಡಿಕೊಟ್ಟಿದ್ದಾರೆ. ಇದರ ಜತೆಗೆ, ಅನಾಥರು, ಹಿರಿಯ ನಾಗರಿಕರು ಮತ್ತು ಮಾನಸಿಕ ಅಸ್ವಸ್ಥರ ಕಲ್ಯಾಣಕ್ಕಾಗಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಈ ಪರಂಪರೆಯನ್ನು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮುಂದುವರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಹೊಸ ದಿಕ್ಕನ್ನು ನೀಡುವುದರ ಜತೆಗೆ, ಭಾರತದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಇಲ್ಲಿರುವ 1,500 ಹಾಸಿಗೆಗಳ ಆಸ್ಪತ್ರೆಯು ಸಂಶೋಧನಾ ಕೇಂದ್ರಗಳು, ಹೃದ್ರೋಗ, ನರಶಸ್ತ್ರಚಿಕಿತ್ಸೆ, ಅಂಕಾಲಜಿ ಮತ್ತು ಮೂತ್ರಪಿಂಡ, ಯಕೃತ್ ಹಾಗೂ ಕಾರ್ನಿಯಾ ಕಸಿ ಸೇರಿ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಮತ್ತು ಬಡವರಿಗೆ ಉಚಿತವಾಗಿ ನೀಡುತ್ತಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಮ್ಮೆ “ಬಡತನಕ್ಕೆ ದೊಡ್ಡ ಸಮಸ್ಯೆಯೆಂದರೆ ಅನಾರೋಗ್ಯ ಮತ್ತು ಅನಾರೋಗ್ಯ ಮುಂದುವರಿಯಲು ಪ್ರಮುಖ ಕಾರಣ ಚಿಕಿತ್ಸೆಯ ವೆಚ್ಚ” ಎಂದು ಹೇಳಿದ್ದರು. ಬಡವರ ಚಿಕಿತ್ಸೆಗೆ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದ್ದರು. ಪ್ರಧಾನಮಂತ್ರಿಯಾದ ನಂತರ ಮೋದಿ ಆ ಬದ್ಧತೆಯನ್ನು ಈಡೇರಿಸಿದ್ದಾರೆ. ಇಂದು ಭಾರತ ಸರ್ಕಾರ 60 ಕೋಟಿ ಬಡ ಮತ್ತು ಅಗತ್ಯವುಳ್ಳ ಜನರಿಗೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ ಒದಗಿಸುತ್ತಿದೆ ಎಂದರು.
ಪ್ರಧಾನಮಂತ್ರಿಗಳು ದೇಶದ ಆರೋಗ್ಯ ಸಮಸ್ಯೆಗಳನ್ನು ಸಮಗ್ರ ದೃಷ್ಟಿಕೋನದಿಂದ ಪರಿಹರಿಸಿದ್ದಾರೆ. ಸುಮಾರು 12 ಕೋಟಿ ಶೌಚಗೃಹಗಳನ್ನು ಮನೆಗಳಲ್ಲಿ ಪ್ರಾರಂಭಿಸಲಾಯಿತು. ಫಿಟ್ ಇಂಡಿಯಾ ಆಂದೋಲನ, ಅಂತಾರಾಷ್ಟ್ರೀಯ ಯೋಗ ದಿನವನ್ನು ಆರಂಭಿಸಲಾಯಿತು. ಮಿಷನ್ ಇಂದ್ರಧನುಷ್ ಅಡಿಯಲ್ಲಿ ಹುಟ್ಟಿನಿಂದ 15 ವರ್ಷದೊಳಗಿನ ಮಕ್ಕಳಿಗೆ ಉಚಿತ ಲಸಿಕೆ ವ್ಯವಸ್ಥೆ ಮಾಡಲಾಗಿದೆ. ಪೋಷಣ್ ಅಭಿಯಾನದ ಮೂಲಕ ತಾಯಂದಿರ ಮತ್ತು ಮಕ್ಕಳ ಪೋಷಣೆಯ ಬಗ್ಗೆ ಕಾಳಜಿ ವಹಿಸಿ, ಆರೋಗ್ಯವಂತ ನಾಗರಿಕರನ್ನು ನಿರ್ಮಿಸಲು ದಾರಿ ಮಾಡಿಕೊಡಲಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಜನೌಷಧಿ ಯೋಜನೆಯಡಿ, ಎಲ್ಲ ಔಷಧಿಗಳನ್ನು 15 ಸಾವಿರ ಸ್ಥಳಗಳಲ್ಲಿ ಮಾರುಕಟ್ಟೆ ಬೆಲೆಯ ಶೇ. 20 ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ದೇಶದಲ್ಲಿ ವೈದ್ಯರ ಸಂಖ್ಯೆಯನ್ನು ಹೆಚ್ಚಿಸಲು ಪ್ರಧಾನಮಂತ್ರಿಗಳು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. 2014ರಲ್ಲಿ ದೇಶದಲ್ಲಿ 7 ಏಮ್ಸ್ (AIIMS) ಇದ್ದವು. ಇಂದು 23 ಏಮ್ಸ್ ಇವೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 387 ರಿಂದ 780ಕ್ಕೆ ಏರಿದೆ, ಎಂಬಿಬಿಎಸ್ ಸೀಟುಗಳು 51,000ರಿಂದ 1,18,000ಕ್ಕೆ ಹೆಚ್ಚಾಗಿವೆ ಮತ್ತು ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಸಂಖ್ಯೆ 31,000ರಿಂದ 74,000ಕ್ಕೆ ಏರಿದೆ ಎಂದು ಅವರು ತಿಳಿಸಿದರು.
Related Articles
Thank you for your comment. It is awaiting moderation.
Comments (0)