ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದ ಮೀಸಲಾತಿ ಹೆಚ್ಚಳ; ಕೈ-ಕಮಲದ ನಡುವೆ ವಾಕ್ಸಮರ
- by Suddi Team
- June 19, 2025
- 138 Views
ಬೆಂಗಳೂರು: ನಗರ ಪ್ರದೇಶಗಳಲ್ಲಿನ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಈಗಿರುವ ಶೇ.10ರಿಂದ ಶೇ.15ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಇದು ರಾಜ್ಯದಲ್ಲಿ ಮತ್ತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆ ಸೃಷ್ಟಿಸಿದಂತಾಗಿದೆ. ಸಂಪುಟದ ನಿರ್ಧಾರವನ್ನು ಕಾಂಗ್ರೆಸ್ ಸಮರ್ಥಿಸಿಕೊಂಡರೆ, ಬಿಜೆಪಿ ಸಂವಿಧಾನ ವಿರೋಧಿ ನಿಲುವಾಗಿದೆ ಎಂದು ಟೀಕಿಸಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಸತಿ ಇಲಾಖೆಯಡಿ ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಇಲಾಖೆ ಅನುಷ್ಠಾನಗೊಳಿಸಲಾಗುವ ವಿವಿಧ ವಸತಿ ಯೋಜನೆಗಳಡಿ ಅಲ್ಪಸಂಖ್ಯಾತ ಸಮುದಾಯದವರಿಗೆ ನಿಗದಿ ಪಡಿಸಿರುವ ಶೇ.10 ರ ಮೀಸಲಾತಿಯನ್ನು ಶೇ.15ಕ್ಕೆ ಹೆಚ್ಚಿಸಲು ನಿರ್ಣಯ ಮಾಡಲಾಗಿದೆ. ನಮ್ಮ ಸರ್ಕಾರ ಈ ಸಮುದಾಯದವರ ವಸತಿರಹಿತರನ್ನು ಹಾಗೂ ಸಾಮಾಜಿಕ ನ್ಯಾಯವನ್ನು ಗಮನದಲ್ಲಿರಿಸಿಕೊಂಡು ಮೀಸಲಾತಿ ಹೆಚ್ಚಿಸಲಾಗಿದೆ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ.
ಆದರೆ, ಸಂಪುಟದ ಈ ನಿರ್ಧಾರವನ್ನು ಬಿಜೆಪಿ ವಿರೋಧಿಸಿದೆ. ವಸತಿ ಯೋಜನೆಯಲ್ಲಿ ಮುಸ್ಲಿಮರ ಮೀಸಲು ಹೆಚ್ಚಳ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಈ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಹಕ್ಕನ್ನು ಕಸಿದಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಇದನ್ನು ಹೀಗೆಯೇ ಮುಂದುವರಿದರೆ ಸಿದ್ದರಾಮಯ್ಯ ಕೇವಲ ಮುಸ್ಲಿಂ ಸಮುದಾಯಕ್ಕೆ ಮೀಸಲಾದ ಮುಖ್ಯಮಂತ್ರಿಯಾಗುತ್ತಾರೆ. ಈ ಹಿಂದೆಯೇ ಮೀಸಲು ಹೆಚ್ಚಳಕ್ಕೆ ಮಾನ್ಯತೆ ಸಿಕ್ಕಿಲ್ಲ. ಈಗ ಹೊಸ ರೀತಿಯ ಮೀಸಲು ತಂದಿದ್ದಾರೆ. ಅಕ್ಟೋಬರ್ನಲ್ಲಿ ಕುರ್ಚಿ ಬಿಟ್ಟುಕೊಡಬೇಕೆಂಬ ಕಾರಣಕ್ಕಾಗಿ ಹೀಗೆ ಮಾಡಿದ್ದಾರೆ. ಮುಸ್ಲಿಮರೆಲ್ಲರೂ ಅವರ ಜತೆ ಬರಬೇಕೆಂದು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದರು.
ಹಿಂದೆ ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ. 4 ಮೀಸಲಾತಿ ನೀಡಿದ ನಂತರ ಈಗ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಶೇ. 10ರಿಂದ ಶೇ. 15ಕ್ಕೆ ಹೆಚ್ಚಿಸಲು ಹೊರಟಿದೆ ಎಂದು ಟೀಕಿಸಿದರು.
ಬಿಜೆಪಿ ಟೀಕೆಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿಕೆ ಶಿವಕುಮಾರ್, ವಸತಿ ಇಲಾಖೆಯಿಂದ ನಗರ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ವಸತಿಗಳು ಹೆಚ್ಚಾಗಿ ಖಾಲಿ ಇದ್ದು, ಅಲ್ಪಸಂಖ್ಯಾತರು ಈ ಮನೆಗಳಿಗೆ ಹೋಗಲು ಮುಂದಾಗಿದ್ದಾರೆ. ಹೀಗಾಗಿ, ಅವರಿಗೆ ನೀಡಲಾಗಿದ್ದ ವಸತಿ ಹಂಚಿಕೆ ಮೀಸಲಾತಿಯನ್ನು ಶೇ. 10 ರಿಂದ 15 ಕ್ಕೆ ಏರಿಕೆ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಯಾರು ಏನಾದರೂ ಹೇಳಿಕೊಳ್ಳಲಿ. ನಾವು ಬಡ ವರ್ಗದ ಜನರಿಗೆ ನೆರವು ನೀಡುತ್ತಿದ್ದೇವೆ. ಈ ಮನೆಗಳಿಗೆ ಯಾರೂ ಅರ್ಜಿ ಹಾಕದೇ ಇದ್ದಾಗ ನಾವು ಏನು ಮಾಡಬೇಕು? ಮನೆಯನ್ನು ಹಾಗೇ ಖಾಲಿ ಬಿಡಬೇಕೇ? ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
Related Articles
Thank you for your comment. It is awaiting moderation.


Comments (0)